ಬಗರ್ ಹುಕುಂ ಮಂಜೂರಾತಿ; ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಅರಕಲವಾಡಿ ಗ್ರಾಮಸ್ಥರ ಮನವಿ

KannadaprabhaNewsNetwork | Published : Aug 20, 2024 1:00 AM

ಸಾರಾಂಶ

ಬಗರ್ ಹುಕುಂ ಸಾಗುವಳಿ ಮಂಜೂರಾತಿ ಮಾಡಿಸಿಕೊಡುವಂತೆ ತಾಲೂಕಿನ ಅರಕಲವಾಡಿ ಗ್ರಾಮಸ್ಥರು ಮುಖಂಡ ಜವರಯ್ಯ ಅವರ ನೇತೃತ್ವದಲ್ಲಿ ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಮನವಿ ಸಲ್ಲಿಸಿದರು.

40 ವರ್ಷ ಉಳುಮೆ ಮಾಡುತ್ತಿದ್ದರೂ ಸಾಗುವಳಿ ಚೀಟಿ ನೀಡಿಲ್ಲ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಗರ್ ಹುಕುಂ ಸಾಗುವಳಿ ಮಂಜೂರಾತಿ ಮಾಡಿಸಿಕೊಡುವಂತೆ ತಾಲೂಕಿನ ಅರಕಲವಾಡಿ ಗ್ರಾಮಸ್ಥರು ಮುಖಂಡ ಜವರಯ್ಯ ಅವರ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಹರದನಹಳ್ಳಿ ಹೋಬಳಿಯ ಅರಕಲವಾಡಿ ಮತ್ತು ಮಂಚಗುಂಡಿಪುರ ಗ್ರಾಮದಲ್ಲಿ ವಾಸವಾಗಿರುವ ಹಿಂದುಳಿದ ವರ್ಗ ಮತ್ತು. ಪರಿಶಿಷ್ಟ ಜಾತಿಯ ಕೃಷಿ ಕಾರ್ಮಿಕರಾದ ನಾವು ಸರ್ವೆ ನಂ. 45 ರಲ್ಲಿ ತಲಾ 2-3 ಎಕರೆಯಂತೆ ಸುಮಾರು 30-40 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಇದೇ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸಿಕೊಂಡು ಬಂದಿರುತ್ತೇವೆ. ಬಗರ್ ಹುಕುಂ ಜಮೀನುಗಳನ್ನು ಸಕ್ರಮಗೊಳಿಸಿ ಸಾಗುವಳಿ ಮಂಜೂರು ಮಾಡಿಕೊಡಬೇಕೆಂದು 1991 ರಲ್ಲಿ ನಮೂನೆ 50 ಮತ್ತು 57 ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದು, ಸುಮಾರು 40 ವರ್ಷಗಳಾದರೂ ಸಹ ಸಾಗುವಳಿ ಚೀಟಿ ನೀಡಿರುವುದಿಲ್ಲ. ಎಂದು ದೂರಿದರು.

ಉಲ್ಲೇಖ (1) ರಲ್ಲಿ ಈ ಜಮೀನುಗಳಿಗೆ ಬಗ‌ರ್ ಹುಕುಂ ಸಕ್ರಮಗೊಳಿಸುವ ತಾಲೂಕು ಸಮಿತಿಯವರು ಮಂಜೂರಾತಿ ನೀಡಿ, ಆಕ್ಷೇಪಣೆ ಸಲ್ಲಿಸಲು ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಿರುತ್ತಾರೆ. ಯಾವುದೇ ಆಕ್ಷೇಪಣೆ ಇಲ್ಲದ್ದರಿಂದ ಯಾರೂ ತಕರಾರುಗಳನ್ನು ಸಲ್ಲಿಸಿರುವುದಿಲ್ಲ. ಆದರೂ ಸಹ ಉಲ್ಲೇಖ (1) ರ ಆಯ್ಕೆ ಸಮಿತಿ ತೀರ್ಮಾನದಂತೆ ನಮ್ಮ ಜಮೀನುಗಳಿಗೆ ಸಾಗುವಳಿ ಮಂಜೂರಾತಿ ಚೀಟಿಯನ್ನು ನೀಡಿಲ್ಲ. ನಾವು ಮತ್ತು ನಮ್ಮ ಹಿರಿಯರು ಸಲ್ಲಿಸಿರುವ ಅರ್ಜಿದಾರರಲ್ಲಿ ಕೆಲವರು ಮರಣ ಹೊಂದಿರುತ್ತಾರೆ. ತಾಲೂಕು ಕಚೇರಿಗೆ ಹಲವಾರು ಬಾರಿ ಭೇಟಿ ನೀಡಿದರೂ ತಹಸೀಲ್ದಾರ್ ಅವರು ಅರ್ಜಿ ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ನಮ್ಮ ಜಮೀನುಗಳನ್ನು ಬಗರ್‌ಹುಕುಂ ಸಕ್ರಮಗೊಳಿಸಲು ಪೂರ್ವಭಾವಿಯಾಗಿ ಡೆಪ್ಯುಟಿ ತಹಸೀಲ್ದಾರ್ ರಾಗಲಿ, ರಾಜಸ್ವ ನಿರೀಕ್ಷಕರಾಗಲಿ ಸ್ಥಳ ಪರಿಶೀಲಿಸಿ, ಮಹಜರ್‌ ಮಾಡಿ ಇರುವ ತೊಂದರೆಗಳ ಬಗ್ಗೆ ನಮಗೆ ಯಾರಿಗೂ ನೋಟಿಸ್ ನೀಡಿಲ್ಲ ಹಾಗೂ ವಾಸ್ತವ ಪರಿಸ್ಥಿತಿ ಬಗ್ಗೆ ನಮಗೆ ಯಾವುದೇ ಮಾಹಿತಿಯನ್ನು ನೀಡದೇ ಏಕಾಏಕಿ ತಮಗೆ ವರದಿ ಸಲ್ಲಿಸಿ, ನಮಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಜಮೀನಿನ ಹಕ್ಕುಪತ್ರವನ್ನು ಕೊಡಿಸದೇ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.

ತಾವು ನಮ್ಮ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲಿಸಿ, ಕಾಡು ಪ್ರಾಣಿಗಳ ಉಪಟಳದಿಂದ ಉಂಟಾಗುತ್ತಿರುವ ಬೆಳೆ ನಾಶದ ಬಗ್ಗೆ ವಾಸ್ತವತೆಯನ್ನು ಮನಗಂಡು ಅಧಿಕೃತ ಜ್ಞಾಪನಾ ಪತ್ರದಲ್ಲಿ ಬಗರ್ ಹುಕುಂ ಜಮೀನುಗಳಿಗೆ ಸಾಗುವಳಿ ಮಂಜೂರು ಮಾಡದೇ ಕೇವಲ ಸಣ್ಣ ಕಾರಣವನ್ನು ನೀಡಿ ತಿರಸ್ಕರಿಸಿರುವುದನ್ನು ರದ್ದುಪಡಿಸಿ, ಮರು ಮಂಜೂರಾತಿಗೆ ಪರಿಗಣಿಸಿ ಸಾಗುವಳಿ ಚೀಟಿ ನೀಡಲು ತಹಸೀಲ್ದಾರ್ ರವರಿಗೆ ನಿರ್ದೇಶಿಸಿ, ಆದೇಶಿಸಬೇಕು ಎಂದು ತಮ್ಮಲ್ಲಿ ಕೋರುತ್ತೇವೆ. ಕಾಡಾನೆಗಳ ಹಾವಳಿಯನ್ನು ತಡೆಹಿಡಿಯಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ನಮಗೆ ಬಗರ್ ಹುಕುಂ ಸಾಗುವಳಿ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ರಾಮಯ್ಯ, ಮುಖಂಡರಾದ ಚಿಕ್ಕಬಸವಯ್ಯ, ಚಿಕ್ಕಗೋಪಮ್ಮ, ಬೆಳ್ಳಮ್ಮ, ಉತ್ತರಮ್ಮ, ಗೋಪಮ್ಮ ಇತರರು ಹಾಜರಿದ್ದರು.

Share this article