ಪೆಟ್ರೋಲ್‌ ಸುರಿದು ಬೆಂಕಿ: ಗಾಯಗೊಂಡಿದ್ದ ಯುವಕ ಸಾವು

KannadaprabhaNewsNetwork | Published : Jun 10, 2024 12:50 AM

ಸಾರಾಂಶ

ಯುವತಿ ಕುಟುಂಬದಿಂದ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕೇಸಿನಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ ರಾಹುಲ್‌ ಬಿರಾದಾರ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಪ್ರೀತಿಯ ವಿಚಾರವಾಗಿ ಯುವತಿ ಮನೆಯಲ್ಲಿ ಗಲಾಟೆ ನಡೆದು, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ತೀವ್ರವಾಗಿ ಸುಟ್ಟು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ಭಾನುವಾರ ನಡೆದಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ರಾಹುಲ್ ಬಿರಾದಾರ(25) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಯುವಕ. ಪ್ರೀತಿ ವಿಷಯವಾಗಿ ಪೆಟ್ರೋಲ್‌ ಸುರಿದು ಸುಡಲು ಪ್ರಯತ್ನಿಸಿದ್ದ ವೇಳೆ ಬೆಂಕಿ ತಗುಲಿದ್ದರಿಂದ ರಾಹುಲ್‌ ದೇಹದ ಭಾಗ ಶೇ.75 ರಷ್ಟು ಸುಟ್ಟು ಹೋಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ 15 ದಿನಗಳ ನಂತರ ಅಸುನೀಗಿದ್ದಾನೆ.

ಏನಿದು ಪ್ರಕರಣ?:

ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪುರಸಭೆ ಮಾಜಿ ಸದಸ್ಯ ರಾವುಜಪ್ಪ ಮದರಿ ಅವರ ಮನೆಯಲ್ಲಿ ಮೇ 26 ರಂದು ರಾಹುಲ್ ಬಿರಾದಾರ ಮೇಲೆ ಸಂಜೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಲಾಗಿತ್ತು ಎಂದು ಮೃತ ಯುವಕನ ತಂದೆ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.

ರಾಹುಲ್ ಬಿರಾದಾರ ಎಂಬ ಯುವಕ ಮದರಿ ಕುಟುಂಬದ ಯುವತಿ ಜತೆಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಎರಡು ವರ್ಷಗಳ ನಂತರ ಇಬ್ಬರ ಮಧ್ಯೆ ಪ್ರೀತಿ ಮುರಿದುಬಿದ್ದಿತ್ತು ಎನ್ನಲಾಗಿದೆ. ಇದನ್ನು ಸಹಿಸದ ರಾಹುಲ್ ಮೇ 26 ರಂದು ಯುವತಿ ಮನೆಗೆ ಏಕಾಂಗಿಯಾಗಿ ತೆರಳಿದ್ದ. ಈ ವೇಳೆ ಮದರಿ ಕುಟುಂಬದವರು ರಾಹುಲ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆತನ ತಂದೆ ದೂರಿದ್ದರು.

ಅಲ್ಲದೆ, ಘಟನೆಯಲ್ಲಿ ರಾಹುಲ್‌ ತೀವ್ರವಾಗಿ ಗಾಯಗೊಂಡಿದ್ದನು. ಅಲ್ಲದೇ, ಇದೆ ವೇಳೆ ಯುವತಿಯ ಚಿಕ್ಕಪ್ಪ ಮುತ್ತು ಮದರಿ, ಕೆಲಸಗಾರ ವಾಲಿಕಾರ ಕೂಡ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಯುವತಿ ಚಿಕ್ಕಪ್ಪ ಮುತ್ತು ಅವರ ಪತ್ನಿ ಸೀಮಾ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರಿಂದ ದೂರು, ಪ್ರತಿ ದೂರು ದಾಖಲಾಗಿತ್ತು. ಯುವತಿ ತಂದೆ ಪರುಶುರಾಮ ಮದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ವಿಶೇಷ ತನಿಖಾ ತಂಡ ರಚಿಸಿದ್ದು, ಘಟನೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ತಿಳಿಸಿದ್ದಾರೆ.

Share this article