ಕನ್ನಡಪ್ರಭ ವಾರ್ತೆ ದಾವಣಗೆರೆ
ದಿನದ 24 ಗಂಟೆ, ವರ್ಷದ 365 ದಿನವೂ ಕಾರ್ಯ ನಿರ್ವಹಿಸುವ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಭಂದಿ ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದರು.ನಗರದ ಜಿಲ್ಲಾ ಪೊಲೀಸ್ ವಸತಿ ಗೃಹಗಳ ಸಮುಚ್ಛಯ ಆವರಣದಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆ, ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ, ಪರ್ವತ ಲೈಫ್ ಕೇರ್, ಆಚಾರ್ ಲ್ಯಾಬ್ಸ್ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಸ್ವಯಂಪ್ರೇರಿತ ರಕ್ತ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ಅಧಿಕಾರಿ, ಸಿಬ್ಭಂದಿ ಹಾಗೂ ಕುಟುಂಬ ವರ್ಗದ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಿಡುವಿಲ್ಲದೇ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆ ಭಾರಿ ಒತ್ತಡ ಇರುತ್ತದೆ. ಒತ್ತಡಕ್ಕೊಳಗಾಗಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವುದನ್ನೂ ನಾವು ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಭಂದಿ ತಮ್ಮ ವೈಯಕ್ತಿಕ ಆರೋಗ್ಯ, ಕುಟುಂಬದ ಆರೋಗ್ಯದ ಕಡೆಗೂ ಗಮನಹರಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇಲಾಖೆಯಿಂದ ಮುಂದಿನ ದಿನಗಳಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಹೆಚ್ಚಿನ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿದರು.ಕಿಡ್ನಿ ತಜ್ಞ ಡಾ. ಆರ್.ಮೋಹನ ಮಾತನಾಡಿ, ಕಿಡ್ನಿಯನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸರು ಮತ್ತು ಅವರ ಕುಟುಂಬ ವರ್ಗಕ್ಕೆ ಮಾಹಿತಿ ನೀಡಿದರು.ಶಿಬಿರದಲ್ಲಿ ರಕ್ತ ಪರೀಕ್ಷೆ, ಕಣ್ಣಿನ ತಪಾಸಣೆ, ಬಿಪಿ, ಶುಗರ್, ಕಿಡ್ನಿ ಆರೋಗ್ಯ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ಜತೆಗೆ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ನಡೆಸಲಾಯಿತು.
ನಗರ ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ, ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ, ಆರ್‌ಪಿಐ ಸೋಮಶೇಖರ, ಡಾ.ಆರ್.ಮೋಹನ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಭಂದಿ, ವೈದ್ಯಕೀಯ ಸಿಬ್ಭಂದಿ, ಪೊಲೀಸ್ ಕುಟುಂಬದವರು ಇದ್ದರು.