ಕನ್ನಡಪ್ರಭ ವಾರ್ತೆ ಹಿರಿಯೂರು
ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಸರಿಯಿದ್ದರೆ ವ್ಯಕ್ತಿ ಸಮಾಜದ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಜ್ಞಾನಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷರು ಹಾಗೂ ಚಿತ್ರದುರ್ಗ ಹಾರ್ಟ್ ಫುಲ್ ನೆಸ್ ಧ್ಯಾನ ಕೇಂದ್ರ ಸಂಯೋಜಕರಾದ ಡಾ.ವಿ.ಬಸವರಾಜ ಹೇಳಿದರು.ನಗರದ ಜ್ಞಾನಭಾರತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧ್ಯಾನ ಮತ್ತು ಮಾನಸಿಕ ಆರೋಗ್ಯ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಆರೋಗ್ಯವೆಂದರೆ ದೇಹ ಮತ್ತು ಮನಸ್ಸು ಎರಡೂ ಸುಸ್ಥಿತಿಯಲ್ಲಿರುವುದು ಎಂದರ್ಥ. ಮಾನಸಿಕ ಆರೋಗ್ಯ ವ್ಯಕ್ತಿ ದೈನಂದಿನ ಜೀವನದ ಧನಾತ್ಮಕ ಸಕ್ರಿಯ ಗುಣಮಟ್ಟ ಸೂಚಿಸುತ್ತದೆ. ವಿದ್ಯಾರ್ಥಿಗಳು ಉತ್ತಮ ಮಾನಸಿಕ ಆರೋಗ್ಯ ಹೊಂದಿರದಿದ್ದಲ್ಲಿ ಕಲಿಕೆಯಲ್ಲಿ ಗಮನ ಕೇಂದ್ರೀಕರಿಸಲಾಗುವುದಿಲ್ಲ. ಕಲಿಕೆ ಉತ್ತಮ ಮಾನಸಿಕ ಆರೋಗ್ಯದ ಮೇಲೆ ಅವಲಂಬಿತವಾಗಿದೆ ಎಂದರು.
ಆರೋಗ್ಯವಂತ ಮಕ್ಕಳು ಹೆಚ್ಚಿನ ಜ್ಞಾನ ಮತ್ತು ಕೌಶಲ್ಯ ಗಳಿಸುವ ಅಪೇಕ್ಷೆ ಹೊಂದಿರುತ್ತಾರೆ. ಮಾನಸಿಕವಾಗಿ ಆರೋಗ್ಯವಾಗಿರುವರು ಸಮಾಜ ವಿದ್ರೋಹಿಗಳಾಗಿರುವುದಿಲ್ಲ. ಜೀವನದ ಗುರಿಗಳು ಸಮಾಜದ ನೀತಿ ನಿಯಮಗಳಿಗೆ ಅನುಗುಣವಾಗಿರುತ್ತವೆ ಹಾಗೂ ತನ್ನ ನೈತಿಕ ಜೀವನದ ಬಗ್ಗೆ ಒಳನೋಟ ಹೊಂದಿರುತ್ತಾನೆ. ವ್ಯಕ್ತಿ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುತ್ತಾನೆ ಮತ್ತು ಸ್ವಯಂ ಮೌಲ್ಯಮಾಪನದ ಮುಖಾಂತರ ತನ್ನ ವರ್ತನೆ ಸುಧಾರಿಸಿಕೊಳ್ಳುತ್ತಾನೆ. ಶೇ.67ರಷ್ಟು ಜನ ಮಾನಸಿಕವಾಗಿ ಸದೃಢರಾಗಿಲ್ಲ. ವಿಪರೀತ ಮಾನಸಿಕ ಕಾಯಿಲೆಗಳು ಸಮಾಜ ಪೀಡಿಸುತ್ತಿವೆ. ಆದ್ದರಿಂದ ಧ್ಯಾನ ಮತ್ತು ಮಾನಸಿಕ ಆರೋಗ್ಯದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದರು.ಪ್ರಾಚಾರ್ಯ ಎನ್.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಬರೀ ಶೈಕ್ಷಣಿಕ ಚಟುವಟಿಕೆಗಳಿಗೆ ಒತ್ತುಕೊಡದೆ ಸಾಹಿತ್ಯಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಚಟುವಟಿಕೆಗಳಿಗೂ ಕೂಡ ಹೆಚ್ಚು ಹೊತ್ತು ನೀಡುತ್ತಿದ್ದೇವೆ. ಈ ಮಾಸ ಮಾತುಕತೆ ಒಂದು ಮುಕ್ತ ಸಂವಾದ ಎನ್ನುವಂತಹ ಕಾರ್ಯಕ್ರಮವನ್ನು ಪ್ರತಿ ತಿಂಗಳು ಅಳವಡಿಸುವುದರ ಮುಖಾಂತರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಲ್ಲಿ ವಿಭಿನ್ನ ಪ್ರಯತ್ನ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಈ ವೇಳೆ ಪ್ಯಾರಾ ಮೆಡಿಕಲ್ ವಿಭಾಗದ ಮುಖ್ಯಸ್ಥ ಡಿ.ಗಿರೀಶ್, ವಿದ್ಯಾಸಂಸ್ಥೆ ನಿರ್ದೇಶಕ ಅಭಿಲಾಷ್, ವ್ಯವಸ್ಥಾಪಕ ಕೆ ದೊರೇಶ್, ಉಪನ್ಯಾಸಕ ಮಹಮದ್, ರವಿಕುಮಾರ್, ನಾಗೇಶ್, ಜೆ.ಆರ್.ಅರುಣಾ ಕುಮಾರಿ, ಲೀಲಾ, ಉಮ್ರಾಜ್, ಮಾರುತೇಶ್, ಜಗದೀಶ್ ಹಾಗೂ ವಿದ್ಯಾರ್ಥಿಗಳು, ಪೋಷಕರು, ಧ್ಯಾನಾಸಕ್ತರು ಇದ್ದರು.