ಅಡಕೆ ತೋಟ ನಿರ್ವಹಣೆಗೆ ರೈತ ಉತ್ಪಾದಕ ಸಂಸ್ಥೆ ಪಿಂಗಾರ ಸಂಕಲ್ಪ

KannadaprabhaNewsNetwork | Published : May 23, 2025 12:14 AM
‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣನ್ಯೂಸ್‌ ರೈತ ರತ್ನ’ ಪ್ರಶಸ್ತಿ ಪುರಸ್ಕೃತ, ಪಿಂಗಾರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ರೈತರ ಅಡಕೆ ತೋಟ ನಿರ್ವಹಣೆ ಜವಾಬ್ದಾರಿ ಹೊರಲು ಸಿದ್ಧವಾಗಿದೆ. ತೋಟದ ಸಮೀಪವೇ ಮನೆ ಹೊಂದಿರುವ ರೈತರ ತೋಟಗಳನ್ನು ಮಾತ್ರ ನಿರ್ವಹಣೆಗೆ ವಹಿಸಿಕೊಳ್ಳಲಾಗುತ್ತದೆ. ಫಲಾನುಭವಿಗಳು ಪಿಂಗಾರ ಸಂಸ್ಥೆ ಸದಸ್ಯರಾಗಿರಬೇಕು.
Follow Us

ಕೃಷ್ಣಮೋಹನ ತಲೆಂಗಳಕನ್ನಡಪ್ರಭ ವಾರ್ತೆ ಮಂಗಳೂರು

ಕಾರ್ಮಿಕರ ಕೊರತೆಯಿಂದ ತೋಟಗಳು ಬಣಗುಡುತ್ತಿದ್ದರೆ, ಇಲ್ಲಿದೆ ಪರಿಹಾರ. ಅಡಕೆ ಕೃಷಿಯ ಇಡೀ ವರ್ಷದ ಮುಖ್ಯ ಕೆಲಸಗಳನ್ನು ನಿರ್ವಹಿಸಲು ಹೊರಟಿದೆ ಬಂಟ್ವಾಳ ತಾಲೂಕು ವಿಟ್ಲದ ಪಿಂಗಾರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ.

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣನ್ಯೂಸ್‌ ರೈತ ರತ್ನ’ ಪ್ರಶಸ್ತಿ ಪುರಸ್ಕೃತ, ಪಿಂಗಾರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ರೈತರ ಅಡಕೆ ತೋಟ ನಿರ್ವಹಣೆ ಜವಾಬ್ದಾರಿ ಹೊರಲು ಸಿದ್ಧವಾಗಿದೆ. ಈಗಾಗಲೇ ಅಡಕೆ, ತೆಂಗು ಕೊಯ್ಲು, ಔಷಧ ಸಿಂಪಡಣೆ, ಕಳೆ ಕೀಳುವ ಜಾಬ್‌ ವರ್ಕ್‌ಗಳ ಮೂಲಕ ರೈತರ ನೆರವಿಗೆ ನಿಂತಿರುವ ಸಂಸ್ಥೆ ಈಗ ಕಾರ್ಮಿಕರ ಕಾಡುವ ಕೊರತೆ ನಡುವೆ ಅಡಕೆ ಕೃಷಿಯ ಇಡೀ ವರ್ಷದ ಮುಖ್ಯ ಕೆಲಸಗಳನ್ನು ನಿರ್ವಹಿಸಲು ಹೊರಟಿದೆ. ತೋಟದ ಸಮೀಪವೇ ಮನೆ ಹೊಂದಿರುವ ರೈತರ ತೋಟಗಳನ್ನು ಮಾತ್ರ ನಿರ್ವಹಣೆಗೆ ವಹಿಸಿಕೊಳ್ಳಲಾಗುತ್ತದೆ. ಫಲಾನುಭವಿಗಳು ಪಿಂಗಾರ ಸಂಸ್ಥೆ ಸದಸ್ಯರಾಗಿರಬೇಕು.

ಬಹುತೇಕ ಅವೈಜ್ಞಾನಿಕವಾಗಿ ನಡೆಯುವ ಅಡಕೆ ತೋಟಗಳ ಖಾಸಗಿ ಫಲಗುತ್ತಿಗೆ (ಕೊಬೆ ಗೇಣಿಗೆ) ವ್ಯವಸ್ಥೆಯ ಬದಲಿಗೆ, ಕ್ರಮಬದ್ಧವಾಗಿ ತೋಟ ನಿರ್ವಹಿಸಿ ರೈತನಿಗೇ ಸರಿಯಾದ ಲಾಭ ದೊರುಕುವಂತೆ ಮಾಡಲು ಶ್ರಮಿಸಲಿದೆ. ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಂಗಾರ ಸಂಸ್ಥೆ ವಿಟ್ಲದಲ್ಲಿ ಕೇಂದ್ರ ಕಚೇರಿ ಹೊಂದಿದೆ.

ಯಾವುದೆಲ್ಲ ಕೆಲಸ ನಿರ್ವಹಣೆ?

ತೋಟಕ್ಕೆ ಔಷಧಿ ಸಿಂಪಡಣೆ, ಕಳೆ ತೆಗೆಯುವುದು, ಗೊಬ್ಬರ, ಅಡಕೆ ಕೊಯ್ದು ಅಂಗಳಕ್ಕೆ ಸಾಗಿಸಿ, ಹರಡುವುದು, ಒಣಗಿದ ಅಡಕೆ ತೂಕ ಮಾಡಿ ಗೋದಾಮಿಗೆ ಸಾಗಿಸಿ ದಾಸ್ತಾನು ಇಡುವುದು, ಅಡಕೆ ಸುಲಿದು, ವಿಂಗಡಿಸಿ ತೂಕ ಮಾಡಿ ಇಡುವುದು. ರೈತ ಅಪೇಕ್ಷಿಸಿದಂದು ಅದನ್ನು ಮಾರಾಟ ಮಾಡಲು ಅ‍ವಕಾಶ ಕಲ್ಪಿಸಿ ಲೆಕ್ಕ ಚುಕ್ತಾ ಮಾಡುವುದು ಇಷ್ಟು ಹೊಣೆಗಳನ್ನು ಪಿಂಗಾರ ನಿರ್ವಹಿಸಲಿದೆ.

ಪ್ರತಿ ಕೆಲಸಕ್ಕೂ ಯೂನಿಟ್‌ ಅಥವಾ ಮರ ಲೆಕ್ಕದಲ್ಲಿ ಖರ್ಚು ಲೆಕ್ಕ ಹಾಕಲಾಗುತ್ತದೆ. ಪ್ರತಿ ಕೆಲಸಕ್ಕೂ ಕಾರ್ಮಿಕರ ವೆಚ್ಚ ಪಡೆಯಲಾಗುತ್ತದೆ. ಯಾವುದೇ ಹಂತದಲ್ಲಿ ಕಣ್ಣಂದಾಜು, ಅವೈಜ್ಞಾನಿಕ ಲೆಕ್ಕಾಚಾರಗಳಿಲ್ಲ. ನೈಜ ವೆಚ್ಚ, ನೈಜ ಲಾಭದ ಮಾನದಂಡದಲ್ಲೇ ವ್ಯವಹಾರಗಳೂ ನಡೆಯುತ್ತವೆ.

ಏನೇನು ಮಾಡುತ್ತಾರೆ?:

ಮಳೆಗಾಲದಲ್ಲಿ ತೋಟಕ್ಕೆ ರೈತ ಅಪೇಕ್ಷೆ ಪಟ್ಟಷ್ಟು ಸಲ ಔಷಧ ಸಿಂಪಡಣೆ ಮಾಡಲಾಗುತ್ತದೆ. ಮೈಲುತುತ್ತು, ಔಷಧಿ ರೈತರು ಒದಗಿಸಬೇಕು, ಬಳಿಕ ತೋಟದ ಹುಲ್ಲು ತೆಗೆಯುತ್ತಾರೆ. ರೈತರ ಅಪೇಕ್ಷೆಯ ಗೊಬ್ಬರವನ್ನು ಗಿಡಕ್ಕೆ ಹಾಕಲಾಗುತ್ತದೆ. ಗೊಬ್ಬರದ ವೆಚ್ಚ ರೈತರೇ ಭರಿಸಬೇಕು. ಕಾರ್ಮಿಕರು ಪಿಂಗಾರದವರು.

ಕೊಯ್ಲಿನ ಋತುವಿನಲ್ಲಿ ಅಡಕೆ ಕೊಯ್ದು, ಅಂಗಳಕ್ಕೆ ತಂದು, ಅಡಕೆ ಬಿಡಿಸಿ ಹರವಿ ಕೊಡುವುದು ಪಿಂಗಾರದ ಜವಾಬ್ದಾರಿ.

ಎರಡನೇ, ಮೂರನೇ ಕೊಯ್ಲಿನ ವೇಳೆಗೆ ಒಣಹಾಕಿದ ಅಡಕೆಯ ಸ್ಥಳ ಬದಲಾವಣೆ ಪಿಂಗಾರದ ಕಾರ್ಮಿಕರು ಮಾಡುತ್ತಾರೆ. ಅಡಕೆ ಒಣಗಿದ ಮೇಲೆ ತೂಕ ಮಾಡಿ ಗೋಣಿಯಲ್ಲಿ ತುಂಬಿಸಿ ಪಿಂಗಾರದ ಗೋದಾಮಿಗೆ ಸಾಗಿಸುತ್ತಾರೆ.

ಕಾರ್ಮಿಕರ ಬಿಡುವಿನ ವೇಳೆಯಲ್ಲಿ ಅಡಕೆ ಸುಲಿದು, ವರ್ಗೀಕರಿಸಿ, ತೂಕ ಮಾಡಿ ಪ್ಯಾಕ್‌ ಮಾಡಿ ಇರಿಸಲಾಗುತ್ತದೆ. ರೈತ ತನ್ನ ಅನುಕೂಲಕ್ಕೆ ತಕ್ಕಂತೆ ಅಡಕೆ ಮಾರಾಟ ಮಾಡಬಹುದು. ಪಿಂಗಾರ ಸಂಸ್ಥೆಯೇ ಯೋಗ್ಯ ಬೆಲೆ ನೀಡಿ ಅಡಕೆ ಖರೀದಿಸುತ್ತದೆ. ಆದರೆ ಪಿಂಗಾರಕ್ಕೆ ಮಾರಾಟ ಮಾಡುವುದು ಕಡ್ಡಾಯವಲ್ಲ. ಗೊಬ್ಬರ, ಮೈಲುತುತ್ತನ್ನೂ ಪಿಂಗಾರವೇ ಪೂರೈಸುತ್ತದೆ, ಆದರೆ ಪಿಂಗಾರದಲ್ಲೇ ಖರೀದಿ ಕಡ್ಡಾಯವಲ್ಲ.

ಸಣ್ಣ ಪುಟ್ಟ ಕೆಲಸಗಳಾದ ಅಡಕೆ ಗಿಡಕ್ಕೆ ನೀರು ಹಾಕುವುದು, ಅಂಗಳದಲ್ಲಿ ಒಣಹಾಕಿದ ಅಡಕೆಗೆ ಕೈ ಅಥವಾ ಕಾಲು ಹಾಕುವುದು, ವಾರ ವಾರ ತೋಟದಿಂದ ಅಡಕೆ ಹೆಕ್ಕುವುದು ಮುಂತಾದ ಕೆಲಸಗಳನ್ನು ರೈತನೇ ನಿರ್ವಹಿಸಬೇಕು.

ಎಲ್ಲ ಅಡಕೆ ಮಾರಾಟ ಆದ ಮೇಲೆ ಮಾರಾಟ ಮೊತ್ತದ ಶೇ.5 ಕಮಿಷನ್ ರೂಪದಲ್ಲಿ ಪಿಂಗಾರಕ್ಕೆ ನೀಡಬೇಕು. ದಾಸ್ತಾನು ಇರಿಸಿದಲ್ಲಿಂದ ಹೊಸ ಅಡಕೆ, ಹಳೆ ಅಡಕೆಯನ್ನು ಮಾರಾಟ ಮಾಡಬಹುದು. ಡಬಲ್‌ ಚೋಲ್‌ ತನಕ ದಾಸ್ತಾನು ಇರಿಸುವಂತಿಲ್ಲ ಎಂಬುದು ಶರತ್ತು. ದಾಸ್ತಾನು ಗೋದಾಮಿಗೆ ಬಾಡಿಗೆ ಇರುವುದಿಲ್ಲ.

ಸದ್ಯ ಪಿಂಗಾರಕ್ಕೆ 1248 ಮಂದಿ ರೈತ ಸದಸ್ಯರಿದ್ದಾರೆ. ಈ ವರ್ಷ ಪ್ರಾಯೋಗಿಕವಾಗಿ 10-15 ತೋಟ ವಹಿಸಲು ಉದ್ದೇಶಲಾಗಿದೆ. ಈಗಾಗಲೇ ಪಿಂಗಾರದ ಅಡಕೆ ಕೌಶಲ್ಯ ಪಡೆಯಲ್ಲಿ 85ಕ್ಕೂ ಅಧಿಕ ನುರಿತ ಕಾರ್ಮಿಕರಿದ್ದಾರೆ. ಅವರನ್ನೇ ಈ ಕೆಲಸಕ್ಕೂ ಬಳಸಲಾಗುತ್ತದೆ. ಕೊಯ್ಲು, ಔಷಧ ಸಿಂಪಡಣೆ ಹೊರತುಪಡಿಸಿ ವರ್ಷದ ಇತರ ಋತುಗಳಲ್ಲೂ ಅವರಿಗೆ ವರ್ಷಪೂರ್ತಿ ಉದ್ಯೋಗ ನೀಡುವ ಉದ್ದೇಶ ಸಹ ಈ ಯೋಜನೆಯ ಹಿಂದೆ ಇದೆ..............ರೈತರಿಗೂ, ಪಿಂಗಾರಕ್ಕೂ ಲಾಭ ತರುವ ಈ ಯೋಜನೆ ಇದೇ ಜೂ.15ರಿಂದ ಕಾರ್ಯರೂಪಕ್ಕೆ ಬರಲಿದೆ. ಪೂರ್ಣ ತೋಟದ ಕೆಲಸ ನಿರ್ವಹಣೆ ವ್ಯವಹಾರ ನಮಗೂ ಹೊಸದು. ರೈತರನ್ನೂ ಒಳಗೊಳ್ಳುವಂತೆ ಮಾಡಿ ಕೃಷಿ ಕೆಲಸಗಳಿಗೆ ನೆರವಾಗಿ, ವೈಜ್ಞಾನಿಕವಾಗಿ ವೆಚ್ಚ ಪಡೆದು, ಅವರ ಇಷ್ಟದ ಗೊಬ್ಬರ, ಔಷಧಿ ಬಳಸಿ, ಅವರಿಷ್ಟದ ಕಡೆಗೆ ಮಾರಾಟಕ್ಕೆ ಅನುವು ಮಾಡಿಕೊಡುವ ಈ ಕಲ್ಪನೆ ‘ಕೊಬೆ ಗೇಣಿಗೆ’ ವ್ಯವಹಾರಕ್ಕಿಂತ ಅತ್ಯಂತ ಭಿನ್ನವಾಗರಲಿದೆ ಎಂಬ ವಿಶ್ವಾಸ ನಮಗಿದೆ.

-ರಾಮ್‌ ಕಿಶೋರ್‌ ಮಂಚಿ ಕಜೆ, ಅಧ್ಯಕ್ಷರು, ಪಿಂಗಾರ ರೈತ ಉತ್ಪಾದಕ ಸಂಸ್ಥೆ.