ಕನ್ನಡಪ್ರಭ ವಾರ್ತೆ ನಾಪೋಕ್ಲು
ಗಿಡಗಳನ್ನು ನೆಡುವುದು ಮುಖ್ಯವಲ್ಲ ನೆಟ್ಟ ಗಿಡಗಳನ್ನು ಪೋಷಣೆ ಮಾಡುವುದು ಮುಖ್ಯ ಎಂದು ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ಸಂಪಾಜೆ ವಲಯ ಅಧ್ಯಕ್ಷ ಎಂ. ಧನಂಜಯ ಹೇಳಿದರು.ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಸ್ಥಳೀಯ ಸಂಸ್ಥೆ ಸಂಪಾಜೆ ವತಿಯಿಂದ ವಿವಿಧ ಶಾಲೆಗಳಲ್ಲಿ ಭೂಮಿಯ ಮರುಸ್ಥಾಪನೆ ಮತ್ತು ಹಸಿರು ಬರ ಪರಿಸ್ಥಿತಿ ನಿರ್ವಹಣೆ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಮೀಪದ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಯಲ್ಲಿ ಸೋಮವಾರ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ಪರಿಸರ ಸಂರಕ್ಷಣೆ ಅರಿವು ಮೂಡಿಸುವ ಉದ್ದೇಶದಿಂದ ಮಡಿಕೇರಿ ತಾಲೂಕಿನ ಆಯ್ದ 15 ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಂಗವಾಗಿ ಜೂ. 5ರ ಪರಿಸರ ದಿನಾಚರಣೆಯಂದು ನಾಪೋಕ್ಲು ಹೋಬಳಿಯ ನಾಲ್ಕು ಶಾಲೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬಲ್ಲಮಾವಟಿ ಮತ್ತು ಭಾಗಮಂಡಲ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಸಂರಕ್ಷಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಗಿಡಗಳನ್ನು ಪೋಷಣೆ ಮಾಡಿ ಸಂರಕ್ಷಿಸಿ ಅದರ ನೆರಳು ಅಥವಾ ಫಲವನ್ನು ಪಡೆದುಕೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಗಿಡಗಳನ್ನು ನೀಡಿದ್ದು ಅದರ ಸಂಪೂರ್ಣ ಪೋಷಣೆಯ ಜವಾಬ್ಧಾರಿಯನ್ನು ಮಕ್ಕಳು ಮಾಡಲಿದ್ದಾರೆ ಎಂದರು.ಪರಿಸರ ಸಂರಕ್ಷಣೆ ಸಂಬಂಧ ಪಟ್ಟಂತೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನ ಕೂಡ ನಡೆಯಲಿದೆ. ಸಸಿ ನೆಡುವ ಮತ್ತು ಅದನ್ನು ಸಂರಕ್ಷಣೆ ಮಾಡುವ ಪ್ರಾಮುಖ್ಯತೆಯ ನಿಟ್ಟಿನಲ್ಲಿ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜಾಥಾ ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುವ ಯೋಜನೆಯನ್ನು ಕೂಡ ಹಮ್ಮಿಕೊಂಡಿದ್ದೇವೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಬಿ ಉಷಾರಾಣಿ ಮಾತನಾಡಿ, ಪರಿಸರವನ್ನು ಸಂರಕ್ಷಣೆ ಮಾಡುವ ಕಾರ್ಯದಲ್ಲಿ ನಾವೆಲ್ಲರೂ ಮುನ್ನಡೆಯುತ್ತಿದ್ದೇವೆ. ನಮ್ಮ ಭೂಮಿಯನ್ನು ಕಲುಷಿತಗೊಳಿಸಲು ಬಿಡಬಾರದು. ಗಿಡಮರಗಳನ್ನು ಕಡಿದು ಪರಿಸರವನ್ನು ಪ್ಲಾಸ್ಟಿಕ್ ಮಯವಾಗಿ ಮಾಡಿ ಜಲವನ್ನು ಮಾಲಿನ್ಯಗೊಳಿಸಿ ವಾಯುಮಾಲಿನ್ಯ ಉಂಟು ಮಾಡುತ್ತಿದ್ದೇವೆ. ಇದನ್ನು ತಪ್ಪಿಸಲು ಎಲ್ಲರೂ ಪರಿಸರ ಸಂರಕ್ಷಣೆ ವಿಚಾರದಲ್ಲಿ ಜಾಗೃತರಾಗಬೇಕಾಗಿದೆ. ನಮ್ಮ ಮಕ್ಕಳನ್ನು ನಾವು ಯಾವ ರೀತಿ ಪೋಷಣೆ ಮಾಡುತ್ತೇವೋ ಅದೇ ರೀತಿ ಮರ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದರೆ ಮಾತ್ರ ನಮ್ಮ ಮುಂದಿನ ತಲೆಮಾರು ಬದುಕಲು ಸಾಧ್ಯ ಎಂದರು. ಈ ಸಂದರ್ಭ ನೇತಾಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ ಎಸ್ ಸುರೇಶ್ ಅಧ್ಯಾಪಕ ಹಾಗೂ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಂಗವಾಗಿ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆ, ಅಯ್ಯಂಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭಾಗಮಂಡಲದ
ಕಾವೇರಿ ಪದವಿಪೂರ್ವ ಕಾಲೇಜು, ಕೋಪಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಚೇರಂಬಾಣೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.