ಬಿಸಿಲೂರು ಬಳ್ಳಾರಿ ಮಲೆನಾಡಿನಂತಾಗಲು ಮರ ಬೆಳೆಸಿ: ಶ್ರೀ ಪ್ರಭುಸ್ವಾಮೀಜಿ

KannadaprabhaNewsNetwork |  
Published : Jul 11, 2025, 01:49 AM IST
ಬಳ್ಳಾರಿ ತಾಲೂಕಿನ ಡಿ.ಕಗ್ಗಲ್ ಗ್ರಾಮದ ಶ್ರೀಚಾಣಕ್ಯ ಶಾಲೆಯಲ್ಲಿ ಜರುಗಿದ ಅಕ್ಷರಾಭ್ಯಾಸ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಂಡೂರು ವಿರಕ್ತಮಠದ ಶ್ರೀ ಪ್ರಭುಸ್ವಾಮಿಗಳು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.  | Kannada Prabha

ಸಾರಾಂಶ

ಬಳ್ಳಾರಿ ತಾಲೂಕಿನ ಡಿ. ಕಗ್ಗಲ್ ಗ್ರಾಮದ ಶ್ರೀ ಚಾಣಕ್ಯ ಶಾಲೆಯಲ್ಲಿ ಬುಧವಾರ ಅಕ್ಷರಾಭ್ಯಾಸ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಸಂಡೂರು ವಿರಕ್ತಮಠದ ಶ್ರೀಪ್ರಭುಸ್ವಾಮೀಜಿ ಪಾಲ್ಗೊಂಡಿದ್ದರು.

ಬಳ್ಳಾರಿ: ಬಿಸಿಲೂರು ಖ್ಯಾತಿಯ ಬಳ್ಳಾರಿ ಮಲೆನಾಡಿನಂತಾಗಲು ಗಿಡ-ಮರಗಳನ್ನು ಬೆಳೆಸಿ ಪೋಷಿಸುವ ಕಾಳಜಿಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಶಾಲೆಗಳಿಂದಲೇ ಆರಂಭಗೊಳ್ಳಬೇಕು ಎಂದು ಸಂಡೂರು ವಿರಕ್ತಮಠದ ಶ್ರೀ ಪ್ರಭುಸ್ವಾಮೀಜಿ ಹೇಳಿದರು.

ತಾಲೂಕಿನ ಡಿ. ಕಗ್ಗಲ್ ಗ್ರಾಮದ ಶ್ರೀ ಚಾಣಕ್ಯ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ಅಕ್ಷರಾಭ್ಯಾಸ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪರಿಸರ ಅಸಮತೋಲನದಿಂದಾಗಿ ಪ್ರಾಣಿ, ಪಕ್ಷಿಗಳಿಗೂ ಕುತ್ತು ಬಂದೊದಗಿದೆ. ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದ ಗುಬ್ಬಚ್ಚಿಗಳು ಈಗ ಕಾಣುತ್ತಿಲ್ಲ. ಕೃಷಿಯಲ್ಲಿ ಹೆಚ್ಚುತ್ತಿರುವ ರಾಸಾಯನಿಕ ಬಳಕೆಯಿಂದ ವಿವಿಧ ಬಗೆಯ ಪಕ್ಷಿ ಸಮೂಹ ಮರೆಯಾಗಿವೆ. ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಹಾಗೂ ಕೃಷಿ ಉತ್ಪಾದನೆಯಲ್ಲಿ ಅಪಾರವಾಗಿ ಬಳಕೆಯಾಗುತ್ತಿರುವ ರಾಸಾಯನಿಕದಿಂದಾಗಿಯೇ ಆಹಾರ ವಿಷಪೂರಿತವಾಗುತ್ತಿದೆ. ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಪ್ಲಾಸ್ಟಿಕ್ ಬಳಕೆಯಿಂದ ದೂರ ಉಳಿದು ಪರಿಸರ ಕಾಳಜಿ ಮೆರೆಯಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುವ ಮೂಲಕ ಶಾಲೆಯ ಮುಖ್ಯಸ್ಥ ವಿ. ಶಿವಾಚಾರಿ ಅವರು ಹಳ್ಳಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸತ್ಕಾರ್ಯದಲ್ಲಿ ತೊಡಗಿದ್ದಾರೆ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡಿರುವುದರಿಂದ ಸ್ಥಳೀಯವಾಗಿಯೇ ಶಿಕ್ಷಣ ಪಡೆದು ಮಕ್ಕಳ ಭವಿಷ್ಯ ರೂಪಿಸುವ ಕಡೆ ಪೋಷಕರು ಗಮನ ಹರಿಸಬೇಕು ಎಂದು ಶ್ರೀಗಳು ತಿಳಿಸಿದರು.

ಹಿರಿಯ ಲೆಕ್ಕಪರಿಶೋಧಕ ಸಿದ್ಧರಾಮೇಶ್ವರಗೌಡ ಕರೂರು ಮಾತನಾಡಿ, ಮೊಹರಂ ಹಬ್ಬದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಪಾರ ಪ್ರಮಾಣದ ಗಿಡ-ಮರಗಳು ಅಗ್ನಿಗೆ ಆಹುತಿಯಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ. ಪರಿಸರ ನಾಶವಾದರೆ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮರ-ಗಿಡಗಳನ್ನು ಪೋಷಿಸುವ ಕೆಲಸ ಮಾಡಿ. ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಿ ಎಂದು ಮನವಿ ಮಾಡಿದರು.

ಆಯುರ್ವೇದ ವೈದ್ಯ ಡಾ. ಪಿ. ರಾಜಶೇಖರ್ ಅವರು ಶಿಕ್ಷಣದ ಮಹತ್ವ ಹಾಗೂ ಆರೋಗ್ಯದ ಮಹತ್ವ ಕುರಿತು ಮನವರಿಕೆ ಮಾಡಿಕೊಟ್ಟರಲ್ಲದೆ, ಪೋಷಕರು ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ನೀಡಬೇಕು. ಪೌಷ್ಟಿಕಾಂಶಯುಳ್ಳ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಬೇಕು ಎಂದು ಹೇಳಿದರು. ಜೀವವಿಮಾ ನಿಗಮದ ಅಧಿಕಾರಿ ವಿಶ್ವನಾಥ ಮಾತನಾಡಿದರು. ಶಾಲೆಯ ಮುಖ್ಯಸ್ಥ ವಿ. ಶಿವಾಚಾರಿ ಪ್ರಾಸ್ತಾವಿಕ ಮಾತನಾಡಿದರು.

ಸಂಡೂರು ವಿರಕ್ತಮಠದ ಶ್ರೀ ಪ್ರಭುಸ್ವಾಮಿಗಳು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಬಳಿಕ ಪೋಷಕರು ಹಾಗೂ ಗ್ರಾಮಸ್ಥರಿಗೆ ನೂರಾರು ಗಿಡಗಳನ್ನು ವಿತರಿಸಲಾಯಿತು. ಶಾಲೆಯ ಶಿಕ್ಷಕರಾದ ಸುಕನ್ಯಾ ಹಾಗೂ ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು. ಪರಿಸರ ಜಾಗೃತಿ ಕುರಿತು ಶಾಲೆಯ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶಿಸಿ ಗಮನ ಸೆಳೆದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ