ಹವಾಮಾನ ವೈಪರೀತ್ಯ ತಡೆಗೆ ಗಿಡ-ಮರ ಬೆಳೆಸಿ

KannadaprabhaNewsNetwork | Published : Jun 21, 2024 1:00 AM

ಸಾರಾಂಶ

ಹವಾಮಾನ ವೈಪರೀತ್ಯದಿಂದ ತಾಪಮಾನ ಹೆಚ್ಚಾಗಿ ಬರಸ್ಥಿತಿ ಬರದಂತೆ ಮುಂದಾಲೋಚನೆಯಿಂದ ಮರಗಿಡ ಬೆಳೆಸಿ ಜಲಸಂರಕ್ಷಣಾ ಕಾಮಗಾರಿಗಳನ್ನು ಹೆಚ್ಚಾಗಿ ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದ್ದಾರೆ.

- ನೀರು ಇಂಗಿಸುವ ಮಳೆಕೊಯ್ಲು, ಜಲಾನಯನ ಪ್ರದೇಶಾಭಿವೃದ್ಧಿಗೆ ಒತ್ತು ನೀಡಲು ಡಿಸಿ ಸೂಚನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಹವಾಮಾನ ವೈಪರೀತ್ಯದಿಂದ ತಾಪಮಾನ ಹೆಚ್ಚಾಗಿ ಬರಸ್ಥಿತಿ ಬರದಂತೆ ಮುಂದಾಲೋಚನೆಯಿಂದ ಮರಗಿಡ ಬೆಳೆಸಿ ಜಲಸಂರಕ್ಷಣಾ ಕಾಮಗಾರಿಗಳನ್ನು ಹೆಚ್ಚಾಗಿ ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ಬುಧವಾರ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ಸದಸ್ಯರು ಹಾಗೂ ರೈತ ಮುಖಂಡರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳೊಂದಿಗೆ ನೆಲ, ಜಲ, ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಲಾದ ಸಭೆಯಲ್ಲಿ ಇಲಾಖಾವಾರು ಜಲಸಂರಕ್ಷಣಾ, ಅರಣ್ಯೀಕರಣ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.

ಕಳೆದ ವರ್ಷದ ಭೀಕರ ಬರಗಾಲದಿಂದ ಸಾಕಷ್ಟು ಪಾಠ ಕಲಿತಿದ್ದು ಜಲ ಸಂರಕ್ಷಣೆ, ಅರಣ್ಯೀಕರಣಕ್ಕೆ ಮುಂದಾಗಬೇಕಾಗಿದೆ. ಎಲ್ಲೆಲ್ಲಿ ಜಲಸಂರಕ್ಷಣಾ ಕೆಲಸವಾಗಿದೆ ಅಂಥಹ ಪ್ರದೇಶದಲ್ಲಿ ಬೇಸಿಗೆ ಸಮಯದಲ್ಲೂ ನೀರಿನ ಸಮಸ್ಯೆ ಆಗಿದಿಲ್ಲ. ಎಲ್ಲೆಲ್ಲಿ ಅರಣ್ಯೀಕರಣ ಹೆಚ್ಚಿದೆ ಅಂತಹ ಕಡೆಯೂ ತಾಪಮಾನ ನಿಯಂತ್ರಣವಾಗಿದೆ. ಈ ಹಿನ್ನೆಲೆ ನೀರು, ನೆಲ, ಪರಿಸರ, ಹವಾಮಾನ ಸಂರಕ್ಷಣೆಗಾಗಿ ಎಲ್ಲಾ ಇಲಾಖೆಗಳು ಭವಿಷ್ಯದ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕಾಗಿದೆ ಎಂದರು.

ಹೊಸ ಕೆರೆಗಳ ನಿರ್ಮಾಣ, ಮಳೆ ನೀರುಕೊಯ್ಲು:

ಜಿಲ್ಲೆಯಲ್ಲಿ ಎಲ್ಲಾ ಕೆರೆಗಳು ಸೇರಿ 595 ಕೆರೆಗಳಿದ್ದು ಇನ್ನೂ ಹೊಸದಾಗಿ ಕೆರೆಗಳ ನಿರ್ಮಾಣ ಮಾಡುವ ಮೂಲಕ ಮಳೆಗಾಲದಲ್ಲಿ ನೀರು ನಿಲ್ಲಿಸಿ, ಇಂಗಿಸುವ ಕೆಲಸ ಮಾಡಬೇಕಾಗಿದೆ. ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ 36 ಕೆರೆಗಳಿದ್ದು ಇವುಗಳಲ್ಲಿನ ಹೂಳನ್ನು ತೆಗೆಯುವ ಮೂಲಕ ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲುವಂತೆ ಮಾಡಿ ಪ್ರಾಣಿ, ಪಕ್ಷಿಗಳ ಕುಡಿಯುವ ನೀರಿಗೆ ನೆರವಾಗಬೇಕು. ಕ್ರಿಯಾ ಯೋಜನೆ ರೂಪಿಸುವಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ತಿಳಿಸಿ ಗ್ರಾಮಗಳ ಸಮೀಪ, ಕಂದಾಯ ಭೂಮಿ ಅಂಚಿನಲ್ಲಿ ಅರಣ್ಯ ಇಲಾಖೆ ಕೆರೆಗಳ ಹೂಳೆತ್ತುವಾಗ ಅಲ್ಲಿನ ಮಣ್ಣನ್ನು ರೈತರ ಹೊಲ, ತೋಟಗಳಿಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಬೇಕು ಎಂದರು.

ಜಲಾನಯನ ಅಭಿವೃದ್ಧಿ:

ಮಳೆಗಾಲದಲ್ಲಿ ಜಲಾನಯನ ಅಭಿವೃದ್ಧಿ ಮಾಡಲು ನೀರನ್ನು ನಿಲ್ಲಿಸಿ, ಇಂಗು ಅಂತರ್ಜಲ ಹೆಚ್ಚಳ ಮಾಡಲು ಗೋಕಟ್ಟೆ, ಪಿಕಪ್ ನಿರ್ಮಾಣ, ಕೃಷಿ ಹೊಂಡಗಳ ನಿರ್ಮಾಣ ಮತ್ತು ಬದು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಕಳೆದ ವರ್ಷ 140 ಅಮೃತ ಸರೋವರ, 112 ಮಳೆನೀರು ಕೊಯ್ಲು, 476 ರೈತರ ಜಮೀನಿನಲ್ಲಿ ಬದು ನಿರ್ಮಾಣ, ಕೊಳವೆಬಾವಿ ಪುನಶ್ಚೇತನ, 350 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.

ದಾವಣಗೆರೆ ಸ್ಮಾರ್ಟ್‌ ಸಿಟಿಯಾಗಿದ್ದು ಇಲ್ಲಿ 6.80 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಇಲ್ಲಿನ ಜನಸಾಂದ್ರತೆಗೆ ತಕ್ಕಂತೆ ಮರಗಿಡಗಳ ಲೆಕ್ಕವೆಷ್ಟು ಎಂದು ಅಂಕಿ-ಅಂಶಗಳನ್ನು ಸ್ಮಾರ್ಟ್ ಸಿಟಿಯಿಂದ ಸಂಗ್ರಹಿಸಬೇಕು. ನಗರದಲ್ಲಿ ಸಿಮೆಂಟ್ ರಸ್ತೆಗಳು ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನ ಇರುತ್ತದೆ. ತಾಪಮಾನ ತಗ್ಗಿಸಲು ಹೆಚ್ಚೆಚ್ಚು ಮರಗಿಡಗಳನ್ನು ಬೆಳೆಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಅಂಕಿ ಅಂಶಗಳನ್ನು ಸಂಗ್ರಹಿಸಲು ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ರೈತರ ಮುಖಂಡರಾದ ಮಲ್ಲೂರು ರವಿಕುಮಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಶ್ರೀನಿವಾಸ, ಗಿರೀಶ ದೇವರಮನಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

- - - -19ಕೆಡಿವಿಜಿ38:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನೆಲ, ಜಲ, ಪರಿಸರ ಸಂರಕ್ಷಣೆ ಕುರಿತು ಸಭೆ ನಡೆಯಿತು.

Share this article