ಕಾಫಿ ಬೆಳೆಗಾರರ ಸಂಕಷ್ಟ: ರೈತರ ಸಂಘ ಪ್ರತಿಭಟನೆ

KannadaprabhaNewsNetwork | Published : Sep 14, 2024 1:51 AM

ಸಾರಾಂಶ

ಕೊಡಗಿನ ಆರ್ಥಿಕ ಆಧಾರ ಸ್ತಂಭವಾಗಿರುವ ಕಾಫಿ ಕೃಷಿಯ ಸಂಕಷ್ಟಗಳನ್ನು ಅರಿತು ಸೂಕ್ತ ಸ್ಪಂದನೆ ನೀಡುವಂತೆ ಮತ್ತು ಸಿ ಮತ್ತು ಡಿ ಜಮೀನನ್ನು ಅರಣ್ಯವೆಂದು ಘೋಷಿಸಿ, ಅಲ್ಲಿರುವ ಬಡ ಮಂದಿಯನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ಕರ್ನಾಟಕ ಕಾಫಿ ರೈತರ ಸಂಘದ ಕೊಡಗು ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಆರ್ಥಿಕ ಆಧಾರ ಸ್ತಂಭವಾಗಿರುವ ಕಾಫಿ ಕೃಷಿಯ ಸಂಕಷ್ಟಗಳನ್ನು ಅರಿತು ಸೂಕ್ತ ಸ್ಪಂದನೆ ನೀಡುವಂತೆ ಮತ್ತು ಸಿ ಮತ್ತು ಡಿ ಜಮೀನನ್ನು ಅರಣ್ಯವೆಂದು ಘೋಷಿಸಿ, ಅಲ್ಲಿರುವ ಬಡ ಮಂದಿಯನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ಕರ್ನಾಟಕ ಕಾಫಿ ರೈತರ ಸಂಘದ ಕೊಡಗು ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ಕಾಫಿ ರೈತರ ಸಂಘದ ಕೊಡಗು ಘಟಕದ ಸಂಚಾಲಕ ಕೆ.ಎಚ್.ಹನೀಫ್ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನೆ ನಡೆಸಿ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಸಂಘದ ಪದಾಧಿಕಾರಿ ಡಾ.ಇ.ರ.ದುರ್ಗಾಪ್ರಸಾದ್ ಮಾತನಾಡಿ, ಕಾಫಿ ಬೆಳೆಗಾರರ ಪ್ರಮುಖ ೬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಹೋರಾಟ ರೂಪಿಸಲಾಗಿದೆ. ಇದಕ್ಕೆ ಸರ್ಕಾರ ಸೂಕ್ತ ಸ್ಪಂದನೆ ನೀಡದಿದ್ದಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುತ್ತದೆ ಎಂದು ತಿಳಿಸಿದರು. ಅತಿವೃಷ್ಟಿಯಿಂದ ಜಿಲ್ಲೆಯ ಕಾಫಿ, ಕರಿಮೆಣಸು, ಭತ್ತ, ಅಡಕೆ, ಏಲಕ್ಕಿ ಕೃಷಿಗೆ ಅಪಾರ ಹಾನಿ ಸಂಭವಿಸಿದೆ. ಇದರಿಂದ ಇದನ್ನೇ ನಂಬಿರುವ ಸಣ್ಣ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಇಂತಹ ಬೆಳೆ ಹಾನಿಗೆ ಅತ್ಯಂತ ಕನಿಷ್ಟ ಪ್ರಮಾಣದ ಪರಿಹಾರ ನೀಡಲಾಗುತ್ತಿದ್ದು, ಸರ್ಕಾರ ಬೆಳೆಗಾರರಿಗೆ ಯೋಗ್ಯ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

ಕಾಫಿ ಬೆಳೆಯುವ ಬೆಳೆಗಾರರೆಲ್ಲರಿಗೂ ಪ್ರಸ್ತುತ ಉತ್ತಮ ಧಾರಣೆ ಲಭ್ಯವಾಗುತ್ತಿದೆ ಎನ್ನುವ ಭಾವನೆ ಇದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಇರುವ ಉತ್ತಮ ಧಾರಣೆ ಸ್ಥಳೀಯ ಬೆಳೆಗಾರಿಗೆ ಲಭ್ಯವಾಗುತ್ತಿಲ್ಲ. ಬಹುತೇಕ ಲಾಭವನ್ನು ವರ್ತಕರು ಮತ್ತು ಮಧ್ಯವರ್ತಿಗಳು ಪಡೆಯುತ್ತಿದ್ದಾರೆ. ಬೆಳೆಗಾರರನ್ನು ಅವರಿಗೆ ಆಗುತ್ತಿರುವ ಅನ್ಯಾಯದಿಂದ ರಕ್ಷಿಸಬೇಕು. ಪ್ರಸ್ತುತ ಕಾಫಿ, ಅಡಕೆ ಹೊರ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಳ್ಳ ಸಾಗಣೆಯಾಗುತ್ತಿದ್ದು, ಇದನ್ನು ತಡೆಯಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ಕಾಫಿ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕಾಫಿ ಫಸಲು ರಕ್ಷಿಸಿಕೊಳ್ಳಲಾಗದ ಪರಿಸ್ಥಿತಿಯ ಜೊತೆಯಲ್ಲೆ ಜೀವ ಹಾನಿಯ ಘಟನೆಗಳು ನಡೆಯುತ್ತಿದೆ. ಇದರಿಂದ ಬೆಳೆಗಾರಿಗೆ ಸೂಕ್ತ ರಕ್ಷಣೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ರೈತರ ಸ್ವಾಧೀನದಲ್ಲಿದ್ದು, ಅದರಲ್ಲಿ ಕೃಷಿ ಮಾಡಿಕೊಂಡು ಬರುತ್ತಿರುವ ಸಿ ಮತ್ತು ಡಿ ದರ್ಜೆಯ ಜಮೀನನ್ನು ಅರಣ್ಯವೆಂದು ಏಕ ಪಕ್ಷೀಯವಾಗಿ ಘೋಷಿಸಿ ಅದನ್ನು ಮೀಸಲು ಅರಣ್ಯವನ್ನಾಗಿ ಪರಿವರ್ತಿಸುವ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಯೋಜನೆ ಕೈಬಿಡಬೇಕು. ಸರ್ಕಾರಿ ಜಾಗಗಳಲ್ಲಿ ಕೃಷಿ ಮಾಡಿಕೊಂಡು ಬರುತ್ತಿರುವ ಬಡ ರೈತರಿಗೆ ೫ ಎಕರೆ ಜಾಗವನ್ನು ಅವರಿಗೆ ನೀಡುವುದರೊಂದಿಗೆ ಆರ್‌ಟಿಸಿಯನ್ನು ಒದಗಿಸುವಂತೆ ಡಾ. ಇ.ರ.ದುರ್ಗಾಪ್ರಸಾದ್ ಸರ್ಕಾರವನ್ನು ಒತ್ತಾಯಿಸಿದರು.

ಸಂಘದ ವತಿಯಿಂದ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪ್ರಮುಖರಾದ ವಸಂತ ಕುಮಾರ್ ಹೊಸಮನೆ, ನೆಲ್ಲಿಹುದಿಕೇರಿಯ ಉದಯ ಕುಮಾರ್, ಚಿಟ್ಟಡ ಹಮೀದ್ ಇದ್ದರು.

Share this article