ಸೋಲಾರ್ ಆಧಾರಿತ ಪಂಪ್ ಸೆಟ್‌ಗೆ ಸಹಾಯಧನ

KannadaprabhaNewsNetwork |  
Published : Jul 02, 2024, 01:33 AM IST
30 | Kannada Prabha

ಸಾರಾಂಶ

, ಪ್ರಸ್ತುತ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರತವು, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಂ.3ನೇ ಸ್ಥಾನಕ್ಕೆ ಏರಿದೆ.

ಬಿ. ಶೇಖರ್ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ನೈಸರ್ಗಿಕ ಸಂಪನ್ಮೂಲಗಳಲ್ಲೇ ಬಹುಮುಖ್ಯವಾದ ಸೂರ್ಯನ ಶಕ್ತಿಯನ್ನು ಗೃಹ ಬಳಕೆ ಹಾಗೂ ವ್ಯವಸಾಯ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕಿದೆ.

ಇದಕ್ಕಾಗಿ ಕೇಂದ್ರ ಸರ್ಕಾರವು ಪಿಎಂ- ಕುಸುಮ್-ಬಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯ ಮೂಲಕ ರೈತರು ಸಹಾಯಧನದಲ್ಲಿ ತಮ್ಮ ಜಮೀನುಗಳಿಗೆ ಸೋಲಾರ್ ಆಧಾರಿತ ಪಂಪ್ ಸೆಟ್ ಗಳನ್ನು ಹಾಗೂ ಮನೆಯ ಮೇಲ್ಛಾವಣಿಗೆ ಸೋಲಾರ್ ಫಲಕಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.

ಹೌದು, ಪ್ರಸ್ತುತ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರತವು, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಂ.3ನೇ ಸ್ಥಾನಕ್ಕೆ ಏರಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಸೌರ ವಿದ್ಯುತ್ ಉತ್ಪಾದನೆಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಜೊತೆ ಜೊತೆಗೆ ಕರ್ನಾಟಕ ಸರ್ಕಾರವು ಈ ರೀತಿಯಾಗಿ ನಿಸರ್ಗದತ್ತವಾಗಿ ಸಿಗುವ ನವೀಕರಿಸಬಹುದಾದ ಸಂಪನ್ಮೂಲಗಳ ಸದ್ಬಳಕೆಗಾಗಿಯೇ ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ ಸಂಸ್ಥೆಯನ್ನು ಸ್ಥಾಪಿಸಿದೆ. ಈ ಸಂಸ್ಥೆ ಮೂಲಕ ಪವನ ವಿದ್ಯುತ್ ಉತ್ಪಾದನೆ, ಕಿರು ಜಲ ವಿದ್ಯುತ್ ಉತ್ಪಾದನೆ, ಜೈವಿಕ ವಿದ್ಯುತ್ ಸ್ಥಾವರಗಳು, ಸೌರ ಗ್ರಿಡ್ ಗಳ ಸ್ಥಾಪನೆ ಮತ್ತು ವಿದ್ಯುತ್ ಉತ್ಪಾದನೆ, ಹೀಗೆ ನೈಸರ್ಗಿಕ ಸಂಪತ್ತನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು, ಶಕ್ತಿ ಉತ್ಪಾದನೆ ಮಾಡುವಂತಹ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಅದರಲ್ಲಿ ಸೌರ ಗ್ರಿಡ್ ಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡುವಂತಹ ಯೋಜನೆಯು ನಾಡಿನ ರೈತರ ಪಾಲಿಗೆ ಆಶಾದಾಯಕವಾದ ಬೆಳವಣಿಗೆಯಾಗಿದೆ.

ಇಂದು ವಿದ್ಯುತ್ ಸಮಸ್ಯೆಯಿಂದಾಗಿ ಅದೆಷ್ಟೋ ರೈತರು ತಾವು ಬೆಳೆದ ಬೆಳೆಗೆ ನಿಶ್ಚಿತ ಸಮಯದಲ್ಲಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಲಾಗದೇ ವ್ಯಥೆ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೌರ ಫಲಕಗಳ ಮೂಲಕ ವಿದ್ಯುತ್ ಉತ್ಪಾದಿಸಿ, ಅದರ ಮೂಲಕ ಕೊಳವೆ ಬಾವಿಗಳಿಗೆ ಹಾಗೂ ಗೃಹ ಬಳಕೆಗಾಗಿ ವಿದ್ಯುತ್ ಪೂರೈಕೆ ಮಾಡಿ, ಹೆಚ್ಚುವರಿಯಾಗಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಸಂಸ್ಥೆಗೆ ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದಾಗಿದೆ.

ಪಿಎಂ ಕುಸುಮ್-ಬಿ ಯೋಜನೆ

ಪಿಎಂ- ಕುಸುಮ್-ಬಿ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಕೊರೆಸುವ ಕೊಳವೆ ಬಾವಿಗೆ ಹಾಗೂ ನಿವಾಸಿಗಳು ತಮ್ಮ ಮೇಲ್ಛಾವಣಿಯುಳ್ಳ ಮನೆಗಳಿಗೆ, ಸೋಲಾರ್ ಫಲಕಗಳನ್ನು ಅಳವಡಿಸಿಕೊಂಡು ಸೋಲಾರ್ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡು ತಮ್ಮ ದಿನನಿತ್ಯದ ಬಳಕೆಗೆ ಉಪಯೋಗಿಸಿಕೊಳ್ಳಬಹುದಾಗಿದೆ.

ಕೊಳವೆಬಾವಿಯನ್ನು ಕೊರೆಸಿ ವಿದ್ಯುತ್ ಸರಬರಾಜು ನಿಗಮದಿಂದ ವಿದ್ಯುತ್ ಸಂಪರ್ಕ ಪಡೆಯದೇ ಮೇಲ್ಕಂಡ ಯೋಜನೆಗೆ ರೈತರು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಯೋಜನೆಯ ಉಸ್ತುವಾರಿಗಾಗಿ ಸರ್ಕಾರವು ಕರ್ನಾಟಕ ವಿದ್ಯುತ್ ಸರಬರಾಜು ನಿಗಮವನ್ನು ನೋಡಲ್ ಇಲಾಖೆಯಾಗಿ ನೇಮಿಸಿದೆ. ರೈತರು ನಿಗಮದ https://kredl.karnataka.gov.in/ ವೆಬ್ ಸೈಟ್ ಭೇಟಿ ನೀಡಿ, ಅರ್ಜಿ ಆಹ್ವಾನಿಸಿದಾಗ ತಮ್ಮ ಅರ್ಜಿಯನ್ನು ಆನ್ ಲೈನ್ ನಲ್ಲಿಯೇ ಸಲ್ಲಿಸಬೇಕು.

ಸೋಲಾರ್ ಪಂಪ್ ಸೆಟ್ ಪಡೆಯಲಿಚ್ಚಿಸುವ ರೈತರ ಕೊಳವೆಬಾವಿಯು 350 ಅಡಿ ಅಂತರದ ಒಳಗಿರಬೇಕು, ಕೊಳವೆಬಾವಿಯ ಅಂತರ ಅದಕ್ಕಿಂತ ಹೆಚ್ಚಾದಲ್ಲಿ ಈ ಯೋಜನೆಯಡಿ ಸೌಲಭ್ಯ ದೊರಕುವುದಿಲ್ಲ. ಹಾಗೂ ಈ ಕೊಳವೆಬಾವಿಗೆ ಯಾವುದೇ ರೀತಿಯಲ್ಲಿ ಕೆಇಬಿ ವತಿಯಿಂದ ವಿದ್ಯುತ್ ಸಂಪರ್ಕ ಪಡೆದಿರಬಾರದು.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ರೈತರು ತಮ್ಮ ಆರ್.ಟಿ.ಸಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಎಸ್ಸಿ, ಎಸ್ಟಿ ರೈತರು ತಮ್ಮ ಜಾತಿ ಪ್ರಮಾಣ ಪತ್ರವನ್ನೊಳಗೊಂಡಿರಬೇಕು. ಒಂದು ಬಾರಿ ಅನುಷ್ಠಾನಗೊಂಡ ಈ ಘಟಕಕ್ಕೆ 5 ವರ್ಷಗಳವರೆಗೆ ಗುಣಮಟ್ಟ ಖಾತರಿಯಿರುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಸರ್ಕಾರದ ಅನುದಾನ ಲಭ್ಯತೆಯ ಆಧಾರದ ಮೇಲೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಆಗ ಆಸಕ್ತ ರೈತರು ಆನ್ ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದಕ್ಕಾಗಿ ಆಸಕ್ತರು ಆಗಾಗ್ಗೆ ಸಂಸ್ಥೆಯ ವೆಬ್ ಸೈಟ್ ಗೆ ಭೇಟಿ ನೀಡಿ, ಪರಿಶೀಲಿಸುತ್ತಿರಬೇಕು.

ಈ ಯೋಜನೆಯಡಿ ಫಲಾನುಭವಿಯಾದ ಸಾಮಾನ್ಯ ವರ್ಗದ ರೈತರು ಶೇ.40 ರೈತರ ವಂತಿಕೆಯನ್ನು ಹಾಗೂ ಎಸ್ಸಿ, ಎಸ್ಟಿ ರೈತರು ಶೇ.20 ರೈತರ ವಂತಿಕೆಯನ್ನು ತಮ್ಮ ವ್ಯಾಪ್ತಿಯ ಉಪ ವಿಭಾಗೀಯ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಯವರಿಗೆ ಡಿಡಿ ಮೂಲಕ ಸಲ್ಲಿಸಬೇಕಾಗಿರುತ್ತದೆ. ಪಿಎಂ ಕುಸುಮ್-ಬಿ ಯೋಜನೆಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.60 ಸಹಾಧನವನ್ನು ಹಾಗೂ ಎಸ್ಸಿ, ಎಸ್ಟಿ ರೈತರಿಗೆ ಶೇ.80 ಸಹಾಯಧನ ಒದಗಿಸಲಾಗುತ್ತದೆ.

----

-- ಬಾಕ್ಸ್...--

-- ಹೆಚ್ಚುವರಿ ಸೌರಶಕ್ತಿ ವಿದ್ಯುತ್ ಮಾರಾಟ--

ಪ್ರಸ್ತುತ ಮೈಸೂರು ತಾಲೂಕಿನ ವರುಣ ಹೋಬಳಿ ವ್ಯಾಪ್ತಿಯ ಮಾಧವಗೆರೆ ಗ್ರಾಮದ ಶ್ರೀನಿವಾಸ ಮೂರ್ತಿ ಮತ್ತು ಇನಾಂ ಉತ್ತನಹಳ್ಳಿಯ ಥಾಮಸ್ ಅವರು ಪಿಎಂ ಕುಸುಮ್-ಬಿ ಯೋಜನೆಯಡಿ ತಮ್ಮ ಜಮೀನುಗಳಿಗೆ ಹಾಗೂ ಮನೆಗಳಿಗೆ ಸೌರ ಫಲಕಗಳನ್ನು ಅಳವಡಿಸಿಕೊಂಡು, ಸ್ವಾಭಾವಿಕವಾಗಿ ಸಿಗುವ ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿ ತಮ್ಮ ದಿನನಿತ್ಯದ ಅವಶ್ಯಕತೆಗಳಿಗೆ ಬಳಸುತ್ತಿದ್ದಾರೆ.

ಥಾಮಸ್ ಅವರು ತಮ್ಮ ಗೃಹಬಳಕೆಗಲ್ಲದೇ ಹೆಚ್ಚುವರಿಯಾಗಿ 10 ಕೆ.ವಿ. ವಿದ್ಯುತ್ ಅನ್ನು ಉತ್ಪಾದಿಸಿ, ಪ್ರತಿ ತಿಂಗಳು ವಿದ್ಯುತ್ ನಿಗಮಕ್ಕೆ ಮಾರಾಟ ಮಾಡುವ ಮೂಲಕ ತಿಂಗಳಿಗೆ 10 ರಿಂದ 12 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ತಮ್ಮ ವ್ಯವಸಾಯ ಕ್ಷೇತ್ರದಲ್ಲಿ ಹಾಗೂ ಗೃಹ ಬಳಕೆ ವ್ಯಾಪ್ತಿಯಲ್ಲಿ ತಮ್ಮ ಖರ್ಚುಗಳನ್ನು ಮಿತಗೊಳಿಸಿ ಆದಾಯದಲ್ಲಿ ಹೆಚ್ಚಳಿಕೆಯನ್ನು ಕಂಡಿರುತ್ತಾರೆ ಎಂದು ಕೃಷಿ ಇಲಾಖೆಯ ಮೈಸೂರಿನ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಸ್.ಜೆ. ಹೇಮಂತ್ ತಿಳಿಸಿದ್ದಾರೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ