-ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಸಲಹೆ
18 ವರ್ಷದ ಒಳಗಡೆ ಇರುವ ಎಳೆ ವಯಸ್ಸಿನ ಹೆಣ್ಣು ಮಕ್ಕಳನ್ನು ದಾಂಪತ್ಯಕ್ಕೆ ದೂಡಬೇಡಿ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಸಲಹೆ ನೀಡಿದರು.
ನೆಹರು ನಗರದ ಆರೋಗ್ಯ ಕೇಂದ್ರದಲ್ಲಿ ನಡೆದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಮಾಹಿತಿ ನೀಡಿದ ಅವರು ಎಳೆ ವಯಸ್ಸಿಗೆ ಮದುವೆ ಮಾಡಿ ಅಪಾಯ ತಂದುಕೊಳ್ಳಬೇಡಿ. ಅಂತರದ ಹೆರಿಗೆ, ಕುಟುಂಬ ಯೋಜನೆ, ಚಿಕ್ಕ ಕುಟುಂಬದ ಆದರ್ಶ ಪಾಲಿಸುವುದರ ಕಡೆ ಗಮನ ಕೊಡಿ ಎಂದರು.ಬಾಲಿಕಾ ಗರ್ಭಧಾರಣೆ ನಿಯಂತ್ರಿಸಲು ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ನಿಲ್ಲಿಸದಿದ್ದಲ್ಲಿ ತಾಯಿ ಮರಣ, ಶಿಶು ಮರಣ ಪ್ರಮಾಣ ಹೆಚ್ಚಾಗುತ್ತದೆ. ತೊಡಕಿನ ಗರ್ಭಿಣಿಯರು ಆಸ್ಪತ್ರೆಯಲ್ಲಿ ಮೂರು ಬಾರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪರೀಕ್ಷೆಗೆ ಒಳಪಟ್ಟರೆ ಒಟ್ಟು ರು.300 ಫಲಾನುಭವಿಯ ಬ್ಯಾಂಕ್ ಖಾತೆಗೆ ಸೇವಾ ಸಿಂಧು ಪೋರ್ಟಲ್‍ನಿಂದ ಅರ್ಜಿ ಸಲ್ಲಿಸಿದವರಿಗೆ ಜಮಾ ಮಾಡಲಾಗುವುದು ಎಂದರು.
ಮಧುಮೇಹ, ರಕ್ತದೊತ್ತಡ, ಅಸ್ತಮಾ, ಮೊದಲ ಹೆರಿಗೆ ಸಿಜೇರಿಯನ್ ಆದವರು, ಅವಳಿ ಮಕ್ಕಳ ಹೊಂದಿದವರು ಪ್ರತಿ ತಿಂಗಳು 24ನೇ ತಾರೀಖು ವಿಶೇಷ ಗರ್ಭಿಣಿಯರ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು. ರಕ್ತಹೀನತೆ ತಡೆಯಲು ಕಬ್ಬಿಣಾಂಶದ ಮಾತ್ರೆ ಪಡೆದು ತಾಯಂದಿರು ಆರೋಗ್ಯವಂತ ಮಗುವನ್ನು ಹೆತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಉಪ್ಪು ನೀರಿನಿಂದ ಸ್ವಚ್ಛಗೊಳಿಸಿ ಹಸಿ ತರಕಾರಿ ಹಾಗೂ ಮೊಳಕೆ ಕಾಳುಗಳು ಮತ್ತು ದಾವಣಗೆರೆ ಮಿಕ್ಸ್ ಶೇಂಗಾ, ಬೆಲ್ಲ, ಹುರಿಗಡಲೆ, ವಡ್ರಾಗಿ ಹಿಟ್ಟು, ಸಮ ಪ್ರಮಾಣದಲ್ಲಿ ಬೆರೆಸಿ ಗಂಜಿ ಇಲ್ಲವೇ ಉಂಡೆ ತಯಾರಿಸಿ ಪ್ರತಿದಿನ ಬಳಕೆ ಮಾಡಿದರೆ ಕೆಂಪು ರಕ್ತ ಕಣಗಳ ವೃದ್ಧಿಯಾಗುವುದಲ್ಲದೆ, ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು. ಫಾರ್ಮಸಿ ಅಧಿಕಾರಿ ಆಸಿಯಾ, ಪ್ರಯೋಗಶಾಲಾ ತಂತ್ರಜ್ಞೆ ಪೂರ್ಣಿಮಾ, ಶುಶ್ರೂಷಾಣಾಧಿಕಾರಿ ಮನು, ಆಶಾ ಕಾರ್ಯಕರ್ತೆಯರಾದ ಭಾಗ್ಯಮ್ಮ, ಕೆಂಚಮ್ಮ ಲಿಖಿತಾ ಇದ್ದರು.
ಪೋಟೋ: ಚಿತ್ರದುರ್ಗ ನೆಹರು ನಗರ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿದರು.
ಫೋಟೋ:9 ಸಿಟಿಡಿ6