ಪ್ರಧಾನಿ ಮೋದಿ ಹೇಳಿಕೆ ಹಾಸ್ಯಾಸ್ಪದ: ಸಚಿವ ಶರಣಪ್ರಕಾಶ್ ಟೀಕೆ

KannadaprabhaNewsNetwork |  
Published : Mar 19, 2024, 12:47 AM ISTUpdated : Mar 19, 2024, 12:48 AM IST
ಕಲಬುರಗಿ, ಇತ್ತೀಚೆಗೆ ಕಲಬುರಗಿ ನಗರಕ್ಕೆ ಭೇಟಿ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲ್ಲಿಕಾರ್ಜುನ ಖರ್ಗೆ ಕೊಡುಗೆ ಏನೂ ಇಲ್ಲ ಎಂದಿರುವುದು ಹಾಸ್ಯಾಸ್ಪದ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು. | Kannada Prabha

ಸಾರಾಂಶ

ಇತ್ತೀಚೆಗೆ ಕಲಬುರಗಿ ನಗರಕ್ಕೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲ್ಲಿಕಾರ್ಜುನ ಖರ್ಗೆ ಕೊಡುಗೆ ಏನೂ ಇಲ್ಲ ಎಂದಿರುವುದು ಹಾಸ್ಯಾಸ್ಪದ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇತ್ತೀಚೆಗೆ ಕಲಬುರಗಿ ನಗರಕ್ಕೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲ್ಲಿಕಾರ್ಜುನ ಖರ್ಗೆ ಕೊಡುಗೆ ಏನೂ ಇಲ್ಲ ಎಂದಿರುವುದು ಹಾಸ್ಯಾಸ್ಪದ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ಖರ್ಗೆ ಕೊಡುಗೆ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. 2013-2018 ಅವಧಿಯಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು, ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋಧನಾ ಸಂಸ್ಥೆ ಸ್ಥಾಪನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ₹1000 ಕೋಟಿ ಅನುದಾನ ನೀಡುವುದರಿಂದ ಈಗ ವಾರ್ಷಿಕ ₹5000 ಕೋಟಿ ಅನುದಾನ ನೀಡಲಾಗಿದೆ. ಇದೆಲ್ಲವೂ ಸಾಧ್ಯವಾಗಿದ್ದರ ಹಿಂದೆ ಖರ್ಗೆ ಅವರು 371(ಜೆ) ಜಾರಿಗೆ ತಂದಿದ್ದು ಪ್ರಮುಖ ಕಾರಣ ಎಂಬುದನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಕಲ್ಯಾಣ ಕರ್ನಾಟಕ ಭಾಗದ ಒಬ್ಬನೇ ಒಬ್ಬ ಶಾಸಕರಿಗೂ ಸಚಿವ ಸ್ಥಾನ ನೀಡಿರಲಿಲ್ಲ. ಮತ್ತೊಂದೆಡೆ, ಹಾಲಿ ಕಾಂಗ್ರೆಸ್ ಸರಕಾರ ಕಲ್ಯಾಣ ಕರ್ನಾಟಕ ಭಾಗದ ಎಂಟು ಶಾಸಕರಿಗೆ ಸಚಿವ ಸ್ಥಾನ ನೀಡಿದೆ. ಇದರ ಮೇಲೆಯೇ ಕಾಂಗ್ರೆಸ್ ಪಕ್ಷಕ್ಕೆ ಈ ಭಾಗದ ಮೇಲೆ ಎಷ್ಟು ಕಾಳಜಿಯಿದೆ ಎಂಬುದು ಅರ್ಥವಾಗುತ್ತದೆ ಎಂದರು.

ಆಯುಷ್ಮಾನ್ ಭಾರತ್ ಯೋಜನೆಗೆ ಕೇಂದ್ರ ಸರಕಾರ ಕೇವಲ ₹400ರಿಂದ ₹500 ಕೋಟಿ ಅನುದಾನ ನೀಡುತ್ತಿದೆ. ಇನ್ನೊಂದೆಡೆ, ರಾಜ್ಯ ಸರಕಾರ ₹1200-1300 ಕೋಟಿ ನೀಡುತ್ತಿದೆ. ಉದ್ದೇಶಪೂರ್ವಕವಾಗಿಯೇ ಕೇಂದ್ರ ಸರಕಾರ ಕರ್ನಾಟಕ ಮತ್ತು ಕೇರಳ ರಾಜ್ಯಕ್ಕೆ ಏಮ್ಸ್ ನೀಡಿಲ್ಲ. ಪ್ರಧಾನಿ ಮೋದಿ ಅವರಿಗೆ ಕಲಬುರಗಿ ಮೇಲೆ ವಕ್ರದೃಷ್ಟಿ ಇರುವುದೇ ಇದಕ್ಕೆ ಕಾರಣ ಎಂದು ವ್ಯಾಖ್ಯಾನಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಸುಭಾಷ್ ರಾಠೋಡ್, ಮಹಾಂತಪ್ಪ ಸಂಗಾವಿ ಸೇರಿದಂತೆ ಇತರರಿದ್ದರು.

ಚುನಾವಣಾ ಬಾಂಡ್ ದೊಡ್ಡ ಹಗರಣ: ಚುನಾವಣಾ ಬಾಂಡ್ ಹೆಸರಿನಲ್ಲಿ ₹6300 ಕೋಟಿ ಹಗರಣ ನಡೆದಿದೆ. ಇದು ಕೇಂದ್ರದ ಬಿಜೆಪಿ ಸರಕಾರದ ಬಹುದೊಡ್ಡ ಹಗರಣ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಟೀಕಿಸಿದರು. ಈ ಕುರಿತು ಸ್ವತಃ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಇಷ್ಟೆಲ್ಲಾ ದೊಡ್ಡ ಹಗರಣ ನಡೆದಿದ್ದರೂ ಕರ್ನಾಟಕದ ರಾಜ್ಯ ಸರಕಾರ ಕಾಂಗ್ರೆಸ್ ಹೈಕಮಾಂಡ್ ಪಾಲಿನ ಟಿಎಂ ಎಂದಿದ್ದಾರೆ. ಈ ಆರೋಪ ಖಂಡಿತ ಸುಳ್ಳು ಆರೋಪವಾಗಿದ್ದು, ಕೇಂದ್ರ ಸರಕಾರವೇ ಕಾರ್ಪೊರೇಟ್ ಕಂಪನಿಗಳನ್ನು ಎಟಿಎಂ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂದರು.

ಜಾಧವ್ ಪರಿಚಯ ಮಾಡಿಸಿದ್ದು ಸರಿ: ಕಲಬುರಗಿ ನಗರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ವೇದಿಕೆಯ ಮೇಲೆ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರನ್ನು ಎದರುಗಿದ್ದ ಸಭಿಕರಿಗೆ ಪರಿಚಯಿಸುವ ಮೂಲಕ ಸರಿಯಾದ ಕೆಲಸ ಮಾಡಿದ್ದಾರೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಲೇವಡಿ ಮಾಡಿದರು. ಸಂಸದ ಜಾಧವ್ ಕಳೆದ ಐದು ವರ್ಷಗಳಿಂದ ಏನೂ ಮಾಡಿಲ್ಲ. ಮೇಲಾಗಿ ಜನರೊಂದಿಗೆ ಬೆರೆತಿಲ್ಲ. ಇದರಿಂದಾಗಿ, ಜಾಧವ್ ಅವರನ್ನು ಜನರು ಮರೆತು ಹೋಗಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಪ್ರಧಾನಿ ಮೋದಿ ಸಂಸದ ಜಾಧವ್ ಅವರನ್ನು ಪರಿಚಯಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ