ಹುಬ್ಬಳ್ಳಿ:
ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆ ಅಡಿ ಉತ್ತಮ ಸಾಧನೆಗಾಗಿ ಹು-ಧಾ ಮಹಾನಗರ ಪಾಲಿಕೆಗೆ ಮೂರು ಪ್ರಶಸ್ತಿಗಳು ಲಭಿಸಿವೆ.ಬೆಂಗಳೂರಿನ ವಿಕಾಸಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ನೋಡಲ್ ಅಧಿಕಾರಿ ರಮೇಶ ನೂಲ್ವಿ, ಸಮುದಾಯ ವ್ಯವಹಾರ ಅಧಿಕಾರಿಗಳಾದ ಅರವಿಂದ ಜಮಖಂಡಿ, ಸರೋಜಾ ಪೂಜಾರ, ಅಭಿಯಾನ ವ್ಯವಸ್ಥಾಪಕ ಅಬ್ದುಲ್ ರಜಾಕ್ ಗಡವಾಲೆ, ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ರವಿ ಮುನವಳ್ಳಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ಫಲಾನುಭವಿ ಇಸ್ಮಾಯಿಲ್ ಬಿಳೆಪಸಾರೆ, ಪಟ್ಟಣ ಮಾರಾಟ ಸಮಿತಿ ಸದಸ್ಯ ಆದಮಸಾಬ ಮುಲ್ಲಾನವರ ಪ್ರಶಸ್ತಿ ಸ್ವೀಕರಿಸಿದರು.ಬೀದಿಬದಿ ವ್ಯಾಪಾರಿಗಳು, ಚಿಂದಿ ಆಯುವವರು, ಹಾಲು, ಪತ್ರಿಕೆ ವಿತರಕರು ಸೇರಿದಂತೆ ಅತಿ ಹೆಚ್ಚು ಜನರಿಗೆ ಸಾಲ ವಿತರಣೆಯಲ್ಲಿ ರಾಷ್ಟ್ರಮಟ್ಟದಲ್ಲಿ 2ನೇ ಹಾಗೂ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನವನ್ನು ಹು-ಧಾ ಮಹಾನಗರ ಪಾಲಿಕೆ ಪಡೆದಿದೆ. ಈ ಯೋಜನೆ ಅಡಿ 22,689 ಜನರಿಗೆ ಸಾಲ ವಿತರಿಸಲಾಗಿದೆ. ಅದರಲ್ಲಿ 16,740 ಫಲಾನುಭವಿಗಳು ಮೊದಲ ಕಂತು, 4657 ಫಲಾನುಭವಿಗಳು ಎರಡನೇ ಕಂತು ಮತ್ತು 1292 ಫಲಾನುಭವಿಗಳು ಮೂರನೇ ಕಂತಿನ ಸಾಲ ಪಡೆದಿದ್ದಾರೆ. ‘ಸ್ವನಿಧಿ ಸೇ ಸಮೃದ್ಧಿ’ ಯೋಜನೆ ಅಡಿ ಉತ್ತಮ ಸಾಧನೆಗಾಗಿ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದೆ. ಇದರ ಅಡಿ ಪಿ.ಎಂ ಸುರಕ್ಷಾ ಬಿಮಾ ಯೋಜನೆಯಿಂದ 23,305, ಪಿಎಂ ಜೀವನ ಜ್ಯೋತಿ ಯೋಜನೆ -17,514, ಪಿ.ಎಂ. ಜನ್ ಧನ್ ಯೋಜನೆ 1498, ಒನ್ ನೇಷನ್ ಒನ್ ರೇಷನ್ ಕಾರ್ಡ್ 1785, ಪಿಎಂ ಶ್ರಮಯೋಗಿ ಮನ್ ಧನ್ ಯೋಜನೆ 493, ಕಾರ್ಮಿಕ ಇಲಾಖೆಯ ಗುರುತಿನ ಚೀಟಿ 846, ಮಾತೃ ವಂಧನ 26 ಮತ್ತು ಜನನಿ ಸುರಕ್ಷಾ ಯೋಜನೆ ಅಡಿ 126 ಫಲಾನುಭವಿಗಳು ಲಾಭ ಪಡೆದಿದ್ದಾರೆ.ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಪಿ.ಐ. ಶ್ರೀವಿದ್ಯಾ, ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಸೇರಿದಂತೆ ಹಲವರಿದ್ದರು.