ಕವಿ, ಕಾವ್ಯದ್ದು ತಾಯಿ-ಮಗನ ಸಂಬಂಧ: ಭಜಂತ್ರಿ

KannadaprabhaNewsNetwork | Published : Jul 29, 2024 12:46 AM

ಸಾರಾಂಶ

ಕವಿ, ಕಾವ್ಯವನ್ನು ಬೇರ್ಪಡಿಸಿ ನೋಡಲು ಆಗವುದಿಲ್ಲ, ಅದು ಕರುಳಬಳ್ಳಿಯ ಸಂಬಂಧ, ತಾಯಿ-ಮಗನ ಸಂಬಂಧ ಇದ್ದಂತೆ.

ಜಾಲಿಮರದಲ್ಲೊಂದು ಜಾಜಿಮಲ್ಲಿಗೆ ಕೃತಿ ಲೋಕಾರ್ಪಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕವಿ, ಕಾವ್ಯವನ್ನು ಬೇರ್ಪಡಿಸಿ ನೋಡಲು ಆಗವುದಿಲ್ಲ, ಅದು ಕರುಳಬಳ್ಳಿಯ ಸಂಬಂಧ, ತಾಯಿ-ಮಗನ ಸಂಬಂಧ ಇದ್ದಂತೆ ಎಂದು ಹಿರಿಯ ಪ್ರಾಧ್ಯಾಪಕ ಡಾ. ವೈ.ಎಂ. ಭಜಂತ್ರಿ ಹೇಳಿದರು.

ಶಕ್ತಿ ಶಾರದೆ ಮೇಳ ಹಾಗೂ ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕೊಪ್ಪಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ‌ಸತ್ಯಾನಂದ ಪಾತ್ರೋಟ ಅವರ ಆತ್ಮಕಥನ ಜಾಲಿಮರದಲ್ಲೊಂದು ಜಾಜಿಮಲ್ಲಿಗೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾವ್ಯ ಮಾತನಾಡುವುದಕ್ಕೆ ಬರುವುದಿಲ್ಲ, ಅದು ಅನುಭವಿಸುವುದಕ್ಕೆ ಇರುವಂತಹದ್ದು. ಬರೆದು ಗಳಿಸಿದವರು ಅನೇಕರು ಸಿಗುತ್ತಾರೆ. ಆದರೆ, ಬರೆದು ಕಳೆದು ಕೊಂಡವರಲ್ಲಿ ಪಾತ್ರೋಟ ಅವರು ಮೊದಲು ನಿಲ್ಲುತ್ತಾರೆ. ಅವರು ಎಂದೂ ಸಹ ನಿರೀಕ್ಷೆ ಅಥವಾ ಫಲಾಪೇಕ್ಷೆಯಿಂದ ಸಾಹಿತ್ಯವನ್ನು ರಚನೆ ಮಾಡಿಲ್ಲ, ಸಾಹಿತ್ಯಕ್ಕಾಗಿಯೇ ಅವರು ದುಡಿದಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸಾಹಿತ್ಯ ಕೃಷಿ ಮಾಡಿದ ಹಿರಿಮೆ ಅವರದು. ಅವರು ದಲಿತ ಸಾಹಿತ್ಯದ ಸಂತ. ದಲಿತನಾಗಿ ಅನುಭವಿಸಿದ ನೋವುಗಳನ್ನೇ ದಾಖಲಿಸಿದ್ದಾರೆ. ಈ ಮೂಲಕ‌ ಬಂಡಾಯದ ಮನೋಧರ್ಮ ಅವರಲ್ಲಿ ಬೆಳೆಯಿತು.‌ ಕಾವ್ಯ ಸುಮ್ಮನೇ ಹುಟ್ಟುವುದಿಲ್ಲ. ಅದು ಸಂಕಟಗಳನ್ನು ಅನುಭವಿಸಿದ ಮೇಲೆ ಹುಟ್ಟುತ್ತದೆ. ಇಂಥ ಸಂಕಟಗಳನ್ನು ಒಳಗೊಂಡಿರುವ ಜಾಲಿಮರದಲ್ಲೊಂದು ಜಾಲಿ ಮಲ್ಲಿಗೆ ಕೃಷಿ ಎಸಿ ಹಾಲ್ ನಲ್ಲಿ ಬಿಡುಗಡೆಯಾಗುವುದಲ್ಲ, ಅದು ದಲಿತ ಕೇರಿಯಲ್ಲಿ ಬಿಡುಗಡೆಯಾಗಬೇಕು. ಅಲ್ಲಿರುವ ದಲಿತ ಮಕ್ಕಳು ಅದರಿಂದ ಪ್ರೇರಿತವಾಗಿ ಬದುಕುಕಟ್ಟಿಕೊಳ್ಳವಂತೆ ಆಗಬೇಕು ಎಂದರು.

ಸಾಹಿತಿ ಮಾಲಾ ಬಡಿಗೇರ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಜಾಲಿ‌ಮರ ಎನ್ನುವುದು ಯಾತನೆ, ನೋವಿನ ಪ್ರತೀಕ.‌ ಅಂತಹ ಜಾಲಿ‌ ಮರದಲ್ಲಿ ಜಾಜಿ‌ಮಲ್ಲಿಗೆ‌ ಅರಳುವ ಕಲ್ಪನೆ ನೋವುಂಡು ಬೆಳೆದಿರುವುದನ್ನು ಡಾ. ಪಾತ್ರೋಟ ದಾಖಲಿಸಿದ್ದಾರೆ. ಬಡತನದಲ್ಲಿಯೂ ಬೆಳೆದರೂ ಸಹ ಅವರು ತಮ್ಮ. ಕಾವ್ಯದ ಮೂಲಕ‌ ಬೆಳೆದವರು. ಕಾವ್ಯದ ಶಕ್ತಿಯೇ ಅಂತಹದ್ದು ಎಂದರು.

ಸಾಹಿತಿ ಎ.ಎಂ. ಮದರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಸತ್ಯಾನಂದ ಪಾತ್ರೋಟ, ಸಮತಾ ಪಾತ್ರೋಟ‌ ಇದ್ದರು.‌

ಸಂತಾಪ: ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾಜಶೇಖರ ಅಂಗಡಿ ಹಾಗೂ ಚುಸಾಪ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಂಡಗಿ ಅವರ ನಿಧನಕ್ಕೆ ಸಂತಾಪ ಸಲ್ಲಿಸಲಾಯಿತು.

ಸಾಹಿತಿ ಡಿ.ಎಂ. ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹೇಶ ಬಳ್ಳಾರಿ ಕಾರ್ಯಕ್ರಮ ನಿರೂಪಿಸಿದರು. ಗಾಯಕ ಮೆಹಬೂಬಸಾಬ ಕಿಲ್ಲೇದಾರ ಗೀತಗಾಯನ ನೀಡಿದರು. ರಮೇಶ ಬನ್ನಿಕೊಪ್ಪ, ಮಂಜುಳಾ ಶ್ಯಾವಿ ಕವನ ವಾಚನ ಮಾಡಿದರು.

Share this article