ಕನ್ನಡಪ್ರಭ ವಾರ್ತೆ ಮಂಡ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಲು ಪೊಲೀಸರು, ಗೃಹ ರಕ್ಷಕದಳ ಸಿಬ್ಬಂದಿ ಸೇವೆ ಜೊತೆಗೆ ವಿವಿಧ ಶಾಲಾ, ಕಾಲೇಜುಗಳ ಎನ್‌ಸಿಸಿ, ಎನ್‌ಎಸ್‌ಎಸ್, ಸೇವಾದಳ ಸೇವಕರ ಪಾತ್ರ ಮಹತ್ತವಾಗಿದೆ.ಪೊಲೀಸ್ ಇಲಾಖೆ 3 ದಿನಗಳ ಸಮ್ಮೇಳನದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಲು ಸಹಾಯವಾಣಿ ಕೇಂದ್ರ ತೆರೆಯುವ ಜೊತೆಗೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಕೈಗೊಂಡ ಮುಂಜಾಗೃತ ಕ್ರಮಗಳು, ಸೂಕ್ತ ಬಂದೋಬಸ್ತ್, ಸುಗಮ ಸಂಚಾರ ವ್ಯವಸ್ಥೆಗಳು ಕನ್ನಡ ನುಡಿ ಹಬ್ಬ ಯಶಸ್ವಿಯಾಗಲು ಕಾರಣವಾಯಿತು.
ಸಮ್ಮೇಳನದ ಹಿಂದಿನ ದಿನದಿಂದ ಮೊದಲ ದಿನ ಸಮ್ಮೇಳನಾಧ್ಯಕ್ಷರು, ಜಾನಪದ ಕಲಾ ತಂಡಗಳ ಮೆರವಣಿಗೆಯಿಂದ ಆರಂಭವಾದ ಪೊಲೀಸರ ಕರ್ತವ್ಯ ಹಗಲು, ರಾತ್ರಿ, ಬಿಸಿಲು, ಮಳೆ ಎನ್ನದೆ ನಿರಂತರವಾಗಿ ಕೊನೆ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿಯುವರೆಗೂ ಪ್ರತಿಯೊಂದು ವಿಭಾಗಗಳಲ್ಲೂ ಕೆಲವೊಂದು ಗೊಂದಲಗಳನ್ನು ಹೊರತು ಪಡಿಸಿ ಯಾವುದೇ ಲೋಪಗಳು ಆಗದಂತೆ ಕೈಗೊಂಡ ಅಗತ್ಯ ಸೂಕ್ತ ಭದ್ರತಾ ಕ್ರಮಗಳು ಶ್ಲಾಘನೀಯವಾಗಿತ್ತು.ಸಿಎಂ, ಡಿಸಿಎಂ, ಸಚಿವರು, ಅಧಿಕಾರಿಗಳ ಭದ್ರತೆ ಜೊತೆಗೆ ಜಾನಪದ ಕಲಾ ತಂಡಗಳ ಮೆರವಣಿಗೆ ನಂತರ ಸಮ್ಮೇಳನದ ಪ್ರಧಾನ ವೇದಿಕೆ, ಸಮಾನಂತರ ವೇದಿಕೆಗಳಲ್ಲಿ ನಡೆದ ಕಾರ್ಯಕ್ರಮಗಳು, ಪುಸ್ತಕ, ವಾಣಿಜ್ಯ ಮಳಿಗೆಗಳು, ಊಟದ ಕೌಂಟರ್ ಗಳ ಬಳಿ ಸಾಹಿತಿಗಳು ಸೇರಿದಂತೆ ಗಣ್ಯರು, ಕನ್ನಾಡಭಿಮಾನಿಗಳು, ಸಾರ್ವಜನಿಕರೊಂದಿಗೆ ತಾಳ್ಮೆಯಿಂದಲೇ ವರ್ತಿಸಿ ಪ್ರತಿಯೊಂದು ವಿಭಾಗದಲ್ಲಿ ಕಾವಲುಗಾರರಾಗಿ ನೀಡಿದ ರಕ್ಷಣೆ ಮೆಚ್ಚುವಂತದ್ದು.
ಅದರಲ್ಲೂ ಸಮ್ಮೇಳನಕ್ಕೆ ಬರುವವರಿಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ ರೀತಿ, ಪೊಲೀಸ್ ಇಲಾಖೆ, ಸಂಚಾರಿ ಪೊಲೀಸರು ಸಮ್ಮೇಳನದ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ಗೆ ಕೈಗೊಂಡ ವ್ಯವಸ್ಥಿತ ಕ್ರಮಗಳು ಉತ್ತಮವಾಗಿತ್ತು.ವಿವಿಧ ಜಿಲ್ಲೆಗಳಿಂದ ಸಾವಿರಾರು ಪೊಲೀಸರು:
ಸಮ್ಮೇಳನದ ಭದ್ರತೆಗಾಗಿ ಪಶ್ಚಿಮ ವಲಯ ವ್ಯಾಪ್ತಿಯ ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಸೆಂಟ್ರಲ್ ವಲಯದ ಬೆಂಗಳೂರು ಗ್ರಾಮಾಂತರ, ಕೋಲಾರ, ಕೆಜಿಎಫ್, ರಾಮನಗರ, ತುಮಕೂರು, ದಕ್ಷಿಣವಲಯದ - ಮಂಡ್ಯ ಸೇರಿದಂತೆ ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಿಂದ ಸಾವಿರಾರು ಪೊಲೀಸರನ್ನು ಕರೆತರಲಾಗಿತ್ತು.ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಮೂವರು ಪೊಲೀಸ್ ವರಿಷ್ಠಾಧಿಕಾರಿಗಳು, ಆರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 22 ಮಂದಿ ಡಿವೈಎಸ್ಪಿ, 59 ಸಿಪಿಐ, 160 ಪಿಎಸ್ ಐ, 215 ಎಎಸ್ ಐ, 180 ಮಂದಿ ಮುಖ್ಯಪೇದೆ, ಪೇದೆಗಳು, 13 ಕೆಎಸ್ ಆರ್ ಪಿ, 12 ಡಿಎಆರ್ ಜೊತೆಗೆ 1200 ಗೃಹರಕ್ಷಕ ದಳದ ಸಿಬ್ಬಂದಿಗಳು ಸಮ್ಮೇಳನದ ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಸಹಾಯವಾಣಿಯಲ್ಲಿ ಹಲವು ದೂರುಗಳು:ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾರ್ವಜನಿಕರ ದೂರುಗಳನ್ನು ಆಲಿಸಲು ಪೊಲೀಸ್ ಇಲಾಖೆ ಸಹಾಯವಾಣಿ ತೆರೆದಿತ್ತು. 3 ದಿನಗಳ ಕಾಲವೂ ಮಕ್ಕಳ ನಾಪತ್ತೆ ದೂರುಗಳು ಹೆಚ್ಚಾಗಿ ಕಂಡು ಬಂದವು. ಮೊದಲ ದಿನ ಮೂವರು ಮಕ್ಕಳು ನಾಪತ್ತೆ ದೂರು ಬಂದಿದ್ದು, ಪೊಲೀಸರು ಕೈಗೊಂಡ ತಕ್ಷಣ ಕ್ರಮದಿಂದ ಮಕ್ಕಳು ಪತ್ತೆಯಾಗಿದ್ದಾರೆ. ಇದರ ಜೊತೆಗೆ ವ್ಯಕ್ತಿಯೊಬ್ಬ 30 ಸಾವಿರ ಕಳೆದುಕೊಂಡಿದ್ದು, ಮೊಬೈಲ್ , ಬೈಕ್ ಕಳುವಾಗಿರುವ ಬಗ್ಗೆ ದೂರುಗಳು ಬಂದಿವೆ. ಇದರಲ್ಲಿ ಬೈಕ್ ಪತ್ತೆ ಮಾಡಿ ಮಾಲೀಕರಿಗೆ ಪೊಲೀಸರು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಮ್ಮೇಳನದ 2ನೇ ದಿನ 10 ಮಕ್ಕಳು ನಾಪತ್ತೆ ದೂರುಗಳು ಬಂದಿದ್ದು, ಎಲ್ಲ ಮಕ್ಕಳನ್ನು ಪೊಲೀಸರು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಕೊನೆ ದಿನ ಐದು ಮಕ್ಕಳ ನಾಪತ್ತೆ ದೂರುಗಳು ದಾಖಲಾಗಿದ್ದು, ಎಲ್ಲರನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಜನರು ಮೊಬೈಲ್ , ಹಣ ಕಳೆದುಕೊಂಡಿರುವ ಬಗೆಗೂ ಸಹಾಯವಾಣಿಯಲ್ಲಿ 50ಕ್ಕು ಹೆಚ್ಚು ದೂರುಗಳು ದಾಖಲಾಗಿವೆ.ಪೊಲೀಸರಿಗೆ ನೆರವಾದ ಎನ್ ಸಿಸಿ, ಎನ್ ಎಸ್ ಎಸ್ ವಿದ್ಯಾರ್ಥಿಗಳು:
ಸಾಹಿತ್ಯ ಸಮ್ಮೇಳನದಲ್ಲಿ ಪೊಲೀಸರ ಭದ್ರತೆ ಜೊತೆಗೆ ಸ್ವಚ್ಛತೆ ಮತ್ತು ಸಾಹಿತ್ಯಾಭಿಮಾನಿಗಳು, ಸಾರ್ವಜನಿಕರಿಗೆ ಬೇಕಾದ ಅಗತ್ಯ ಸಲಹೆಗಳನ್ನು ನೀಡಿ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಜಿಲ್ಲೆಯ ವಿವಿಧ ಕಾಲೇಜುಗಳ 2800ಕ್ಕು ಹೆಚ್ಚು ಎನ್ ಸಿಸಿ, ಎನ್ ಎಸ್ ಎಸ್ , ಸೇವಾ ದಳದ ವಿದ್ಯಾರ್ಥಿಗಳ ಸೇವೆ, ಸ್ವಯಂ ಸೇವಕರ ಪಾತ್ರ ಮೆಚ್ಚುಗೆಗೆ ಪಾತ್ರವಾಯಿತು.