ಕಾರವಾರ: ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮುಗ್ಧ ಜನರನ್ನು ಬೆದರಿಸುವ, ವಂಚಿಸುವ ಕೆಲಸ ನಡೆಯುತ್ತಿದೆ. ಎಲ್ಲೋ ಕುಳಿತು, ಯಾರದ್ದೋ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೂಡಾ ಸನ್ನದ್ಧವಾಗುತ್ತಿದೆ ಎಂದು ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕಕುಮಾರ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಶನಿವಾರ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ದಶಕಗಳ ಹಿಂದೆ ಡಕಾಯಿತಿ, ದರೋಡೆಯಂತಹ ಕೃತ್ಯ ನಡೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದೆ. ಮೊಬೈಲ್, ಸಿಮ್, ಇ-ಮೇಲ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಡೆಸುವ ಅಪರಾಧಿಕ ಕೃತ್ಯಗಳ ಪತ್ತೆ ಬಗ್ಗೆಯೂ ನಮ್ಮ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಸೈಬರ್ ಕ್ರೈಮ್ ಬಗ್ಗೆ ಅರಿವನ್ನೂ ಮೂಡಿಸಲು ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮೈಸೂರಿನ ಅಕಾಡೆಮಿಯಲ್ಲಿ ಆಧುನಿಕ ತಂತ್ರಜ್ಞಾನ ಇರುವ ಸೈಬರ್ ಲ್ಯಾಬ್ ತೆರೆಯಲು ಮೈಸೂರಿನ ಇನ್ಫೋಸಿಸ್ ಕಂಪೆನಿಯ ಶಾಖೆಯ ಮುಖ್ಯಸ್ಥರೊಂದಿಗೆ ಮಾತುಕತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪಿಎಸ್‌ಐ ತರಬೇತಿ 10 ತಿಂಗಳಿಂದ 12 ತಿಂಗಳಿಗೆ ಹೆಚ್ಚಿಸಲಾಗಿದೆ. ಐಸಿಎಸ್ ಅಧಿಕಾರಿಗಳಿಗೆ 1 ವರ್ಷ ತರಬೇತಿಯಿದೆ. ಈ ತರಬೇತಿ ಪಡೆದ ಬಳಿಕ ಅಭ್ಯರ್ಥಿಗಳನ್ನು ಪ್ರಾಕ್ಟಿಕಲ್ (ಪ್ರಾಯೋಗಿಕ) ಅನುಭವ ಪಡೆಯಲು ಅವರನ್ನು ನಿಯೋಜನೆ ಮಾಡಲಾಗುತ್ತಿದೆ. ತರಬೇತಿ ಒಂದು ಸೈಡ್ ಆಗಬಾರದು. ಪಾಠ ಹೇಳುವುದು, ಪರೀಕ್ಷೆ ನಡೆಸುವುದು ಪ್ರಯೋಜನವಿಲ್ಲ.
ಸಂವಾದದ ರೀತಿ ತರಬೇತಿ ನೀಡಬೇಕು. ಒಂದು ಘಟನೆ ನಡೆದಾಗ ಅದರ ಎಲ್ಲ ಆಯಾಮವನ್ನು ತನಿಖೆ ಮಾಡಲುವ ಬಗ್ಗೆ ತಿಳಿಸಲಾಗುತ್ತಿದೆ. ಯಾವ ಅಧಿಕಾರಿ ಕೆಲಸ ಏನು ಎಂದು ಹೇಳಿಕೊಡಲಾಗುತ್ತಿದೆ. ಕೊಲೆಯಾದಾಗ ವಿಧಿವಿಜ್ಞಾನ ತಂಡದ ಕೆಲದ ಏನು? ಪೊಲೀಸ್ ಕೆಲಸ ಏನು? ಸೀನ್ ಆಪ್ ಅಫೆನ್ಸ್ ಹೇಗೆ ನೋಡಬೇಕು ಇತ್ಯಾದಿ ತರಬೇತಿ ನೀಡಲಾಗುತ್ತಿದೆ ಎಂದ ಅವರು, ರಾಜ್ಯದಲ್ಲಿ ೫ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ೫೦೦ಕ್ಕೂ ಹೆಚ್ಚು ಪಿಎಸ್‌ಐ ನೇಮಕಾತಿಯಾಗಿದೆ. ಇದರಿಂದ ರಾಜ್ಯದಲ್ಲಿರುವ ಎಲ್ಲ ಪೊಲೀಸ್ ತರಬೇತಿ ಶಾಲೆಗಳು ತುಂಬಿದೆ. ಆದರೆ ಕಾರವಾರ, ಹಾವೇರಿ, ಹುಬ್ಬಳ್ಳಿ-ಧಾರವಾಡದಲ್ಲಿರುವ ತಾತ್ಕಾಲಿಕ ತರಬೇತಿ ಶಾಲೆಗಳಲ್ಲಿ ಅವಶ್ಯಕತೆ ಇದ್ದಲ್ಲಿ ಬಳಸಿಕೊಳ್ಳಲು ಪರಿಶೀಲನೆ ನಡೆಸಲಾಗುತ್ತಿದೆ. ಅಗತ್ಯಬಿದ್ದಲ್ಲಿ ಇವುಗಳನ್ನು ಬಳಸಿಕೊಂಡು ಪೊಲೀಸರಿಗೆ ತರಬೇತಿ ನೀಡುವ ಉದ್ದೇಶ ಇದೆ ಎಂದರು.
ದೇಶದಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಜಾರಿಯಾಗಿದೆ. ಈಗಾಗಲೇ ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲಾಗಿದೆ. ಆದರೆ ಈ ಬಗ್ಗೆ ಅಧಿಕಾರಿಗಳಿಗೆ ಹೆಚ್ಚಿನ ಅರಿವು ಮೂಡಬೇಕಾಗಿದೆ. ಕಾಲಕ್ಕೆ ತಕ್ಕಂತೆ ಪೊಲೀಸ್ ಇಲಾಖೆಯಲ್ಲೂ ಬದಲಾವಣೆಗಳನ್ನು ಮಾಡಿಕೊಂಡು ಮುನ್ನಡೆಯಲಾಗುತ್ತಿದೆ ಎಂದು ವಿವರಿಸಿದರು.