ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಎರಡು ಗ್ಯಾಂಗ್‌ಗಳ ನಡುವೆ ಹೊಡೆದಾಟ ನಡೆದಿದೆ. ಈ ಹಿಂದೆ ರಾಗಿಗುಡ್ಡದಲ್ಲೂ ಇಂತಹದ್ದೇ ವಾತಾವರಣ ಸೃಷ್ಟಿಯಾಗಿತ್ತು. ಆಗಲೇ ಪೊಲೀಸರು ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಗ್ಯಾಂಗ್ ವಾರ್‌ನಿಂದ ಜನ ಸಾಮಾನ್ಯರು ಭಯಭೀತರಾಗಿದ್ದಾರೆ. ಪೊಲೀಸರು ಈ ಘಟನೆಗಳನ್ನು ನಿರ್ಲಕ್ಷ್ಯ ಮಾಡಿದ್ದರ ಪರಿಣಾಮವಾಗಿಯೇ ಈಗ ಮತ್ತೆ ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್ ನಡೆದಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ತುಷ್ಟೀಕರಣ ನೀತಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ ನಾವೇನೇ ಮಾಡಿದರು ನಡೆಯುತ್ತದೆ ಎಂಬ ಭಾವನೆ ಮುಸ್ಲಿಮರಲ್ಲಿ ಮೂಡಿದೆ. ಇಂತಹ ಘಟನೆ ನಡೆದಾಗ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಗ್ಯಾಂಗ್‌ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಅದರ ಪರಿಣಾಮವಾಗಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ ಎಂದು ದೂರಿದರು.
ಜನರು ನಿರ್ಭೀತಿಯಿಂದ ಜೀವನ ನಡೆಸುವಂತಾಗಬೇಕು. ಪ್ರಸ್ತುತ ಸಂದರ್ಭದಲ್ಲಿ ಹಳ್ಳಿಯ ಜನರು ಶಿವಮೊಗ್ಗಕ್ಕೆ ಬರಲು ಹೆದರುತ್ತಿದ್ದಾರೆ. ಈಗ ನಡೆದಿರುವ ಗ್ಯಾಂಗ್ ವಾರ್ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ಗ್ಯಾಂಗ್‌ವಾರ್ ಘಟನೆ
ಬಿಜೆಪಿ ಸರ್ಕಾರ ಇದ್ದಾಗ ಅನೇಕ ವರ್ಷಗಳಿಂದ ನೆಲೆಯೂರಿದ್ದ ಅಧಿಕಾರಿಗಳನ್ನು ಬೇರೆಡೆ ವರ್ಗಾಯಿದ್ದೆವು. ಆಗ ಇಂತಹ ಪರಿಸ್ಥಿತಿ ಸಂಪೂರ್ಣವಾಗಿ ಹತೋಟಿಗೆ ಬಾರದಿದ್ದರೂ ನಿಯಂತ್ರಣದಲ್ಲಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ತುಷ್ಟೀಕರಣ ನೀತಿ ಹೆಚ್ಚಾದ ಪರಿಣಾಮ ಗ್ಯಾಂಗ್ ವಾರ್ ಘಟನೆ ಮರುಕಳಿಸುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ವಿಷಯದಲ್ಲಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ---------