ಪೇಜಾವರ ಸ್ವಾಮೀಜಿ ರಾಜಕೀಯ ಹಸ್ತಕ್ಷೇಪ ಖಂಡನೀಯ: ಪದ್ಮರಾಜ್‌

KannadaprabhaNewsNetwork | Published : Jul 7, 2024 1:21 AM

ಸಾರಾಂಶ

ಈ ಬಾರಿ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ರಾಹುಲ್‌ ಗಾಂಧಿ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡೋದು ಬಿಟ್ಟು ಟೀಕೆ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪದ್ಮರಾಜ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಪಾರ್ಲಿಮೆಂಟ್‌ನಲ್ಲಿ ‘ಬಿಜೆಪಿ ಅಂದರೆ ಇಡೀ ಹಿಂದೂ ಸಮಾಜ ಅಲ್ಲ’ ಎಂದಿದ್ದು ಸರಿಯಾಗಿದೆ. ಹಿಂದೂ ಸಮಾಜವನ್ನು ಬಿಜೆಪಿಗೆ ಒತ್ತೆ ಇಟ್ಟಿಲ್ಲ. ಪೇಜಾವರ ಸ್ವಾಮೀಜಿ ರಾಜಕೀಯ ಹಸ್ತಕ್ಷೇಪ ಬಿಟ್ಟು ತಮ್ಮ ವ್ಯಾಪ್ತಿಯ ಸಾಮಾಜಿಕ, ಧಾರ್ಮಿಕ ಕೆಲಸಗಳ ಬಗ್ಗೆ ಗಮನ ಹರಿಸಲಿ ಎಂದು ರಾಜ್ಯ ಪ್ರದೇಶ ಕಾಂಗ್ರೆಸ್‌ನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಸಲಹೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಸ್ವಾಮೀಜಿ ಅವರು ರಾಜಕೀಯಕ್ಕೆ ಸಂಬಂಧಿಸಿದ ಹೇಳಿಕೆ ನೀಡುವುದನ್ನು ಬಿಟ್ಟು ಹಿಂದೂ ಸಮಾಜದಲ್ಲಿರುವ ಸಾಮಾಜಿಕ ತಾರತಮ್ಯದ ಬಗ್ಗೆ ಗಮನ ಹರಿಸಲಿ ಎಂದರು.

ಲೋಕಸಭೆ ಚುನಾವಣೆಯಲ್ಲಿ ಬಡವರಿಗೆ ಕಾಂಗ್ರೆಸ್‌ ಆಸೆ ಆಮಿಷ ಒಡ್ಡಿದ್ದರಿಂದ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳು ಬಂದಿಲ್ಲ ಎಂದೂ ಸ್ವಾಮೀಜಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮೊದಲ ಅಂತಸ್ತಿನ ಕೆಲಸ ಇನ್ನೂ ಮುಗಿಯದೆ ಇರುವುದರಿಂದ ನೀರು ಸೋರಿಕೆ ಆಗಿದೆ ಎಂದು ಅವರೇ ಹೇಳಿಕೆ ನೀಡಿದ್ದರು. ಮಂದಿರದ ವಿಶ್ವಸ್ಥ ಮಂಡಳಿ ಸದಸ್ಯರಾಗಿ, ಮಂದಿರದ ಕೆಲಸ ಪೂರ್ಣವಾಗದೆ ತರಾತುರಿಯಲ್ಲಿ ಚುನಾವಣಾ ಪೂರ್ವದಲ್ಲಿ ಉದ್ಘಾಟನೆ ಮಾಡಿದ್ದು ರಾಜಕೀಯ ಆಮಿಷ ಅಲ್ವಾ ಎಂದು ಪದ್ಮರಾಜ್‌ ಪ್ರಶ್ನಿಸಿದರು.

ಬಿಜೆಪಿ ಅಂದರೆ ಹಿಂದೂ ಸಮಾಜ ಅಂತ ಬಿಂಬಿಸಲು ಹೊರಟಿದ್ದಾರೆ. ಹಿಂದೂಗಳನ್ನು ಬಿಜೆಪಿ ಗುತ್ತಿಗೆ ಪಡೆದಂತೆ ಮಾತನಾಡುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ರಾಹುಲ್‌ ಗಾಂಧಿ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡೋದು ಬಿಟ್ಟು ಟೀಕೆ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪದ್ಮರಾಜ್‌ ಹೇಳಿದರು.ಚುನಾವಣೆ ನಂತರ ಬಿಜೆಪಿಯವರು ನಿತ್ಯ ಪ್ರತಿಭಟನೆ ಮಾಡ್ತಿದಾರೆ. 2013ರಲ್ಲಿ ಯುಪಿಎ ಇರುವಾಗ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 142-147 ಡಾಲರ್ ಇತ್ತು, ಆಗ ಪೆಟ್ರೋಲ್‌ ಬೆಲೆ 62 ರು. ಆಗಿತ್ತು. ಈಗ ಕೇವಲ 80-82 ಡಾಲರ್ ಇದೆ. ಆದರೆ ಒಂದು ದಿನವೂ ಬಿಜೆಪಿ ಆಡಳಿತದಲ್ಲಿ 60 ರು.ಗೆ ಪೆಟ್ರೋಲ್ ಕೊಟ್ಟಿಲ್ಲ. ಈಗ ಪ್ರತಿಭಟನೆ ಶುರು ಮಾಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಮುಖಂಡರಾದ ಎಂ.ಜಿ. ಹೆಗಡೆ, ಮನೋರಾಜ್‌, ಪ್ರಕಾಶ್‌ ಸಾಲ್ಯಾನ್‌, ನಝೀರ್ ಬಜಾಲ್‌ ಇದ್ದರು.ಗುರು ಪೀಠಕ್ಕೆ ತಕ್ಕ ಹೇಳಿಕೆಯಲ್ಲ: ಎಂ.ಜಿ. ಹೆಗಡೆ

ಗುರುಗಳಾದವರು ಸತ್ಯ- ಧರ್ಮದ ದಾರಿ ತಿಳಿದು ಪ್ರವಚನ ಮಾಡಬೇಕು. ಅಂತಹ ಗುರು ಪರಂಪರೆಯನ್ನು‌ ಪೇಜಾವರ ಸ್ವಾಮೀಜಿ ಯಾಕೆ ಬಿಜೆಪಿಮಯ ಮಾಡ್ತೀರಿ? ಪೇಜಾವರ ಸ್ವಾಮೀಜಿಗಳ ರಾಜಕೀಯ ಟೀಕೆ, ಹೇಳಿಕೆಗಳು ಗುರು ಪೀಠಕ್ಕೆ ಸರಿಯಾದುದಲ್ಲ ಎಂದು ಕಾಂಗ್ರೆಸ್‌ ರಾಜ್ಯ ವಕ್ತಾರ ಎಂ.ಜಿ. ಹೆಗಡೆ ಹೇಳಿದ್ದಾರೆ.

ಹಿಂದೂ ಧರ್ಮದ ಉದಾತ್ತ ಧ್ಯೇಯಗಳನ್ನು ರಾಹುಲ್‌ ಗಾಂಧಿ ಜನರ ಎದುರು ಇಟ್ಟದ್ದು ಹೆಮ್ಮೆಪಡಬೇಕಾದ ವಿಚಾರ. ಸ್ವಾಮೀಜಿ ಒಂದು ಪಕ್ಷದ ಪರ ಮಾತನಾಡೋದನ್ನು ಒಪ್ಪಲಾಗದು. ಜನರಿಗೆ ಸತ್ಯ- ಧರ್ಮದ ಮಾರ್ಗದರ್ಶನ ನೀಡಿ, ಸಾಧ್ಯವಾದರೆ ಮೊದಲು ಅಷ್ಟಮಠದ ಎರಡು ಪಂಚಾಂಗ ತೆಗೆದು ಒಂದೇ ಮಾಡಿ ಎಂದು ಸವಾಲು ಹಾಕಿದರು.

Share this article