ಗದುಗಿನ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಅಭಿಮತ
ಸಾಣೆಹಳ್ಳಿಯಲ್ಲಿ ಕಾಯಕ ದಿನಾಚರಣೆ, ವಚನ ಸಂವಿಧಾನ ಗ್ರಂಥ ಲೋಕಾರ್ಪಣೆಕನ್ನಡಪ್ರಭವಾರ್ತೆ ಹೊಸದುರ್ಗಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಇಂದಿನ ರಾಜಕೀಯ ನಾಯಕರು ವಿಫಲರಾಗಿದ್ದಾರೆ. ಬಂಧುತ್ವದ ಹೆಸರಿನಲ್ಲಿ ಸಮಾಜವನ್ನು ಒಂದುಗೂಡಿಸುವ ಬದಲಿಗೆ ಹೊಡೆದಾಡಿಸುವ ನೀತಿ ಅನುಸರಿಸಲಾಗುತ್ತಿದೆ. ಇದರಿಂದ ಸಂವಿದಾನದ ಆಶಯಗಳು ಆಳುವಿನ ಅಂಚಿನಲ್ಲಿವೆ ಎಂದು ಗದುಗಿನ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೆಹಳ್ಳಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾಯಕ ದಿನಾಚರಣೆ ಮತ್ತು ವಚನ ಸಂವಿಧಾನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಚನ ಗ್ರಂಥ ಕೃತಿ ಬಿಡುಗಡೆ ಮಾಡಿ ಮಾತನಾಡಿದರು,ಮೆ 1ರಂದು ಕಾರ್ಮಿಕರ ದಿನ ಆಚರಿಸಲಾಗುತ್ತಿದೆ. ಆದರೆ ಇಲ್ಲಿ ಕಾಯಕ ದಿನ ಆಚರಿಸುತ್ತಿರುವುದು ಬಸವ ತತ್ವಕ್ಕೆ ಮಾದರಿಯಾಗಿದೆ. 12ನೇ ಶತಮಾನ ಪ್ರಭುತ್ವದ ಕಾಲ. ಅಂತಹ ಸಂದರ್ಭದಲ್ಲಿಯೇ ಬಸವಣ್ಣ ತನ್ನ ಧೀಮಂತಿಕೆ, ಸಹಿಷ್ಣುತೆ, ವಿನಯವಂತಕೆಯಿಂದ ಸಮರ್ಥವಾಗಿ ಪ್ರಜಾಸತ್ತಾತ್ಮಕ ಮೌಲ್ಯ ಎತ್ತಿ ಹಿಡಿದರು. ಅಲ್ಲದೆ ಜನಸಾಮಾನ್ಯರಿಗೆ ಮನ್ನಣೆ ಗೌರವಿಸುವ ಕೆಲಸ ಅಂದು ನಡೆದಿತ್ತು ಎಂದರು,
ಕುರಾನ್, ಬೈಬಲ್‌ಗಳಲ್ಲಿ ಜನಸಾಮಾನ್ಯರ ಭಾವನೆಗಳಿಗೆ ಬೆಲೆಯಿಲ್ಲ. ಆದರೆ ವಚನ ಗ್ರಂಥಗಳಲ್ಲಿ ಸಮ ಸಮಾಜದ ಪರಿಕಲ್ಪನೆಯಿದೆ. ಇಂತಹ ಗ್ರಂಥಗಳನ್ನು ಇಂದಿನ ರಾಜಕೀಯ ನಾಯಕರು ಓದುವ ಅವಶ್ಯಕತೆಯಿದೆ. ಹಣ, ಅಧಿಕಾರ, ಕುರ್ಚಿಗಾಗಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗುತ್ತಿದೆ. ರಾಜಕಾರಣಿಗಳಿಗೆ ಸಂವಿಧಾನದ ಬಗ್ಗೆ ಬೆಲೆಯೇ ಇಲ್ಲದಂತಾಗಿದೆ. ಪ್ರಧಾನಿ ಹೇಳುವ ಹಾಗೆ ಇಂದಿನ ಸಂಸತ್ತಿನ ವ್ಯವಸ್ಥೆ 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿಯೇ ಇತ್ತು ಎನ್ನುವುದನ್ನು ಗಮನಿಸಬೇಕಿದೆ ಎಂದರು.ನೇತೃತ್ವ ವಹಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಬಸವ ಪ್ರಜ್ಞೆ ಸ್ವಾಮೀಜಿಗಳು, ರಾಜಕಾರಣಿಗಳು, ಸಾಹಿತಿಗಳು, ಅಧಿಕಾರಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಬಂದಾಗ ಮಾತ್ರ ಬಸವಣ್ಣನನ್ನು ಸಾಂಶ್ಕೃತಿಕ ನಾಯಕ ಎಂದು ಕರೆದಿದ್ದಕ್ಕೆ ಸಾರ್ಥಕವಾಗುತ್ತದೆ. ಸಕಲ ಜೀವಾತ್ಮಕ್ಕೂ ಒಳಿತನ್ನು ಬಯಸುವುದು, ಸ್ವಾರ್ಥ ರಹಿತ ಜೀವನ, ಜಾತಿ ಭೇದ ಮಾಡದಿರುವುದು, ಲಿಂಗ ಭೇದದಿಂದ ದೂರವಿರುವುದು, ಬ್ರಷ್ಟಾಚಾರದಿಂದ ಹೊರಗಿರುವುದು ಇಂತಹ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಬಸವ ಪ್ರಜ್ಞೆ ಜಾಗೃತಗೊಳ್ಳಲು ಸಾಧ್ಯ ಎಂದರು.ಇವತ್ತಿನ ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಮಾಜಿಕ ಹೀಗೆ ಯಾವುದೇ ಕ್ಷೇತ್ರ ತೆಗೆದುಕೊಂಡರೆ ಒಪ್ಪುವಂಥದ್ದು ಕಡಿಮೆಯಾಗಿ ಒಪ್ಪದೇ ಇರುವಂಥವರು ಜಾಸ್ತಿಯಾಗಿದೆ. ಸ್ವಾಮಿಗಳು ಸಹ ದಿಕ್ಕು ತಪ್ಪುವ ವಾತಾವರಣ ನಿರ್ಮಾಣ ಆಗಿದೆ. ಜಗತ್ತನ್ನು ಬದಲಾವಣೆ ಮಾಡುತ್ತೇವೆ ಎನ್ನುವ ಭ್ರಮೆ ಬೇಡ. ನಮ್ಮನ್ನು ನಾವು ಸರಿಪಡಿಸಿಕೊಂಡು ಬದಲಾಯಿಸಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮನ್ನು ತಾವು ಅತ್ಮಾವಲೋಕನ ಮಾಡಿಕೊಳ್ಳಬೇಕು. ಆಗ ವ್ಯಕ್ತಿಗತ ಹಾಗೂ ಸಾಮಾಜಿಕ ಬದಲಾವಣೆ ತರಲು ಸಾಧ್ಯ. ಈಗಾಗಲೇ ಅನೇಕ ಒಕ್ಕೂಟಗಳಿವೆ. ಆ ಎಲ್ಲ ಒಕ್ಕೂಟಗಳು ಬಸವ ಪ್ರಜ್ಞೆಯನ್ನಿಟ್ಟುಕೊಂಡು ಸ್ಥಾಪಿತವಾದಾಗ ಮಾತ್ರ ಎಲ್ಲ ಒಕ್ಕೂಟಗಳಿಗೆ ಅರ್ಥ ಬರುತ್ತದೆ. ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದ್ದಷ್ಟೇ ಅಲ್ಲ ಬಸವ ತತ್ವಗಳನ್ನು ಎಲ್ಲ ಕಡೆ ಹರಡಬೇಕು ಎಂದರು.
ಗ್ರಂಥ ಕುರಿತು ಮೈಸೂರಿನ ಶರಶ್ಚಂದ್ರ ಸ್ವಾಮೀಜಿ ಮಾತನಾಡಿ ನಾವ್ಯಾರು ಬಸವಾದಿ ಶರಣರನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡಿಲ್ಲ. ಬಸವಣ್ಣನನ್ನು ಕೆಲವರು ಸ್ವಾರ್ಥಕ್ಕಾಗಿ, ದುಡಿಮೆಗಾಗಿ, ಬದುಕಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ. ವರ್ಣ ತಾರತಮ್ಯವನ್ನು ಮೊಟ್ಟ ಮೊದಲು ವಿರೋಧಿಸಿದವರು ಬುದ್ಧ, ನಂತರ ಬಸವಣ್ಣ. ಜಗತ್ತಿನಲ್ಲಿ ಮೊಟ್ಟಮೊದಲು ಸ್ತ್ರೀಗೆ ಸ್ವಾತಂತ್ರ್ಯವನ್ನು ಕೊಟ್ಟದ್ದು ಬಸವಣ್ಣ. ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಬುದ್ದ ವಿರೋಧಿಸಿದ್ದರು ಎಂದರು.ಶಂಕರಾಚಾರ್ಯರರ ಅದ್ವೈತ ಸಿದ್ಧಾಂತ ಕೇವಲ ಬ್ರಾಹ್ಮಣ್ಯಕ್ಕೆ ಸೀಮಿತವಾಗಿದೆ. ಎಲ್ಲಾ ಮಠಗಳಲ್ಲಿನ ಎಲ್ಲಾ ಸ್ವಾಮಿಗಳು ಯೋಗ್ಯರಲ್ಲ. ಹಾಗಂದ ಮಾತ್ರಕ್ಕೆ ಎಲ್ಲರೂ ಕೆಟ್ಟರಲ್ಲ. ಲಿಂಗಾಯಿತ ಧರ್ಮ ದೊಡ್ಡದು. ಆದರೆ ಲಿಂಗಾಯತರು ದೊಡ್ಡವರಲ್ಲ. ವಿದ್ವಾಂಸರು ಸ್ವಾಮಿಗಳ ಬಗ್ಗೆ ಟೀಕಿಸುವಾಗ ಯೋಚಿಸಿ ಬರೆಯಬೇಕು. ಇದರಿಂದ ಯೋಗ್ಯರ ಮನಸ್ಸಿಗೆ ನೋವಾಗುತ್ತದೆ ಎಂದರು.ಆಶಯ ನುಡಿಗಳನ್ನಾಡಿದ ಬಸವರಾಜ ಸಾದರ ಮಾತನಾಡಿ ಸಂವಿಧಾನದ ಮೂಲತತ್ವಗಳು ವಚನಗಳಲ್ಲಿವೆ. ರಾಜಬೀದಿಯನ್ನು ನಿಜವಾಗಿ ಪರಿಚಯಿಸುವಂಥವರು ರಾಜಕಾರಣಿಗಳಲ್ಲ, ಮಠಾಧಿಪತಿಗಳು. ಕರ್ನಾಟಕದಲ್ಲಿ ಸಾವಿರಾರು ಮಠಗಳಿದ್ದರು ಕೆಲವೇ ಕೆಲವು ಮಠಗಳು ಬಸವಪ್ರಜ್ಞೆಯನ್ನಿಟ್ಟುಕೊಂಡಿವೆ. ನಾಡಿನ ಬಸವ ಪ್ರಜ್ಞೆಯನ್ನು ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಎಲ್ಲ ಮಠಾಧಿಪತಿಗಳು ಸೇರಿಕೊಂಡು ಒಂದು ಸಮಿತಿಯನ್ನು ರಚಿಸಿಕೊಳ್ಳಬೇಕು. ಬಸವಣ್ಣನವರನ್ನು ಮತ್ತೆ ವಾಸ್ತವತೆಗೆ ಕರೆದುಕೊಂಡು ಬರುವ ತುರ್ತು ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುತ್ತಿಲ್ಲ. ಶರಣ ಸಾಹಿತ್ಯದ ಮೂಲಕ ಎಲ್ಲ ಹಳ್ಳಿಗಳಲ್ಲೂ ನೈತಿಕ ಮೌಲ್ಯ ಬಿತ್ತುವ ಕೆಲಸ ಆಗಬೇಕು ಎಂದರು. ಸಾನಿಧ್ಯವನ್ನು ಶಿವಮೊಗ್ಗದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕೂಡಲಸಂಗಮದ ಜಗದ್ಗುರು ಗಂಗಾದೇವಿ ವಹಿಸಿದ್ದರು.ಗ್ರಂಥದ ಬಗ್ಗೆ ನಿವೃತ್ತ ನಾಯಮೂರ್ತಿ ಎಚ್. ಬಿಲ್ಲಪ್ಪ, ಲೇಖಕ ಎಸ್.ಜಿ. ಸಿದ್ಧರಾಮಯ್ಯ, ಗುರುಪಾದಪ್ಪ ಮರಿಗುದ್ದಿ, ಚಂದ್ರಶೇಖರ ತಾಳ್ಯ, ಶಿವನಕೆರೆ ಬಸವಲಿಂಗಪ್ಪ ಮಾತನಾಡಿದರು.
ಚೆನ್ನಬಸವ ಸ್ವಾಮಿಗಳು ಮೋಟಗಿ ಮಠ ಅಥಣಿ ಸ್ವಾಗತಿಸಿದರು. ವೇದಿಕೆಯ ಮೇಲೆ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ದಾನೇಶ್ವರಿ ಮಾತಾಜಿ, ಬಸವರತ್ನ ಮಾತಾಜಿ, ರುದ್ರಮುನಿ ಸ್ವಾಮೀಜಿ, ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿಗಳು, ಶ್ರೀ ಜಯಚಂದ್ರಶೇಖರ ಸ್ವಾಮಿಗಳು, ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಗುರುಬಸವದೇವರು, ಚಂದ್ರಶೇಖರ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಅಕ್ಕಮಹಾದೇವ ಮಾತಾಜಿ, ನಿಜಲಿಂಗದೇವರು ನಿಡಸೋಸಿ, ಗುರುಬಸವಪಟ್ಟದ್ದೇವರು, ಗುರುಮಹಾಂತ ಸ್ವಾಮೀಜಿ, ಬಸವರಾಜಪಟ್ಟದಾರ್ಯ ಸ್ವಾಮೀಜಿ, ಶ್ರೀ ಬಸವಪ್ರಕಾಶ ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಬಸವ ಮಹಾಲಿಂಗ ಸ್ವಾಮೀಜಿ, ಬಸವ ಮರುಳಸಿದ್ಧ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಜಯಮೃತ್ಯಂಜಯ ಸ್ವಾಮೀಜಿ, ಅಭಿನವ ಚೆನ್ನಬಸವ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ, ಇಮ್ಮಡಿ ಮಹಾಂತ ಸ್ವಾಮೀಜಿ, ಶರಣ ಬಸವದೇವರು, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಇವರಲ್ಲದೆ ಇನ್ನೂ ಹಲವು ಬಸವಾಭಿಮಾನಿ ಸ್ವಾಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶಿವಸಂಚಾರದ ಕಲಾವಿದರಾದ ಕೆ ದಾಕ್ಷಾಯಿಣಿ, ನಾಗರಾಜ್ ಶರಣ್ ವಚನಗೀತೆಗಳನ್ನು ಹಾಡಿದರು. ಎಚ್.ಎಸ್. ದ್ಯಾಮೇಶ್ ನಿರೂಪಿಸಿದರು, ರಾಜು ವಂದಿಸಿದರು. ----ಬಾಕ್ಸ್ ----
ಹೊರನಡೆದ ಹಿಂದುಳಿದ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳುಸಾಣೇಹಳ್ಳಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ವಚನ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಬಸವ ಮಹಾ ಒಕ್ಕೂಟ ರಚನೆ ಕುರಿತಂತೆ ಸ್ವಾಮೀಜಿಗಳ ಸಂವಾದ ಏರ್ಪಡಿಸಲಾಗಿತ್ತು. ಆದರೆ ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತನಾಡಿದ ಹಲವರು ಬಸವ ಒಕ್ಕೂಟ ರಚನೆ ಕುರಿತಂತೆ ಜಾತಿ, ಧರ್ಮಕ್ಕೆ ಹೊರತು ಪಡಿಸಿ ಒಕ್ಕೂಟ ರಚನೆಯ ಬಗ್ಗೆ ಮಾತನಾಡಿದ್ದರು. ಕಾರ್ಯಕ್ರಮದ ನಂತರ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸುಮಾರು 30ಕ್ಕೂ ಹೆಚ್ಚು ಸ್ವಾಮೀಜಿಗಳು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ವಚನ ಸಂವಿಧಾನ ಬಿಡುಗಡೆಯಾಗುತ್ತಿದ್ದಂತೆ ಜಿಲ್ಲೆಯ ಹಿಂದುಳಿದ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ಸಭೆಯಿಂದ ಹೊರನಡೆದಿದ್ದು ಸಭೆಯಲ್ಲಿದ್ದ ಸಭಿಕರಲ್ಲಿ ಚರ್ಚೆಗೆ ಗ್ರಾಸವಾಯಿತು.