ಕನ್ನಡಪ್ರಭ ವಾರ್ತೆ ಬೆಂಗಳೂರು
‘ಭಾರತವನ್ನು ಮುನ್ನಡೆಸಲಿರುವ ಯುವಸಮೂಹ ಐತಿಹಾಸಿಕ ಪ್ರಮಾದ ಮರುಕಳಿಸದಂತೆ ಎಚ್ಚರದ ಹೆಜ್ಜೆಯಿರಿಸಲು ಭೌಗೋಳಿಕ ರಾಜಕೀಯದ ಕುರಿತು ವಿಸ್ತ್ರತ ಅಧ್ಯಯನ ಮಾಡುವ ಅಗತ್ಯವಿದೆ’ ಎಂದು ಕೇಂದ್ರ ವಸತಿ, ನಗರ ವ್ಯವಹಾರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.
ಅವರು ಬುಧವಾರ ರೇವಾ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಆರಂಭವಾದ ‘ರೇವಾ ಭೌಗೋಳಿಕ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರ’ ಉದ್ಘಾಟಿಸಿ ಮಾತನಾಡಿದರು.
‘ವಸಾಹತು ಆಡಳಿತಕ್ಕೆ ಒಳಪಡುವ ಮುನ್ನ ಜಾಗತಿಕ ಮಟ್ಟದ ಜಿಡಿಪಿಗೆ ಶೇಕಡ 25-27ರಷ್ಟು ಕೊಡುಗೆ ಕೊಟ್ಟಿತ್ತು. ಆದರೆ 1947ರ ಸ್ವತಂತ್ರ ಭಾರತದ ಜಿಡಿಪಿ ಶೇ.2ಕ್ಕೆ ಇಳಿಯಿತು.
2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜಿಡಿಪಿಯಲ್ಲಿ 11 ಸ್ಥಾನದಲ್ಲಿದ್ದ ಭಾರತ ಪ್ರಧಾನಿ ಮೋದಿ ನೇತೃತ್ವದ ಸಶಕ್ತ ಸರ್ಕಾರದ ನಿರ್ಧಾರಗಳಿಂದ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದರು.
ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು ಮಾತನಾಡಿ, ಇಪ್ಪತ್ತೊಂದನೇ ಶತಮಾನದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಪ್ರಭಾಯುತ ಪಾತ್ರ ವಹಿಸುತ್ತಿದೆ.
ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಕಲೆ, ಕಾನೂನು, ವಿಜ್ಞಾನದ ಜೊತೆಗೆ ವಿದ್ಯಾರ್ಥಿಗಳಿಗೆ ಜಾಗತಿಕ ರಾಜಕೀಯದ ಜ್ಞಾನ ಮುಖ್ಯ. ಹೀಗಾಗಿ ವಿದೇಶಾಂಗ ನೀತಿಯ ಬಗ್ಗೆ ಆಳವಾಗಿ ಅಧ್ಯಯನ ಅವಕಾಶ ಕಲ್ಪಿಸಲು ಹೊಸದಾಗಿ ಈ ಕೋರ್ಸ್ ಆರಂಭಿಸಲಾಗಿದೆ ಎಂದು ತಿಳಿಸಿದರು. ಸಹ ಕುಲಾಧಿಪತಿ ಉಮೇಶ್ ಎಸ್.ರಾಜು ಇದ್ದರು.
ರೇವಾ ವಿಶ್ವ ಸಂವಾದ-2024: ರೇವಾ ವಿಶ್ವವಿದ್ಯಾಲಯದಿಂದ ಮೊದಲ ಬಾರಿ ‘ಭಾರತ-ರಷ್ಯಾ ಟ್ರ್ಯಾಕ್-2 ವಿಶ್ವ ಸಂವಾದ-2024’ ನಡೆಯಿತು. ರಷ್ಯಾದ ಪ್ರಿಮಾಕೋವ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಎಕಾನಮಿ ಮತ್ತು ಇಂಟರ್‌ನ್ಯಾಷನಲ್ ರಿಲೇಶನ್ಸ್ (ಐಎಂಇಎಂಒ) ನಿರ್ದೇಶಕ ಡಾ। ಫಿಯೋಡರ್ ವೊಯ್ಟೊಲೊವ್ಸ್ಕಿ ಮಾತನಾಡಿ, ಉಕ್ರೇನ್ ಯುದ್ಧದ ಪರಿಣಾಮ ರಷ್ಯಾ ಜಾಗತಿಕ ನಿರ್ಬಂಧ ಎದುರಿಸುತ್ತಿದೆ.
ಆದರೆ, ಈ ನಿರ್ಬಂಧ ಭಾರತ-ರಷ್ಯಾ ನಡುವಣ ಆರ್ಥಿಕ, ರಾಜಕೀಯ ಬಲವರ್ಧನೆಯ ಪೂರಕ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ. 2023ರ ಅಂಕಿಅಂಶದ ಪ್ರಕಾರ ಭಾರತ-ರಷ್ಯಾ 65 ಬಿಲಿಯನ್ ಡಾಲರ್‌ನಷ್ಟು ವಾರ್ಷಿಕ ವಹಿವಾಟು ನಡೆಸಿವೆ.
ಕೆಲ ವರ್ಷಗಳ ಹಿಂದೆ ಈ ವಹಿವಾಟು ಕೇವಲ 8 ಬಿಲಿಯನ್ ಡಾಲರ್‌ವರಿಗಿತ್ತು. ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಅವರ ಸಕಾರಾತ್ಮಕ ನಿಲುವು ಎರಡೂ ದೇಶಗಳ ಸುಸ್ಥಿರ ಅಭಿವೃದ್ಧಿಗೆ ಕೊಡುಗೆಯಾಗಿದೆ ಎಂದರು.
ಮಣಿಪಾಲ್ ಅಡ್ವಾನ್ಸ್ಡ್ ರಿಸರ್ಚ್ ಗ್ರೂಪ್ ಉಪಾಧ್ಯಕ್ಷ ಪ್ರೊ.ಮಾಧವ್ ದಾಸ್ ನಲಪಟ್, ಭಾರತ - ರಷ್ಯಾ ಹಳೆಯ ಸ್ನೇಹಿತ ರಾಷ್ಟ್ರಗಳಾಗಿವೆ. ಎರಡೂ ದೇಶಗಳು ಸಂಕಷ್ಟ ಸಮಯದಲ್ಲಿ ಒಂದಕ್ಕೊಂದು ನೆರವಿಗೆ ಬಂದಿವೆ. ಭಾರತಕ್ಕೆ ಹೊಸ ಸ್ನೇಹಿತರು ಸೇರ್ಪಡೆಯಾಗುತ್ತಿದ್ದರೂ ಈ ಸಂಬಂಧ ಹೀಗೆಯೇ ಮುಂದುವರಿಯಲಿದೆ ಎಂದು ಹೇಳಿದರು.