ಕನ್ನಡಪ್ರಭ ವಾರ್ತೆ ದಾವಣಗೆರೆ
ಮೂರನೇ ಬಾರಿಗೆ ನರೇಂದ್ರ ಮೋದಿಯವರ ಪ್ರಧಾನಿಯಾಗಿಸಲು ದಾವಣಗೆರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದ ತಮ್ಮನ್ನು ಗೆಲ್ಲಿಸಿ, ಲೋಕಸಭೆಗೆ ಕಳಿಸಿ ಕೊಡಲು ಗಾಯತ್ರಿ ಸಿದ್ದೇಶ್ವರ ಕ್ಷೇತ್ರದ ಜನತೆಗೆ ಮನವಿ ಮಾಡಿದ್ದಾರೆ.ನಗರದ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ತಾಲೂಕು ಘಟಕ ಹಮ್ಮಿಕೊಂಡಿದ್ದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಕಳೆದೊಂದು ದಶಕದಲ್ಲಿ ನರೇಂದ್ರ ಮೋದಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದ್ದು, ಮೋದಿ ನಾಯಕತ್ವದಲ್ಲಿ ದೇಶ ಮತ್ತಷ್ಟು ಮುನ್ನಡೆದು, ಜಾಗತಿಕ ಶಕ್ತಿಯಾಗಬೇಕೆಂಬುದು ನೂರಾರು ಕೋಟಿ ಭಾರತೀಯರ ಅಭಿಲಾಷೆ ಎಂದರು.
ದಾವಣಗೆರೆ ಕ್ಷೇತ್ರದಲ್ಲೂ ಮೋದಿ ಅಲೆ ಕಂಡು ಬರುತ್ತಿದೆ. ರಾಜಕಾರಣಕ್ಕೆ ನಮ್ಮ ಕುಟುಂಬ ಹೊಸದಲ್ಲ. ತಮ್ಮ ಮಾವನರಾದ ಜಿ.ಮಲ್ಲಿಕಾರ್ಜುನ, ತಮ್ಮ ಪತಿ ಜಿ.ಎಂ.ಸಿದ್ದೇಶ್ವರ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಈ ಇಬ್ಬರ ಚುನಾವಣೆ ವೇಳೆ ಕ್ಷೇತ್ರದಲ್ಲಿ ನಾನೂ ಓಡಾಡಿದ್ದರಿಂದ ಕ್ಷೇತ್ರ ಹಾಗೂ ಜನರ ಪರಿಚಯ ಚೆನ್ನಾಗಿಯೇ ಇದೆ ಎಂದು ತಿಳಿಸಿದರು.ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ದಾವಣಗೆರೆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ 3500 ಕೋಟಿ ರು. ಅನುದಾನ ತಂದಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಕಳೆದೊಂದು ದಶಕದಲ್ಲಿ ಭಾರತದ ಆರ್ಥಿಕತೆ ಜಾಗತಿಕ ಮಟ್ಟದಲ್ಲಿ 5ನೇ ಸ್ಥಾನದಲ್ಲಿದೆ. ಕಾಂಗ್ರೆಸ್ ತೊರೆದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಮತ್ತೆ ಬಿಜೆಪಿಗೆ ಸೇರಿದ್ದು ನಮ್ಮ ಪಕ್ಷಕ್ಕೆ ಮತ್ತಷ್ಟು ಶಕ್ತಿ ತಂದಿದೆ. ಈಗ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ ಇಬ್ಬರೂ ಒಂದಾಗಿ ಪಕ್ಷ ಸಂಘಟಿಸುವ ಮೂಲಕ ಬಿಜೆಪಿ ಭದ್ರಕೋಟೆಯಾಗಿ ಮಾಡಬೇಕು ಎಂದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಜಗಳೂರು ಕ್ಷೇತ್ರಕ್ಕೆ ಸಂಸದ ಸಿದ್ದೇಶಣ್ಣ ಹೆಚ್ಚು ಅನುದಾನ ನೀಡಿದ್ದಾರೆ. ಈ ಬಾರಿ ಗಾಯತ್ರಿ ಸಿದ್ದೇಶ್ವರರನ್ನು ದಾವಣಗೆರೆ ಕ್ಷೇತ್ರದಿಂದ ಗೆಲ್ಲಿಸುವುದಷ್ಟೇ ನಮ್ಮ ಗುರಿ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಬೇಕು. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕು. ಇದೇ ನಮ್ಮೆಲ್ಲರ ಗುರಿ ಎಂದು ಹೇಳಿದರು.ಬಿಜೆಪಿ ಅಧಿಕಾರಕ್ಕಾಗಿ ನಮ್ಮ ಕೊಡುಗೆ:
ಮತ್ತೊಬ್ಬ ಮಾಜಿ ಶಾಸಕ ಎಚ್.ಪಿ.ರಾಜೇಶ ಮಾತನಾಡಿ, ಕಾಂಗ್ರೆಸ್ ತೊರೆದು, ನನ್ನ ಮಾತೃ ಪಕ್ಷ ಬಿಜೆಪಿಗೆ ಮರಳಿದ್ದೇನೆ. ನನಗೂ ಹಾಗೂ ಎಸ್.ವಿ.ರಾಮಚಂದ್ರ ಇಬ್ಬರಿಗೂ ಸಾಕಷ್ಟು ಸವಾಲುಗಳಿವೆ. ಕಳೆದ ಚುನಾವಣೆಯಲ್ಲಿ ನಮ್ಮಿಬ್ಬರಿಂದಲೂ ಸುಮಾರು 1 ಲಕ್ಷ ಮತ ಪಡೆದಿದ್ದೇವೆ. ಈಗ ಲೋಕಸಭೆ ಚುನಾವಣೆಯಲ್ಲಿ ಆ ಎಲ್ಲಾ ಮತಗಳ ಗಾಯತ್ರಿ ಸಿದ್ದೇಶ್ವರರಿಗೆ ಹಾಕಿಸುವ ಮೂಲಕ ದಾವಣಗೆರೆ ಕ್ಷೇತ್ರದಿಂದ ಆಯ್ಕೆ ಮಾಡಿ, ಲೋಕಸಭೆ ಕಳಿಸೋಣ. ಮತ್ತೆ ನರೇಂದ್ರ ಮೋದಿ ಸಾರಥ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಮ್ಮ ಕೊಡುಗೆ ನೀಡೋಣ ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ಎಚ್.ಸಿ.ಮಹೇಶ ಪಲ್ಲಾಗಟ್ಟೆ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಜಿ.ಎಸ್.ಅನಿತಕುಮಾರ, ಇಂದಿರಾ ರಾಮಚಂದ್ರ, ಎಚ್.ನಾಗರಾಜ ಸೊಕ್ಕೆ, ಎಸ್.ಕೆ.ಮಂಜುನಾಥ, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಹೇಶ ಇತರರಿದ್ದರು.ನನಗೆ ಟಿಕೆಟ್ ಸಿಗುತ್ತದೆಂಬ ಕಲ್ಪನೆಯೂ ಇರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಮಹಿಳಾ ಮೀಸಲಾತಿಯಲ್ಲಿ ದಾವಣಗೆರೆ ಕ್ಷೇತ್ರಕ್ಕೆ ತಮ್ಮನ್ನು ಆಯ್ಕೆ ಮಾಡಿದ್ದು ಸಂತಸ ತಂದಿದೆ. ಕಾಂಗ್ರೆಸ್ ನಾಯಕರು ಮನೆಯಲ್ಲೇ ಕುಳಿತು, ಮತ ಪಡೆಯುತ್ತಾರೆ. ಗೆದ್ದ ಬಳಿಕ ಜನರ ಕೈಗೆ ಸಿಗುವುದಿಲ್ಲ. ಅಭಿವೃದ್ಧಿ ಕೆಲಸಗಳೂ ಆಗಲ್ಲ. ಹಾಗಾಗಿ ಮತದಾರರು ಬಿಜೆಪಿಯ ಕಡೆಗೆ ಒಲವು ತೋರುತ್ತಿದ್ದಾರೆ.
ಗಾಯತ್ರಿ ಸಿದ್ದೇಶ್ವರ, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ