ಮಧುಗಿರಿ: ತಾಲೂಕಿನಲ್ಲಿ ಅಭಿವೃದ್ಧಿಗಿಂತ ದ್ವೇಷ ರಾಜಕಾರಣವೇ ಹೆಚ್ಚು ಸದ್ದು ಮಾಡುತ್ತಿದೆ ಎಂದು ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.
ಇಲ್ಲಿನ ನಿರೀಕ್ಷಣ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳು ಕಳೆದು ಸಚಿವರಾಗಿದ್ದರೂ ಸಹ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ನನ್ನ ಅವಧಿಯಲ್ಲಿನ ಕೆಲಸಗಳೇ ಪ್ರಸ್ತುತ ನಡೆಯುತ್ತಿವೆ. ಎಚ್‌ಡಿಕೆ ಸಿಎಂ ಆಗಿದ್ದಾಗ ನಾನು ಜಾರಿಗೊಳಿಸಿದ್ದ ಕೈಗಾರಿಕಾ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಜನ ಸಾಮಾನ್ಯರಿಗೆ ಬೇಕಾದ ಯಾವುದೇ ಕಾಮಗಾರಿಗಳು ಕ್ಷೇತ್ರದಲ್ಲಿ ನಡೆಯುತ್ತಿಲ್ಲ. ಅಲ್ಲಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ ಅದಕ್ಕೆ ಮಣ್ಣಾಕಿ ಮುಚ್ಚಿದ್ದಾರೆ. ಹಾಲು ಉತ್ಪಾದಕ ಸಂಘಗಳಿಗೆ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ. ಸರ್ಕಾರದಿಂದ ಕೊಡುವ ಮನೆ ವಿತರಣೆಯಲ್ಲೂ ಪಕ್ಷ ನೋಡಲಾಗುತ್ತಿದೆ. ಕೆ, ಎನ್. ರಾಜಣ್ಣ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದು , ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕಿದೆ ಎಂದರು.ಜೆಡಿಎಸ್ ಕಾರ್ಯಕರ್ತರಿಗೆ ವಿನಾಕಾರಣ ತೊಂದರೆ ಕೊಡಲಾಗುತ್ತಿದೆ. ತಾಲೂಕಿನಲ್ಲಿ ಎಂದಿಗೂ ಯಾರು ಸಹ ದ್ವೇಷದ ರಾಜಕಾರಣ ಮಾಡಿಲ್ಲ. ಕಾಲ ಚಕ್ರ ಹೀಗೆ ಇರಲ್ಲ ತಿರುಗುತ್ತದೆ. ಅಧಿಕಾರಿಗಳು ಬಡಬಗ್ಗರಿಗೆ ಅನುಕೂಲ ಮಾಡಬೇಕು. ಇಲ್ಲಿನ ಎಆರ್‌ಸಿ ಎಸ್ ಅಧಿಕಾರಿ ಮಂತ್ರಿಗಳು ಹೇಳಿದಂತೆ ಕೇಳುವುದು ಯಾವ ನ್ಯಾಯ. ಅಧಿಕಾರಿಗಳು ಯಾರಿಗೂ ಅನ್ಯಾಯ ಮಾಡಬಾರದು. ಕಾನೂನು ಬದ್ಧವಾಗಿ ಎಲ್ಲ ಸಂಘಗಳಿಗೂ ಚುನಾವಣೆ ನಡೆಸಬೇಕು. ಅಧಿಕಾರಿಗಳು ಪ್ರಜಾಪ್ರಭುತ್ವಕ್ಕೆ ತದ್ವಿರುದ್ದವಾಗಿ ನಡೆದು ಕೊಂಡರೆ ಜನಸಾಮಾನ್ಯರ ಪಾಡೇನು.? ಮುಂದಿನ ದಿನಗಳಲ್ಲಿ ನೀವು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಮಂತ್ರಿಯಾಗಿ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಇಲ್ಲಿವರೆಗೂ ಯಾರು ದ್ವೇಷ ರಾಜಕಾರಣ ಮಾಡಿಲ್ಲ. ಕೊಂಡವಾಡಿ ಹಾಲು ಸಂಘದಲ್ಲಿ ತನಿಖೆ ನಡೆಸಿ ನನಗೆ ವಿನಾಕಾರಣ ಸಾಕಷ್ಟು ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದರು. ಪುರಸಭೆ ಮಾಜಿ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡ ಸಿಡದರಗಲ್ಲು ಶ್ರೀನಿವಾಸ್, ಎಸ್.ಡಿ.ಕೃಷ್ಣಪ್ಪ, ಮಿಲ್ ಚಂದ್ರು, ಗೋವಿಂದರಾಜು, ಕಂಬತ್ತನಹಳ್ಳಿ ರಘು, ವೆಂಕಟಾಪುರ ಗೋವಿಂದರಾಜು, ಬಜ್ಜಣ್ಣ, ಆರಾಧ್ಯ ,ನರಸಪ್ಪ ಇದ್ದರು.