ಸುಕ್ಷೇತ್ರದಲ್ಲಿ ಸ್ವಚ್ಛತೆ ಮರೀಚಿಕೆ । ನದಿ ತೀರದ ತುಂಬೆಲ್ಲಾ ಪ್ಲಾಸ್ಟಿಕ್ ಕಸದ ರಾಶಿ
ಚಂದ್ರು ಕೊಂಚಿಗೇರಿಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ತಾಲೂಕಿನ ಸುಕ್ಷೇತ್ರ ಕುರುವತ್ತಿಯ ತುಂಗಭದ್ರಾ ನದಿ ತೀರ ಪ್ಲಾಸ್ಟಿಕ್ ಕಸದ ರಾಶಿಯಿಂದ ಆವೃತವಾಗಿದೆ. ಇಡೀ ಗ್ರಾಮದ ಚರಂಡಿ ಕಲುಷಿತ ನೀರು ನದಿಯ ಒಡಲು ಸೇರುತ್ತಿದ್ದು, ಇಲ್ಲಿ ಅಕ್ಷರಶಃ ಸ್ವಚ್ಛತೆ ಮರೀಚಿಕೆಯಾಗಿದೆ.ಹೌದು, ಪುಣ್ಯ ಕ್ಷೇತ್ರವೆಂದು ಕರೆಯುವ ಕುರುವತ್ತಿಯಲ್ಲಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿದೆ. ನಿತ್ಯ ನೂರಾರು ಭಕ್ತರು ದೇವರ ದರ್ಶನಕ್ಕಾಗಿ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಬಂದ ಭಕ್ತರು ನದಿಯಲ್ಲಿ ಪುಣ್ಯ ಸ್ನಾನಕ್ಕೆ ಹೋಗಲು ಕಸದ ರಾಶಿ ಮಧ್ಯೆ ಹೋಗಬೇಕು, ಜತೆಗೆ ಚರಂಡಿ ನೀರಿನಲ್ಲೇ ಪುಣ್ಯ ಸ್ನಾನ ಮಾಡುವ ಸ್ಥಿತಿ ಇದೆ. ದೇವಸ್ಥಾನ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸ್ವಚ್ಛತೆ ಬಗ್ಗೆ ಗಮನ ಹರಿಸದೇ ಕೇವಲ ದೇವಸ್ಥಾನದ ಆದಾಯ ನಿರೀಕ್ಷೆಯಲ್ಲಿದ್ದಾರೆ.
ಗ್ರಾಮದಲ್ಲಿ ಬಳಕೆಯಾದ ಚರಂಡಿ ಬೂದು ಬಣ್ಣದ ನೀರನ್ನು, ನೇರವಾಗಿ ನದಿ ಒಡಲಿಗೆ ಬಿಡುವಂತಿಲ್ಲ, ಇದನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ನೀರ ಹರಿಸಬೇಕೆಂಬ, ಪರಿಸರ ಮಾಲಿನ್ಯ ಇಲಾಖೆಯ ನಿಯಮ ಪಾಲನೆ ಮಾಡುತ್ತಿಲ್ಲ, ಇದಕ್ಕಾಗಿಯೇ ನರೇಗಾ ಯೋಜನೆಯ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ, ಬೂದು ನೀರು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಆದರೆ ಆ ಕೆಲಸ ಇನ್ನೂ ಕೈಗೂಡಿದ ಹಿನ್ನೆಲೆ, ನದಿ ತೀರದ ಜನ ಚರಂಡಿಯ ಕಲುಷಿತ ನೀರು ಕುಡಿಯುವಂತಾಗಿದೆ.ಇಲ್ಲಿನ ತಾಲೂಕು ಪಂಚಾಯತಿ ವ್ಯಾಪ್ತಿಯ 26 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ, 1, 2, ಮತ್ತು 3ನೇ ಹಂತದಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿ ಮಾಡಲು, ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಆದರೆ ಕಾಮಗಾರಿ ಅನುಷ್ಠಾನ ಮಾಡುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
ಈಗಾಗಲೇ ಎಲ್ಲ ಕಡೆಗೂ ಪ್ಲಾಸ್ಟಿಕ್ ನಿಷೇಧವಿದೆ, ಆದರೆ ಕುರುವತ್ತಿ ಗ್ರಾಮದ ನದಿ ತೀರ ಪೂರ್ಣ ಪ್ಲಾಸ್ಟಿಕ್‌ಮಯವಾಗಿದೆ. ಈ ಗ್ರಾಪಂಗೆ ಕಸ ವಿಲೇವಾರಿಗಾಗಿ ವಾಹನವಿದ್ದರೂ, ಸ್ವಚ್ಛತೆ ಮಾಡದ ಪ್ಲಾಸ್ಟಿಕ್ ನದಿ ಪಾಲಾಗಿದೆ.ಕುರುವತ್ತಿಯಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿ 2ನೇ ಹಂತದಲ್ಲಿದೆ. ನದಿ ತೀರದಲ್ಲಿರುವ ಪ್ಲಾಸ್ಟಿಕ್ ಹಾಗೂ ಕಸ ಹಾಕುವ ಹೋಟೆಲ್ ಹಾಗೂ ಅಂಗಡಿಗಳ ಮಾಲೀಕರಿಗೆ 3 ಬಾರಿ ನೋಟಿಸ್ ನೀಡಿದ್ದೇವೆ. ನಾಳೆಯೇ ನದಿ ತೀರವನ್ನು ಸ್ವಚ್ಛತೆ ಮಾಡುತ್ತೇವೆ ಎಂದು ಕುರುವತ್ತಿ ಗ್ರಾಪಂ ಪಿಡಿಒ ಗುತ್ತೆಪ್ಪ ತಿಳಿಸಿದ್ದಾರೆ.
ಕುರುವತ್ತಿ ಪುಣ್ಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ನದಿ ತೀರದ ಕಸ ರಾಶಿಯೇ ಸ್ವಾಗತಿಸುತ್ತಿದೆ. ಈ ಕುರಿತು ದೇವಸ್ಥಾನ ಮತ್ತು ಗ್ರಾಪಂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ. ತುಂಗಭದ್ರಾ ಒಡಲಿಗೆ ಕಲುಷಿತ ನೀರು ಸೇರುತ್ತಿದೆ. ಆದ್ದರಿಂದ ಅಧಿಕಾರಿಗಳು ನದಿ ತೀರದ ಗ್ರಾಮಗಳಿಗೆ, ಮೊದಲ ಹಂತದಲ್ಲೇ ಬೂದು ನೀರು ನಿರ್ವಹಣೆ ಕಾಮಗಾರಿ ಮಂಜೂರಾಗಿ ನೀಡಬೇಕು ಎಂದು ಕುರುವತ್ತಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.