ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಹೆಲಿಕ್ಯಾಪ್ಟರ್ ಮೂಲಕ ವಿರಾಜಪೇಟೆಯ ಗಾಲ್ಫ್ ಮೈದಾನಕ್ಕೆ ಆಗಮಿಸಿದರು. ಈ ಸಂದರ್ಭ ಹೆಲಿಪ್ಯಾಡ್ ನಿಂದ ವಿರಾಜಪೇಟೆಯ ತಮ್ಮ ನಿವಾಸಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಸ್ವತಃ ಕಾರು ಚಾಲನೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆದೊಯ್ದರು.ಜೆಸಿಬಿಯಲ್ಲಿ ಸಿಎಂಗೆ ಹೂವು ಹಾಕಿ ಸ್ವಾಗತ ವಿರಾಜಪೇಟೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಜರಪೇಟೆಯ ಬಳಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಯುವತಿಯರು ಹೂವು ಹಾಕುವ ಮೂಲಕ ಸ್ವಾಗತಿಸಿದರು. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಎರಡು ಜೆಸಿಬಿ ವಾಹನದಲ್ಲಿ ಸುಮಾರು 250 ಕೆ.ಜಿ. ಚೆಂಡು ಹೂವನ್ನು ಹಾಕಿ ಬರ ಮಾಡಿಕೊಂಡರು. ಕಾಂಗ್ರೆಸ್ ಧ್ವಜ ಹಿಡಿದು ಕಾಂಗ್ರೆಸ್ಸಿನ ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕಿದರು. ಬೈಕ್ ಜಾಥಾ ವಿರಾಜಪೇಟೆಯ ಪಂಜರಪೇಟೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು. ಶಾಸಕ ಪೊನ್ನಣ್ಣ ನಿವಾಸದ ಸಮೀಪ ಯುಕವರನ್ನು ಪೊಲೀಸರು ಅಡ್ಡಗಟ್ಟಿದರು. ನೂರಾರು ಯುವಕರು ಬೈಕ್ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು. ಈ ವೇಳೆ ಮತ್ತೊಂದು ರಸ್ತೆಯ ಮೂಲಕ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟರು.ಕೊಡಗಿನ ಸಾಂಪ್ರದಾಯಿಕ ಆಹಾರವಿರಾಜಪೇಟೆಯ ಸಂತ ಅನ್ನಮ್ಮ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿನ ಸಾಂಪ್ರದಾಯಿಕ ಆಹಾರ ಸವಿದರು. ಸ್ವತಃ ಶಾಸಕ ಪೊನ್ನಣ್ಣ ಅವರೇ ಮುಖ್ಯಮಂತ್ರಿಗೆ ಆಹಾರ ಬಡಿಸಿದರು. ಕೊಡಗಿನ ವಿಶೇಷ ಸಾಂಪ್ರದಾಯಿಕ ಆಹಾರ ಅಕ್ಕಿರೊಟ್ಟಿ, ನಾಟಿ ಕೊಳಿ ಸಾರು, ಕಡುಬು ರಾಗಿಮುದ್ದೆ, ನೂಲುಪುಟ್ಟು ವಿಶೇಷವಾಗಿತ್ತು. 3 ಗಂಟೆ ತಡವಾಗಿ ಆಗಮಿಸಿದ ಸಿಎಂಕೊಡಗು ಜಿಲ್ಲೆಯ ವಿರಾಜಪೇಟೆಗೆ ನಿಗದಿಯಂತೆ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ 10 ಗಂಟೆಗೆ ಆಗಮಿಸಬೇಕಿತ್ತು. ಆದರೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ಹಾಗೂ ಸಾರ್ವಜನಿಕರ ಅಹವಾಲು ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಕೊಡಗಿಗೆ ಸುಮಾರು 3 ಗಂಟೆಯ ನಂತರ ಆಗಮಿಸಿದರು. ಮಧ್ಯಾಹ್ನ 1 ಗಂಟೆಗೆ ವಿರಾಜಪೇಟೆಯ ಕೂರ್ಗ್ ಗಾಲ್ಫ್ ಲಿಂಕ್ಸ್ ಹೆಲಿಪ್ಯಾಡ್ ಗೆ ಆಗಮಿಸಿದರು. ನಂತರ ಶಾಸಕ ಪೊನ್ನಣ್ಣ ಅವರ ಮನೆಗೆ ತೆರಳಿ, ವಿರಾಜಪೇಟೆಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡರು. ಬಳಿಕ ಕೊಟ್ಟಮುಡಿ ಕಾರ್ಯಕ್ರಮದ ನಂತರ ಸಂಜೆ 5 ಗಂಟೆ ವೇಳೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದರು. ಸಂಜೆ 7 ಗಂಟೆ ವೇಳೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೂತನ ಕಚೇರಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ನಂತರ ರಸ್ತೆಯ ಮೂಲಕ ಬೆಂಗಳೂರಿಗೆ ತೆರಳಿದರು. ಅಂದು ಮೊಟ್ಟೆ, ಇಂದು ಪ್ರೀತಿಯ ಹೂಮಳೆ!
ವಿರೋಧ ಪಕ್ಷದ ನಾಯಕನಾಗಿ ಕೊಡಗಿಗೆ ಬಂದಿದ್ದಾಗ ಕೆಲವು ಕಿಡಿಗೇಡಿಗಳು ನನ್ನ ಮೇಲೆ ಮೊಟ್ಟೆ ಎಸೆದಿದ್ದರು. ಮುಖ್ಯಮಂತ್ರಿಯಾಗಿ ಇಂದು ಆಗಮಿಸಿದ ಸಂದರ್ಭ ಕೊಡಗಿನ ಸಮಸ್ತ ಸಜ್ಜನ ಜನಸಮೂಹ ಪ್ರೀತಿಯ ಹೂಮಳೆಯಲ್ಲಿ ನನ್ನನ್ನು ಮುಳುಗಿಸಿದೆ. ಇದು ಕೊಡಗಿನ ಸಜ್ಜನರ ಗೆಲುವು, ಇದೇ ಪ್ರಜಾ ಪ್ರಭುತ್ವದ ಸೌಂದರ್ಯ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.