ಕಟ್ಟೆರಂಗನಾಥಸ್ವಾಮಿಗೆ ಮೊಲ ಹಿಡಿದು ತಂದರೆ ಮಾತ್ರ ಪೂಜೆ!

KannadaprabhaNewsNetwork | Published : Jan 16, 2024 1:47 AM

ಸಾರಾಂಶ

ಗ್ರಾಮದ ಒಳಿತಿಗಾಗಿ ಕಾಡಿನಿಂದ ತಂದ ಮೊಲಕ್ಕೆ ಮೊದಲು ಸ್ನಾನ ಮಾಡಿಸಿ ನಂತರ ದೇವರ ಸನ್ನಿಧಿಯಲ್ಲಿ ನಾಮಧಾರಣೆ ಮಾಡಲಾಗುತ್ತದೆ. ಆನಂತರ ಊರಿನ ಅಕ್ಕಸಾಲಿಗರು ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯದಂತೆ ಮೊಲದ ಕಿವಿಗೆ ಓಲೆ ಹಾಕುತ್ತಾರೆ!

ಎಸ್‌ ನೇರಲಕೆರೆ ಗ್ರಾಮದಲ್ಲಿ ತಲತಲಾಂತರದಿಂದ ನಡೆದುಕೊಂಡು ಬಂದಿದೆ ಈ ಸಂಪ್ರದಾಯಎನ್. ವಿಶ್ವನಾಥ್‌ ಶ್ರೀರಾಂಪುರ

ಕನ್ನಡಪ್ರಭವಾರ್ತೆ ಹೊಸದುರ್ಗ

ರಾಜ್ಯದ ಹಲವೆಡೆ ದೇವಾಲಯಗಳಲ್ಲಿ ಮಕರ ಸಂಕ್ರಾಂತಿ ಹಬ್ಬದಂದು ಮೊಲ ಬಿಡುವ ಸಂಪ್ರದಾಯ ರೂಢಿಯಲ್ಲಿದ್ದರೆ ಎಸ್‌ ನೇರಲಕೆರೆ ಗ್ರಾಮದ ಕಟ್ಟೆರಂಗನಾಥಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದ ಮಾರನೆ ದಿನ ಮೊಲ ಹಿಡಿದು ತಂದು ಬಿಡುವ ಪದ್ದತಿ ರೂಢಿ. ಕೆಲವೆಡೆ ಮೊಲ ಸಿಗದಿದ್ದರೆ ತೆಂಗಿನ ಕಾಯಿ ಪೂಜಿಸಿ ಉರುಳು ಬಿಡುತ್ತಾರೆ. ಆದರೆ ಎಸ್‌ ನೆರೆಲಕೆರೆ ಗ್ರಾಮದಲ್ಲಿ ಮೊಲ ಹಿಡಿದು ತರಲೇ ಬೇಕು. ಇಲ್ಲವಾದರೆ ಮೊಲ ಸಿಗುವವರೆಗು ದೇವರಿಗೆ ಪೂಜೆ , ನೇವೆದ್ಯೆ ಎಲ್ಲವೂ ಬಂದ್‌.

ಇಂತಹದೊಂದು ಆಚರಣೆಯಿಂದ ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದಿದೆ. ಸಂಕ್ರಾಂತಿ ಮಾರನೇ ದಿನ ಬೆಳಗ್ಗೆ ಊರ ಮುಂಬಾಗದಲ್ಲಿರುವ ಕಟ್ಟೆರಂಗನಾಥಸ್ವಾಮಿ ಉದ್ಬವ ಮೂರ್ತಿಗೆ ನಿಯೋಜಿತ ದಾಸಪ್ಪರು ಪೂಜೆ ಸಲ್ಲಿಸಿ ಬೂತಪ್ಪ ದೇವರುಗಳನ್ನು ಕರೆದುಕೊಂಡು ಮೊಲ ಹಿಡಿಯಲು ತೆರಳುತ್ತಾರೆ. ಇತ್ತ ಮೊಲ ಹಿಡಿಯಲು ಹೊರಡುತ್ತಿದ್ದಂತೆ ಗ್ರಾಮದ ಊರೊಳಗಣ ದೇವಾಲಯದಲ್ಲಿರುವ ರಂಗನಾಥಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಊರ ಮುಂಭಾಗದ ಮೂಲ ದೇವಾಲಯಕ್ಕೆ ಕರೆತಂದು ದೇವಾಲಯ ಮುಂಭಾಗದ ಮಂಟಪದಲ್ಲಿ ಕೂರಿಸಲಾಗುತ್ತದೆ.

ಬೆಳ್ಳಂಬೆಳಗ್ಗೆ ಮೊಲ ಹಿಡಿಯಲು ಹೊರಟವರು ಸಾಮಾನ್ಯವಾಗಿ ಮಧ್ಯಾಹ್ನ 12ಗಂಟೆಯೊಳಗೆ ಮೊಲ ಹಿಡಿದು ತರುತ್ತಾರೆ. ಒಂದು ವೇಳೆ ಮೊಲ ಸಿಗುವುದು ತಡವಾದರೆ ಸಂಜೆ 6 ಗಂಟೆಯೊಳಗೆ ಮೊಲ ಹಿಡಿದು ತರಲೇ ಬೇಕು. ಇಲ್ಲವಾದರೆ ಇನ್ನೂ ಮಾರನೇ ದಿನ ಮೊಲ ಸಿಗುವವರೆಗೂ ದೇವರಿಗೆ ಪೂಜೆ ಇರುವುದಿಲ್ಲ. ಅಲ್ಲದೆ ದೇವರನ್ನು ಹೊರ ಮಂಟಪದಲ್ಲಿಯೇ ಕುಳ್ಳಿರಿಸಲಾಗುತ್ತದೆ.

ಮೊಲ ಹಿಡಿಯಲು ಹೊರಡುವಾಗ ಮಾಂಸಹಾರ ಸೇವನೆ ಮಾಡುವಂತಿಲ್ಲ. ಸೂತಕದವರ ನರಳು ಬೀಳುವಂತಿಲ್ಲ. ಯಾವುದೇ ಮುಟ್ಟು ಚಟ್ಟು ಆಗುವಂತಿಲ್ಲ. ಮೊಲ ಹಿಡಿಯಲು ಹೊರಟವರು ಪರಿಶುದ್ಧವಾಗಿ ಹೊಗಬೇಕು. ಇಲ್ಲವಾದರೆ ಮೊಲ ಸಿಗುವುದಿಲ್ಲ ಎನ್ನುವ ನಂಬಿಕೆ ಜನರಲ್ಲಿದೆ. ಸಾಮಾನ್ಯವಾಗಿ 12 ಗಂಟೆಯೊಳಗೆ ಮೊಲ ಸಿಗುತ್ತದೆ. ಒಂದು ವೇಳೆ ಹೊರಡುವಾಗ ಏನಾದರೂ ತೊಂದರೆಗಳಾದರೆ ಕೆಲವು ವೇಳೆ ಸಿಕ್ಕ ಮೊಲ ತಪ್ಪಿಸಿಕೊಳ್ಳುವುದು ಉಂಟು ಎನ್ನುತ್ತಾರೆ ಗ್ರಾಮದ ಮುಖಂಡ ಓಂಕಾರಪ್ಪ.

ಗ್ರಾಮದ ಒಳಿತಿಗಾಗಿ ಆಚರಣೆ:ಕಾಡಿನಿಂದ ತಂದ ಮೊಲಕ್ಕೆ ಮೊದಲು ಸ್ನಾನ ಮಾಡಿಸಿ ನಂತರ ದೇವರ ಸನ್ನಿಧಿಯಲ್ಲಿ ನಾಮಧಾರಣೆ ಮಾಡಲಾಗುತ್ತದೆ. ಆನಂತರ ಊರಿನ ಅಕ್ಕಸಾಲಿಗರು ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯದಂತೆ ಮೊಲದ ಕಿವಿಗೆ ಓಲೆ ಹಾಕುತ್ತಾರೆ. ನಂತರ ಮೊಲ ನವ ವಧುವಿನಂತೆ ಶೃಂಗರಿಸಿ ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಿ ಮತ್ತೆ ಬಿದುರಿನ ಬುಟ್ಟಿಯಲ್ಲಿ ಕೂರಿಸಿ ಅದನ್ನು ತಲೆ ಮೇಲೆ ಹೊತ್ತು ದೇವರ ಮೂರ್ತಿಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಈ ಎಲ್ಲ ಆಚರಣೆಗಳಿಂದ ಶೂನ್ಯಮಾಸದ ದೋಷ ನಿವಾರಣೆ ಆಗಿ ಗ್ರಾಮದ ಜನರಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.

ಈ ಮೊಲ ಸಾಯಿಸುವಂತಿಲ್ಲ: ಸಂಕ್ರಾಂತಿ ಹಬ್ಬದಂದು ಪೂಜೆ ಮಾಡಿ ಬಿಡುವ ಮೊಲಕ್ಕೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಈ ಮೊಲವನ್ನು ಮತ್ತೆ ಯಾರೂ ಹಿಡಿಯುವಂತಿಲ್ಲ. ಒಂದು ವೇಳೆ ಬೇಟೆ ಯಾಡುವಾಗ ಸಿಕ್ಕರೂ ಅದನ್ನು ಸಾಯಿಸುವಂತಿಲ್ಲ. ಅದರ ಗುರುತಿಗಾಗಿಯೇ ಮೊಲದ ಕಿವಿಗೆ ಓಲೆ ಹಾಕಲಾಗುತ್ತದೆ ಎನ್ನುತ್ತಾರೆ ಗ್ರಾಮದ ಮುಖಂಡ ರಂಗನಾಥ.

ತಲ ತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಯಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಲ್ಲಿದ್ದು ಅದಕ್ಕಾಗಿಯೇ ಪ್ರತಿ ವರ್ಷ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎನ್ನುವುದು ಎಸ್‌. ನೇರಲಕೆರೆ ಗ್ರಾಮಸ್ಥರ ಅಭಿಪ್ರಾಯ.

Share this article