ಮಂಡ್ಯ ಕೃಷಿ ಭೂಮಿಯಲ್ಲಿ ಕಳಪೆ ಫಲವತ್ತತೆ: ಕವಿತಾ ಕುರುಗುಂಟಿ

KannadaprabhaNewsNetwork |  
Published : Jul 06, 2025, 01:48 AM IST
5ಕೆಎಂಎನ್‌ಡಿ-9ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಾಗೃತ ಕರ್ನಾಟಕದ ವತಿಯಿಂದ ಶನಿವಾರ ನಡೆದ ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಎಂಬ ವಿಷಯ ಕುರಿತು ಕೃಷಿ ತಜ್ಞೆ ಕವಿತಾ ಕುರುಗಂಟಿ ಮಾತನಾಡಿದರು. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿರುವ ಭೂಮಿ ಹಿಡುವಳಿ ಏಕ ಪ್ರಕಾರವಾಗಿದೆ. ಶೇ. ೯೫ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ. ಜಿಲ್ಲೆಯ ಶೇ.೬೭ರಷ್ಟು ಮಾತ್ರ ನೀರಾವರಿ ಪ್ರದೇಶವಾಗಿದೆ. ಅಮೆರಿಕ ಶೇ.೧೫ರಷ್ಟು ನೀರಾವರಿ ಭೂಮಿಯನ್ನು ಮಾತ್ರ ಹೊಂದಿದ್ದು, ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ ಎಂದರೆ, ಮಂಡ್ಯ ಏಕೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲೆ ಶೇಕಡಾ ೬೭ ರಷ್ಟು ನೀರಾವರಿ ಹೊಂದಿದ್ದರೂ ಮರುಭೂಮಿಯಲ್ಲಿ ಇರುವಂತಹ ಕಳಪೆ ಫಲವತ್ತತೆ ಇದೆ ಎಂದರೆ ಎಷ್ಟರ ಮಟ್ಟಿಗೆ ಭೂಮಿ ರಾಸಾಯನಿಕಗಳಿಂದ ಕಲುಷಿತವಾಗಿದೆ ಎಂಬುದರ ಬಗ್ಗೆ ಚಿಂತಿಸಬೇಕು ಎಂದು ಕೃಷಿ ತಜ್ಞೆ ಕವಿತಾ ಕುರುಗಂಟಿ ಹೇಳಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಾಗೃತ ಕರ್ನಾಟಕದಿಂದ ಶನಿವಾರ ನಡೆದ ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಎಂಬುವ ವಿಷಯ ಕುರಿತು ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿರುವ ಭೂಮಿ ಹಿಡುವಳಿ ಏಕ ಪ್ರಕಾರವಾಗಿದೆ. ಶೇ. ೯೫ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ. ಜಿಲ್ಲೆಯ ಶೇ.೬೭ರಷ್ಟು ಮಾತ್ರ ನೀರಾವರಿ ಪ್ರದೇಶವಾಗಿದೆ. ಅಮೆರಿಕ ಶೇ.೧೫ರಷ್ಟು ನೀರಾವರಿ ಭೂಮಿಯನ್ನು ಮಾತ್ರ ಹೊಂದಿದ್ದು, ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ ಎಂದರೆ, ಮಂಡ್ಯ ಏಕೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಮಂಡ್ಯ ನೀರಾವರಿ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಬರುವುದು ಕೇವಲ ಕಾವೇರಿ ವಿಷಯ ಬಂದಾಗ ಮಾತ್ರ. ಇನ್ನು ಕೃಷಿ ಮಾಡುವ ಜಮೀನು ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದನ್ನು ತಡೆಗಟ್ಟಿ ಮತ್ತೆ ಭೂಮಿಯ ಫಲವತ್ತತೆ ಹೆಚ್ಚಿಸಲು ಕ್ರಮವಹಿಸಬೇಕಾಗಿದೆ. ಅದಷ್ಟು ನೈಸರ್ಗಿಕ ಕೃಷಿಯತ್ತೆ ಹೊರಳಬೇಕಿದೆ ಎಂದು ಸಲಹೆ ನೀಡಿದರು.

ಕೃಷಿಗಿಂತ ಹೆಚ್ಚು ಸಮಸ್ಯೆ ಇರುವ ಮತ್ತೊಂದು ಕ್ಷೇತ್ರವಿಲ್ಲ. ಹಾಗೆಯೇ ಸಮಸ್ಯೆ ಇಲ್ಲದ ಕ್ಷೇತ್ರಗಳೂ ಇಲ್ಲ, ಬೇರೆ ಕ್ಷೇತ್ರಗಳಲ್ಲಿ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡುವ ರೀತಿಯಲ್ಲಿ ಕೃಷಿಯಲ್ಲಿಯೂ ಸಹ ಸಮಸ್ಯೆಗಳ ಅವಲೋಕನ ಆಗಬೇಕು, ಕೃಷಿಯನ್ನು ಆದಾಯ ಬರುವ ಕ್ಷೇತ್ರವನ್ನಾಗಿ ಮಾಡಿಕೊಳ್ಳಲು, ವಾತಾವರಣ, ಆದಾಯ, ಅವಶ್ಯಕತೆ, ನಷ್ಟ ಎಲ್ಲದರ ಬಗ್ಗೆಯೂ ವ್ಯವಸ್ಥಿತ ಚಿಂತನೆ ನಡೆಯಬೇಕು. ಹೊಸ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದರು.

ಮಂಡ್ಯದಲ್ಲಿನ ಕೃಷಿ ಬೆಳೆಗಳ ಇಳುವರಿ ಕಡಿಮೆಯಾಗಿದೆ. ಭತ್ತ, ಕಬ್ಬು ಸೇರಿದಂತೆ ಇತರೇ ಬೆಳೆಗಳ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದ್ದು ಇದಕ್ಕೆ ಮುಖ್ಯ ಕಾರಣವೇ ಇಲ್ಲಿನ ಕಲುಷಿತ ಹಾಗೂ ನೈಟ್ರೇಟ್‌ನಂತಹ ಅಂಶವೊಂದಿರುವ ನೀರು. ಹಾಗಾಗಿ ಕೃಷಿ ಇಲಾಖೆ ಸಹಕಾರ ಪಡೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಫಲವತ್ತತೆ ಕಳೆದುಕೊಳ್ಳುತ್ತಿರುವ ಭೂಮಿಯ ಮರುಸ್ಥಾಪನೆಗೆ ನೈಸರ್ಗಿಕ ಕೃಷಿಯತ್ತ ರೈತರು ಮುಖ ಮಾಡಬೇಕು. ಕೃಷಿಯಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ ಮಾನವರಲ್ಲಿಯೂ ಸಹ ಬಂಜೆತನ ಹೆಚ್ಚಾಗುತ್ತಿದೆ. ಈ ರೀತಿಯ ಅನೇಕ ಸಮಸ್ಯೆಗಳನ್ನು ಜನ ಸಾಮಾನ್ಯರು ಸಹ ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ರೈತರು ಮಿಶ್ರ ಬೇಸಾಯ ಪದ್ಧತಿಗೆ ರೈತರು ಒತ್ತು ನೀಡಬೇಕು, ಆಯಾ ರೀತಿ ಮಾಡಿದಾಗ ಮಾತ್ರ ಫಲವತ್ತತೆ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.

ವಿಚಾರವಾದಿ ಡಾ.ಎಚ್.ವಿ.ವಾಸು ಮಾತನಾಡಿ, ಕೃಷಿಗಿರುವ ಸಾಮಾಜಿಕ ಪ್ರತಿಷ್ಠೆ ಕಡಿಮೆಯಾಗಿದೆ. ನಗರ ಪ್ರದೇಶ ಅಥವಾ ನಗರೀಕರಣವೇ ಅಭಿವೃದ್ಧಿ ಎಂದು ಕೆಲವರಿಂದ ಬಿಂಬಿಸಲಾಗುತ್ತಿದೆ. ಕೃಷಿ ಹಾಗೂ ಗ್ರಾಮ ಪ್ರಧಾನವಾಗಿರುವ ಜಿಲ್ಲೆ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಮಂಡ್ಯ ಜಿಲ್ಲೆ ಸಾಧಿಸಿ ತೋರಿಸುತ್ತಿದೆ. ಆದರೆ ಇಲ್ಲಿನ ಜನರು ಅದನ್ನು ಅರ್ಥೈಸಿಕೊಂಡು ಕೃಷಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರೈತ ಹೋರಾಟಗಾರರಾದ ನಂದಿನಿ ಜಯರಾಂ ಅವರು ಅಧ್ಯಕ್ಷತೆ ವಹಿಸಿದ್ದರು. ಜಾಗೃತ ಕರ್ನಾಟಕದ ಸುಬ್ರಹ್ಮಣ್ಯ, ಜಿ.ಸಂತೋಷ್, ಪತ್ರಕರ್ತ ಎನ್.ನಾಗೇಶ ಭಾಗವಹಿಸಿದ್ದರು.

PREV