ಧಾನ್ಯ ನೀಡಿ ಮಣ್ಣೆತ್ತು ಖರೀದಿಸುತ್ತಿರುವ ಗ್ರಾಮೀಣ ಜನತೆ । ಪಿಒಪಿ ಎತ್ತುಗಳ ಮಾರಾಟ ಜೋರು
ಎಂ. ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಪಟ್ಟಣದ ಮನೆ-ಮನೆಗಳಲ್ಲೂ ನಡೆಯುವ ವಿಶೇಷ ಪೂಜೆಗೆ ಪಿಒಪಿ ಬಣ್ಣದ ಎತ್ತುಗಳು ಮಾರುಕಟ್ಟೆಗೆ ಧಾವಿಸಿವೆ.
ಈ ವರೆಗೆ ಪಿಒಪಿಯಿಂದ ತಯಾರಾದ ಎತ್ತುಗಳು ಪಟ್ಟಣದಲ್ಲಿ ಮಾರಾಟ ಹೇಳಿಕೊಳ್ಳುವಂತಿರಲಿಲ್ಲ. ಆದರೆ ಈ ಬಾರಿ ಪರಿಸರ ಸ್ನೇಹಿ ಎತ್ತುಗಳಿಗಿಂತ ಪಿಒಪಿ ಎತ್ತುಗಳ ಸಂಖ್ಯೆ ಹೆಚ್ಚು ಮಾರಾಟಕ್ಕೆ ಬಂದಿದ್ದು, ಜನ ಪಿಒಪಿ ಎತ್ತುಗಳನ್ನೆ ಕೊಳ್ಳುತ್ತಿದ್ದಾರೆ.ಮಹಾರಾಷ್ಟ್ರದ ಸೊಲ್ಲಾಪುರದಿಂದ ಪಿಒಪಿ ಎತ್ತುಗಳನ್ನು ಪಟ್ಟಣಕ್ಕೆ ತಂದಿದ್ದು, ಜೊತೆ ಎತ್ತಿಗೆ ₹ ೫೦ರಿಂದ ಆರಂಭಗೊಂಡು 1000 ವರೆಗೂ ಇವೆ. ಪಟ್ಟಣದ ಕನಕಾಚಲಪತಿ ಸೇತುವೆ ಬಳಿ ಹಾಗೂ ಹಳೇ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪಿಒಪಿ ಎತ್ತುಗಳೇ ಮಾರಾಟವಾಗುತ್ತಿವೆ.ಧಾನ್ಯ ನೀಡಿ ಮಣ್ಣೆತ್ತು ಖರೀದಿ:
ಪೂರ್ವಜರ ಕಾಲದಿಂದಲೂ ಸಂಪ್ರದಾಯ ರೂಢಿಸಿಕೊಂಡು ಬರುತ್ತಿರುವ ಕುಟುಂಬದವರು ಮಣ್ಣಿನಿಂದ ತಯಾರಾದ ಎತ್ತುಗಳ ಖರೀದಿಸಿ ಪೂಜೆಸುತ್ತಾರೆ. ಇಂದಿಗೂ ಕುಂಬಾರ ಹಾಗೂ ಚಿತ್ರಗಾರ ಸಮಾಜದವರು ಮಣ್ಣೆತ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಣ್ಣೆತ್ತು ಖರೀದಿಸಿದವರು ಹಣದ ಬದಲಾಗಿ ದವಸ, ಧಾನ್ಯ ನೀಡುತ್ತಿದ್ದಾರೆ.ಪೂಜೆಗೆ ಮಣ್ಣಿನ ಎತ್ತುಗಳೇ ಶ್ರೇಷ್ಠ:ಹಿಂದೂ ಸಂಪ್ರದಾಯದಲ್ಲಿ ಮಣ್ಣಿನಿಂದ ತಯಾರಾದ ಎತ್ತುಗಳೇ ಪೂಜೆಗೆ ಶ್ರೇಷ್ಠವಾಗಿದ್ದು, ಪಟ್ಟಣದ ಬಹುತೇಕರು ಪರಿಸರ ಸ್ನೇಹಿ ಮಣ್ಣೆತ್ತುಗಳನ್ನು ಕೊಂಡು ಪೂಜಿಸುತ್ತಾರೆ. ಕೆಲ ಕುಂಬಾರರು ಮನೆ-ಮನೆಗೆ ತೆರಳಿ ಮಣ್ಣೆತ್ತುಗಳ ಮಾರಾಟ ಮಾಡುವುದು ಕಂಡು ಬಂತು.ಮಣ್ಣೆತ್ತುಗಳಿಗಿಂತ ಪಿಒಪಿ ಎತ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದರೂ ನಮ್ಮೂರು ಸೇರಿ ಸುತ್ತಮುತ್ತಲಿನ ಹಳ್ಳಿ ಜನ ಮಣ್ಣಿನಿಂದ ತಯಾರಾದ ಎತ್ತುಗಳನ್ನೆ ಕೊಂಡು ಪೂಜೆಸುತ್ತಾರೆ. ಪೂರ್ವಜರ ಕಸುಬು ಮುಂದುವರೆಸಿ ಜೀವನ ಸಾಗಿಸುತ್ತಿದ್ದೇನೆ. ತುತ್ತು ಅನ್ನಕ್ಕೆ ಬರವಿಲ್ಲ. ಹಬ್ಬ ಹರಿದಿನಗಳು ನಮ್ಮಂತವರ ಬದುಕು ಹಸನಾಗಿಸುತ್ತಿವೆ ಎಂದು ವ್ಯಾಪಾರಿ ಮರಿಯಪ್ಪ ಕುಂಬಾರ ತಿಳಿಸಿದ್ದಾರೆ.ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಕೊಂಡು ಪೂಜಿಸುವುದು ಪ್ರತೀತಿ. ಹೀಗಾಗಿ ಹಿರಿಯರ ಕಾಲದಿಂದಲೂ ಮಣ್ಣೆತ್ತುಗಳನ್ನು ದವಸ, ಧಾನ್ಯ ನೀಡಿ ಕುಂಬಾರರು ಅಥವಾ ಚಿತ್ರಗಾರರ ಬಳಿ ತೆಗೆದುಕೊಳ್ಳುತ್ತೇವೆ. ಅಮಾವಾಸ್ಯೆ ಹಾಗೂ ಮರು ದಿನ ವಿಶೇಷ ಪೂಜೆ ಮಾಡಿ ವಿಸರ್ಜಿಸುತ್ತೇವೆ ಎಂದು ಸ್ಥಳೀಯ ಕೆ.ಎಚ್. ಕುಲಕರ್ಣಿ ತಿಳಿಸಿದ್ದಾರೆ.