ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ದೇಶದಲ್ಲಿ ದಿನೇ ದಿನೇ ಅಪೌಷ್ಟಿಕತೆಯ ಪ್ರಮಾಣ ಹೆಚ್ಚುತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ್ ಜಿ.ಟಿ. ತಿಳಿಸಿದರು.ಪಟ್ಟಣದ ತಾಪಂ ಆವರಣದ ಸಾಮರ್ಥ್ಯ ಸೌಧದ ಭವನದಲ್ಲಿ ನಡೆದ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಪ್ರಸ್ತುತ ಶೇ.14ರಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಈ ರೀತಿಯ ತೊಂದರೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರ ಸಂಕಷ್ಟ ಸರಿಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಧ್ಯೇಯವಾಗಿದೆ, ಅಪೌಷ್ಟಿಕತೆ ತಡೆಗಟ್ಟಲು 6 ಯೋಜನೆಗಳನ್ನು ರೂಪಿಸಲಾಗಿದೆ.ಸ್ವಚ್ಛ ಪರಿಸರ ನಿರ್ಮಾಣ, ಬೊಜ್ಜು ನಿವಾರಣೆ, 3 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೋಷಣೆಯ ಜೊತೆಗೆ ಪ್ರಾಥಮಿಕ ಶಿಕ್ಷಣ ಒದಗಿಸುವುದು, 6 ತಿಂಗಳ ಒಳಗಿನ ಮಕ್ಕಲಿಗೆ ಉತ್ತಮ ಆರೋಗ್ಯಯುತ ಪೌಷ್ಟಿಕ ಆಹಾರ ಒದಗಿಸುವುದು, ಮತ್ತು ಮಕ್ಕಳ ಸಂರಕ್ಷಣೆಯಲ್ಲಿ ತಂದೆಯ ಪಾತ್ರ ಕುರಿತಂತೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಪೃಥ್ವಿ ಮಾತನಾಡಿ, ನಿತ್ಯದ ಒತ್ತಡ ಬದುಕಿನಲ್ಲಿ ಊಟ ಸೇವನೆ ಮಾಡುವಾಗ ಎಲ್ಲಾ ಒತ್ತಡಗಳನ್ನು ಮರೆತು ಸಮಾಧಾನಕರವಾಗಿ ಊಟ ಸೇವಿಸಬೇಕು, ಗರ್ಭಿಣಿಯರಿಗೆ ಇಲಾಖೆಯು ಸಾಕಷ್ಟು ಅನುಕೂಲ ಮಾಡಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಭುವನೇಶ್ವರಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನ ವಾಗಿರಲು ಆರೋಗ್ಯಯುತ, ಪೌಷ್ಟಿಕ ಅಹಾರ ಸೇವಿಸಬೇಕು. ಹಸಿ ತರಕಾರಿಗಳು, ದ್ವಿದಳ ಮತ್ತು ಏಕದಳ ಧಾನ್ಯಗಳು, ಮತ್ತು ಹಣ್ಣು ಹಂಪಲುಗಳನ್ನು ದಿನನಿತ್ಯ ಮಿತವಾಗಿ ಸೇವಿಸುತ್ತಾ ಬಂದರೆ ಆರೋಗ್ಯವನ್ನು ಸಮತೋಲನದಿಂದ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಟಿಪಿಓ ನವೀನ್ ಕುಮಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೇಣುಕಾ ಜುಟ್ಲೆ, ತಾಲೂಕು ಪೋಷಣ್ ಅಭಿಯಾನ ಸಂಯೋಜಕ ನಿಂಗಪ್ಪ ಆರ್. ಹಾಗೂ ಇತರರಿದ್ದರು.