ಕನ್ನಡಪ್ರಭ ವಾರ್ತೆ ಶನಿವಾರಸಂತೆ
ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ, ಏಕಾಗ್ರತೆ ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಮಾಜ ಸೇವಕ ಮತ್ತು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಹೇಳಿದರು.ಅವರು ಆಲೂರುಸಿದ್ದಾಪುರ ಸರ್ಕಾರಿ ಪ. ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾ ವಿದ್ಯಾರ್ಥಿ ಸಂಸದ ಸಂಘದ ಉದ್ಘಾಟನೆ, ಕ್ಲಸ್ಟರ್ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳಿಂದ ಉಚಿತ ನೋಟ್ ಬುಕ್ ಹಾಗೂ ಶಾಲೆಗೆ ತಟ್ಟೆ ಲೋಟಗಳ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದರು.
ಕಠಿಣ ಪರಿಶ್ರಮ ಏಕಾಗ್ರತೆಯಿಂದ ಓದಿನ ಕಡೆ ಗಮನಹರಿಸಿದರೆ ಬುದ್ಧಿವಂತ ವಿದ್ಯಾರ್ಥಿಯಾಗಬಹುದು. ವಿದ್ಯಾರ್ಥಿ ಜೀವನದಲ್ಲಿ ಇಂತಹ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮುಂದೆ ಸಮಾಜದಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿಯಾಗಿ ಬೆಳೆಯಬಹುದು ಎಂದರು.ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಇದರಿಂದಲೂ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬಹುದು, ಪೋಷಕರು ಮಕ್ಕಳಿಗೆ ಒತ್ತಡ ಹೇರಬಾರದು ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸ ಬೇಕು. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಹೆತ್ತವರಿಗೆ ಗುರು ಹಿರಿಯರಿಗೆ ಗೌರವ ಕೊಡಬೇಕು. ಈ ಮೂಲಕ ವಿದ್ಯಾರ್ಥಿಗಳು ಸಂಸ್ಕಾರವಂತರಾಗುವಂತೆ ಸಲಹೆ ನೀಡಿದರು.
ಶಿರಂಗಾಲ ಪ.ಪೂ.ಕಾಲೇಜಿನ ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕ, ರಕ್ಷಕ, ಕೃಷಿಕ, ಸಾಧಕ, ಪೋಷಕ ಈ ಐದು ಅಂಶಗಳನ್ನು ಆದರ್ಶವನ್ನಾಗಿ ಅಳವಡಿಸಿಕೊಂಡರೆ ಜೀವನ ಮತ್ತು ಸಮಾಜದಲ್ಲಿ ಶ್ರೇಷ್ಠತೆಯನ್ನು ಕಾಣಹುದು ಎಂದರು. ವಿದ್ಯಾರ್ಥಿಗೆ ತಂದೆ ತಾಯಿ ಮಾರ್ಗದರ್ಶಕರಾಗುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೊದಲು ಹೆತ್ತವರನ್ನು ಆದರ್ಶ ವ್ಯಕ್ತಿಯನ್ನಾಗಿ ಮಾಡಿಕೊಳ್ಳಬೇಕು. ಹಾಗೇ ಪೋಷಕರು ಮಕ್ಕಳಿಗೆ ಕಷ್ಟನಷ್ಟಗಳ ಪರಿಚಯ ಮಾಡಿಕೊಡಬೇಕು. ಇದರಿಂದ ಭವಿಷ್ಯದಲ್ಲಿ ಎದುರಾಗುವ ಕಷ್ಟಕಾರ್ಪಣ್ಯಗಳನ್ನು ಎದುರಿಸಲು ಸಹಾಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ದಾನಿ ಹರಪಳ್ಳಿ ರವೀಂದ್ರ ಮತ್ತು ಅಬ್ಬೂರುಕಟ್ಟೆ ಪುನಿತ್‍ರಾಜ್‍ಕುಮಾರ್ ಅಭಿಮಾನಿ ಸಂಘದ ವತಿಯಿಂದ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಉಚಿತವಾಗಿ ನೀಡಿದ ನೋಟ್ ಪುಸ್ತಗಳು ಹಾಗೂ ಶಾಲೆಗೆ ನೀಡಿದ ತಟ್ಟೆ ಮತ್ತು ಲೋಟಗಳನ್ನು ವಿತರಣೆ ಮಾಡಲಾಯಿತು. ಆಲೂರುಸಿದ್ದಾಪುರ ಸರ್ಕಾರಿ ಪ್ರೌಢಶಾಲೆ ಮತ್ತು ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ದಾನಿ ಹರಪಳ್ಳಿ ರವೀಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಸಂಸದ್ ನಾಯಕರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು
ಸಮಾರಂಭದಲ್ಲಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿ ಜಿ.ಎಂ.ಹೇಮಂತ್, ಗ್ರಾ. ಪಂ. ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಚಂದ್ರಮೋಹನ್, ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ದಯಾನಂದ್, ಸದಸ್ಯ ಕಿರಣ್, ಪ್ರಮುಖರಾದ ದಮಯಂತಿ ಕರುಂಬಯ್ಯ, ಪಿ.ಎಸ್.ಸತೀಶ್‍ಕುಮಾರ್, ಮಲ್ಲಪ್ಪ, ಅಪ್ಪು ಅಭಿಮಾನಿ ಸಂಘದ ಅಧ್ಯಕ್ಷ ರವಿಕುಮಾರ್, ರಾಧಮಣಿ, ಪಿಡಿಒ ಹರೀಶ್, ಶಾಲಾ ಮುಖ್ಯ ಶಿಕ್ಷಕ ಸೋಮಶೇಖರ್, ಪ.ಪೂ.ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಮುಂತಾದವರಿದ್ದರು.