ಸಕಾರಾತ್ಮಕ ಚಿಂತನೆಯಿಂದ ಉತ್ತಮ ಸಮಾಜ

KannadaprabhaNewsNetwork | Published : Mar 6, 2025 12:34 AM

ಸಾರಾಂಶ

ಸಕಾರಾತ್ಮಕ ಚಿಂತನೆಗಳಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ

ಯಲ್ಲಾಪುರ: ಆಧುನಿಕತೆಯ ನಡುವೆ ಸಾಂಸ್ಕೃತಿಕತೆ ಮರೆಯಾಗಬಾರದು. ಸಾಹಿತ್ಯ, ಸಂಗೀತ, ಕಲೆಗಳು ಜನರನ್ನು ಹೆಚ್ಚು ತಲುಪಿದಾಗ ಮಾತ್ರ ಜೀವಂತವಾಗಿರಲು ಸಾಧ್ಯ. ಸಕಾರಾತ್ಮಕ ಚಿಂತನೆಗಳಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಸಂಗೀತ ಶಿಕ್ಷಕ ಪ್ರಸನ್ನ ವೈದ್ಯ ಹೇಳಿದರು.

ಹೆಗ್ಗಾರಿನ ಕಲ್ಪತರು ಸಭಾಭವನದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ಯಲ್ಲಾಪುರ ಘಟಕ ಹಮ್ಮಿಕೊಂಡಿದ್ದ ''''ತಿಂಗಳ ಅರಿವಿನ ಅಂಗಳ'''' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಗಿರೀಶ ಭಟ್ಟ ಕೋನಾಳ ಮಾತನಾಡಿ, ಸಮಾಜವನ್ನು ಹೊಸ ದೃಷ್ಟಿಯಿಂದ ನೋಡಬೇಕು. ನಾವು ಸದಾ ಕುತೂಹಲವನ್ನು ಹಿಂಬಾಲಿಸಬೇಕು. ಆಗ ನಮಗೆ ಉತ್ತಮ ಫಲಶ್ರುತಿಗಳು ದೊರಕಲಿವೆ. ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಕವಿತೆ ಸಹಾಯಕವಾಗುತ್ತದೆ. ಸಾಹಿತ್ಯವು ಬದುಕಿನ ಸಂದರ್ಶನವಾಗಿದ್ದು, ಅನುಭವದ ಆಳ ಇಳಿಯಲು ಸಹಾಯಕವಾಗುತ್ತದೆ ಎಂದರು.

ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಡಿ.ಜಿ ಭಟ್ಟ ಧುಂಡಿ ಮಾತನಾಡಿ, ನಿತ್ಯದ ಜೀವನವು ಚುರುಕುತನದಿಂದ ಕೂಡಿರಲು ನವಿರಾದ ಹಾಸ್ಯ ಇರಬೇಕು. ಕ್ರಿಯಾತ್ಮಕ ಚಟುವಟಕೆಯಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ''''ನಾನು ಓದಿದ ಪುಸ್ತಕ''''ದ ಕುರಿತು ಬರಹಗಾರರಾದ ಸ್ಮಿತಾ ರಾಘವೇಂದ್ರ ಕಲ್ಲೇಶ್ವರ, ವಿ.ಜಿ. ಗಾಂವ್ಕರ್ ಬಾಗಿನ ಕಟ್ಟಾ, ದತ್ತಾತ್ರೇಯ ಭಟ್ಟ ಕಣ್ಣಿಪಾಲ, ಪ್ರಶಾಂತ ಹೆಗ್ಗಾರ, ಶಾರದಾ ಹೆಗಡೆ ಮಾತನಾಡಿದರು.

ಸ್ವರಚಿತ ಕವನ ವಾಚನದಲ್ಲಿ ಮಧುಕೇಶ್ವರ ಭಾಗ್ವತ, ಮಂಗಲಾ ಭಾಗ್ವತ, ಪಲ್ಲವಿ ಪ್ರಸನ್ನ, ಚಂದ್ರಕಲಾ ಹೆಗಡೆ, ಸ್ಮಿತಾ ಭಟ್ಟ, ಕವಿರತ್ನ ಕೋನಾಳ, ಜಯಲಕ್ಷ್ಮಿ ಭಟ್ಟ, ಸುಲೋಚನಾ ಶೆಟ್ಟಿ, ಶಿವರಾಮ ಗಾಂವ್ಕರ್ ಕಲ್ಮನೆ ಕವಿತೆ ವಾಚಿಸಿದರು.

ಪಲ್ಲವಿ ಭಟ್ಟರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘಟಕ ಪ್ರಶಾಂತ ಭಟ್ಟ ಗುಡ್ಡೆ ಸ್ವಾಗತಿಸಿದರು. ಅ.ಭಾ.ಸಾ.ಪ. ತಾಲೂಕು ಘಟಕಾಧ್ಯಕ್ಷ ಗಣಪತಿ ಕಂಚಿಪಾಲ ಆಶಯ ನುಡಿಗಳನ್ನಾಡಿದರು. ಕಾರ್ಯದರ್ಶಿ ಶ್ರೀರಾಮ ಲಾಲಗುಳಿ ನಿರ್ವಹಿಸಿದರು. ತೇಜಸ್ವಿ ಗಾಂವ್ಕರ ವಂದಿಸಿದರು.

ಹೆಗ್ಗಾರಿನಲ್ಲಿ ತಿಂಗಳ ಅರಿವಿನ ಅಂಗಳ ಕಾರ್ಯಕ್ರಮ ನಡೆಯಿತು.

Share this article