ಹೊನ್ನಾವರ: ಕಳೆದ ವರ್ಷ ಶಿರೂರಿನಲ್ಲಿ ಉಂಟಾದ ಗುಡ್ಡ ಕುಸಿತದ ಪ್ರಕರಣದ ಆನಂತರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಬಗ್ಗೆ ಜನರು ಹೆಚ್ಚು ಭಯಪಡುತ್ತಿದ್ದಾರೆ. ಅಂತೆಯೆ ಹೊನ್ನಾವರ ತಾಲೂಕಿನ ಹಲವೆಡೆಯಲ್ಲಿ ಗುಡ್ಡ ಕುಸಿತದ ಭಯವನ್ನು ಜನರು ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ತಾಲೂಕಿನ ಅಧಿಕಾರಿಗಳು ಗುಡ್ಡಕುಸಿತದ ಭೀತಿ ಇರುವ ಪ್ರದೇಶದ ಸಮೀಪದ ನಿವಾಸಿಗಳಿಗೆ ನೋಟಿಸ್ ನೀಡುತ್ತಿದ್ದಾರೆ. ಇದು ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ತಾಲೂಕಿನಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗುತ್ತಿರುವುದರಿಂದ ತಾವು ವಾಸಿಸುವ ಮನೆಯ ಹಿಂದಿನ ಧರೆ ಕುಸಿದು ಅನಾಹುತವಾಗುವ ಸಂಭವ ಕಂಡುಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ನಿರ್ದೇಶನದಂತೆ ತಾವು ಸುರಕ್ಷಿತ ಸ್ಥಳಕ್ಕೆ ತೆರಳಲು ಅಥವಾ ಕಾಳಜಿ ಕೇಂದ್ರಕ್ಕೆ ಬರಲು ಸೂಚಿಸಲಾಗಿದೆ ಎನ್ನುವ ಸಾಮಾನ್ಯ ಒಕ್ಕಣಿಕೆಯುಳ್ಳ ನೋಟಿಸ್ ಅನ್ನು ಧರೆ ಸಮೀಪದ ನಿವಾಸಿಗಳಿಗೆ ನೀಡಲಾಗುತ್ತಿದೆ.
ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಧರೆ ಕುಸಿತದ ಜಾಗವನ್ನು ಅಧಿಕಾರಿಗಳು ಪರಿಶೀಲಿಸಿ ತೆರಳಿದ್ದರು. ಆನಂತರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಮಳೆಗಾಲದಲ್ಲಿ ಮತ್ತೆ ಬಂದು ಸುರಕ್ಷಿತ ಜಾಗಕ್ಕೆ ತೆರಳುವಂತೆ ನೋಟಿಸ್ ನೀಡಿದ್ದಾರೆ. ಆತಂಕ ಹೆಚ್ಚಿದೆ ಎಂದು ಗುಂಡಿಬೈಲ್ ನಿವಾಸಿ ನಾಗರಾಜ ಶೇಟ್ ಅಳಲು ತೋಡಿಕೊಂಡಿದ್ದಾರೆ.ಮಳೆಗಾಲವಿಡಿ ಸಂತ್ರಸ್ತರು ಯಾವ ಸುರಕ್ಷಿತ ಜಾಗ ನೋಡಿಕೊಳ್ಳಬೇಕು ಅಥವಾ ಸಂತ್ರಸ್ತರು ಉಳಿಯಲು ಸರ್ಕಾರದ ವತಿಯಿಂದ ಕಾಳಜಿ ಕೇಂದ್ರ ತೆರೆಯಲಾಗಿದೆಯೇ ಎನ್ನುವುದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಧರೆ ಕುಸಿತ ತಡೆಗಟ್ಟಲು ಅಥವಾ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಚಿವರು, ಜನಪ್ರತಿನಿಧಿಗಳೆಲ್ಲ ಮೌನ ವಹಿಸಿದ್ದಾರೆ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಜನರ ಜೀವ ಹಾಗೂ ಆಸ್ತಿ-ಪಾಸ್ತಿ ರಕ್ಷಣೆಗೆ ಆಡಳಿತ ವ್ಯವಸ್ಥೆ ಮುಂಜಾಗ್ರತಾ ಕ್ರಮವಾಗಿ ನಿಯಮಾನುಸಾರ ಧರೆ ಪಕ್ಕದ ನಿವಾಸಿಗಳಿಗೆ ನೋಟಿಸ್ ಜಾರಿಗೊಳಿಸುತ್ತಿದೆ. ಜನರು ಗಾಬರಿಯಾಗುವುದು ಬೇಡ ಎಂದು ಹೊನ್ನಾವರ ತಹಸೀಲ್ದಾರ್ ಪ್ರವೀಣ ಕರಾಂಡೆ ಹೇಳಿದರು.