ಪ್ರವಾಸಿ ತಾಣ ಗೋಕರ್ಣದಲ್ಲಿ ಹೊಂಡದಂತಾದ ರಸ್ತೆಗಳು

KannadaprabhaNewsNetwork |  
Published : Jul 06, 2024, 12:57 AM IST
ರಸ್ತೆ ನೀರು ನಿಂತು ಕೆರೆಯಂತಾಗಿರುವುದು | Kannada Prabha

ಸಾರಾಂಶ

ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳಿಗೆ ವಾಹನ ಹಾದು ಹೋಗುವ ವೇಳೆ ಕೆಸರು ಸಿಡಿಯುತ್ತಿದ್ದು, ಪರದಾಡುವಂತಾಗಿದೆ.

ಗೋಕರ್ಣ: ಪ್ರವಾಸಿ ತಾಣದಲ್ಲಿ ಒಂದು ಕಡೆ ರಸ್ತೆಗಳು ಹೊಂಡ ಬಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದ್ದರೆ, ಮತ್ತೊಂದು ಕಡೆ ಕೃಷಿಭೂಮಿಗೆ ನೀರು ನುಗ್ಗಿ ಬೆಳೆ ಬೆಳೆಯಲಾಗದೆ ರೈತರು ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಸರಿಪಡಿಸಲು ಸರ್ಕಾರದಿಂದ ಹಣ ಮಂಜೂರಾಗದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕುಳಿತಿದ್ದರೆ, ನೈಸರ್ಗಿಕವಾಗಿ ಹರಿದು ಹೋಗುವ ಮಳೆ ನೀರಿನ ಮಾರ್ಗವನ್ನು ಹಲವು ಕಡೆ ಮುಚ್ಚಿದ ಪರಿಣಾಮ ಬಡ ರೈತನ ಹೊಲ ಜಲಾವೃತಗೊಂಡಿದೆ. ಇದೇ ಸ್ಥಿತಿ ಮುಂದುವರಿದರೆ ಈ ಭಾಗದಲ್ಲಿ ಭತ್ತದ ಗದ್ದೆಗಳು ಸಂಪೂರ್ಣ ಖಾಲಿಯಾಗಿ ರೆಸಾರ್ಟ್, ಹೋಮ್‍ಸ್ಟೇಗಳಾಗಿ ಪರಿವರ್ತನೆಯಾಗಲಿದೆ.

ಸಮಸ್ಯೆ ಏನು?: ದಂಡೆಭಾಗದಿಂದ ಬೇಲೆಹಿತ್ತಲ, ರುದ್ರಪಾದ, ಭಾವಿಕೊಡ್ಲದ ವರೆಗಿನ ಕೃಷಿ ಭೂಮಿ ಮತ್ತಿತರ ಕಡೆ ಕೃಷಿ ಜಾಗದಲ್ಲಿ ರೆಸಾರ್ಟ್‌ಗಳು ನಿರ್ಮಾಣವಾಗಿದೆ. ಅಳಿದುಳಿದ ಹೊಲದಲ್ಲಿ ಭತ್ತ, ತರಕಾರಿ ಬೆಳೆಯುತ್ತಿದ್ದಾರೆ. ಆದರೆ ಅಕ್ಕಪಕ್ಕದಲ್ಲಿ ಜಾಗ ಖರೀದಿಸಿದವರು ನೆಲದ ಎತ್ತರ ಹೆಚ್ಚಿಸುವುದು, ಮಳೆ ನೀರು ಮೊದಲು ಹೋಗುತ್ತಿದ್ದ ಕಡೆ ಬಂದ್ ಮಾಡುವುದರಿಂದ ಮಳೆಗಾಲದಲ್ಲಿ ಕೃಷಿ ಭೂಮಿಗೆ ನೀರು ತುಂಬುತ್ತಿದೆ ಎಂದು ಬೆಳೆಗಾರರು ಹೇಳುತ್ತಾರೆ. ಇದರಿಂದ ಬೆಳೆ ಹಾನಿಯಾಗುತ್ತಿದೆ. ಈ ಬಗ್ಗೆ ದೂರು ನೀಡಲು ಹೋದರೆ ಡೊಡ್ಡ ಜನರ ಎದುರು ಬಡವರ ಕಷ್ಟ ಮುಚ್ಚಿ ಹೋಗುತ್ತಿದೆ.

ಬಂಗ್ಲೆಗುಡ್ಡ, ಕೆಇಬಿ ಗ್ರೀಡ್, ಕುಡ್ಲೆ ಕಡಲತೀರ ಮೇಲ್ಭಾಗದ ಪರ್ವತ ಪ್ರದೇಶದ ಹಲವು ಕಡೆ ಗುಡ್ಡ ಕಡಿದು, ಸೈಟ್ ಮಾಡಲಾಗುತ್ತಿದೆ. ಈ ಭಾಗದಲ್ಲಿ ಮಣ್ಣು ತೆಗೆದು ಸಮತಟ್ಟು ಮಾಡುತ್ತಿದ್ದು, ಮಳೆ ಬಂದಾಗ ಕಲ್ಲು ಮಣ್ಣುಗಳ ರಾಶಿ ರಸ್ತೆಯಲ್ಲಿ ತುಂಬಿ ಕೆಸರು ಗದ್ದೆಯಾಗುತ್ತಿದ್ದು, ನಿತ್ಯ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳಿಗೆ ವಾಹನ ಹಾದು ಹೋಗುವ ವೇಳೆ ಕೆಸರು ಸಿಡಿಯುತ್ತಿದ್ದು, ಪರದಾಡುವಂತಾಗಿದೆ.

ನಿರ್ಲಕ್ಷ್ಯ ಏಕೆ?: ಗುಡ್ಡ ಕಡಿದು ಮಣ್ಣು ತೆಗೆಯುವವರು ಸ್ಥಳೀಯ ಪಂಚಾಯಿತಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಪಡೆಯಬೇಕಿದೆ. ಆದರೆ, ಅನುಮತಿ ಪಡೆದಿದ್ದಾರೋ ಇಲ್ಲವೋ ಎಂದು ಪರಿಶೀಲಿಸಲು ಅಧಿಕಾರಿಗಳೇ ಇಲ್ಲ. ನೈರ್ಸಗಿಕವಾಗಿ ನೀರು ಹರಿದು ಹೋಗುವ ಜಾಗದ ದಾಖಲೆ ಪಹಣಿ ಪತ್ರಿಕೆಯಲ್ಲಿರುತ್ತದೆ. ಇದನ್ನು ಬಿಟ್ಟು ಕಟ್ಟಡ ನಿರ್ಮಾಣ ಮಾಡಿದ್ದಾರೆಯೇ, ಎಲ್ಲ ನಿಯಮವನ್ನು ಅನುಸರಿಸಲಾಗಿದೆಯೇ ಎಂಬುದನ್ನು ಸ್ಥಳೀಯ ಆಡಳಿತ ಅಥವಾ ಕಂದಾಯ ಇಲಾಖೆ ಪರಿಶೀಲನೆ ನಡೆಸಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ಒಂದೂ ಪ್ರಕರಣವಿಲ್ಲ. ಆದರೆ, ಅವಘಡಗಳು ನಿರಂತರ ನಡೆಯುತ್ತಿವೆ. ಅಂದರೆ ಬಹುತೇಕ ಎಲ್ಲ ಇಲಾಖೆಯವರು ಖಾಸಗಿಯವರ ಜತೆ ಒಳ ಒಪ್ಪಂದವಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.ಜನರ ಆಕ್ರೋಶ: ಇಲ್ಲಿನ ಹನೇಹಳ್ಳಿ ಗ್ರಾಪಂ ವ್ಯಾಪ್ತಿಯ ಕಡಮೆಯಿಂದ ಗೋಕರ್ಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ತಿಪ್ಪಸಗಿ ಬಳಿ ರಸ್ತೆಯಲ್ಲಿ ಹೊಂಡದಲ್ಲಿ ನೀರು ತುಂಬುತ್ತಿದ್ದು, ನಿತ್ಯ ಗ್ರಾಮೀಣ ಭಾಗದ ಜನರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. 150 ಮೀಟರ್ ಗೂ ಅಧಿಕ ದೂರ ಎರಡು ಅಡಿಯಷ್ಟು ನೀರು ನಿಲ್ಲುತ್ತದೆ. ಹೊಂಡ ಎಲ್ಲಿದೆ ಎಂದು ತಿಳಯದೆ ಹಲವಾರು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇಲ್ಲಿ ಸಹ ನಿವೇಶನಗಳು ನಿರ್ಮಾಣವಾದಂತೆ ಮಳೆ ನೀರು ಹರಿದು ಹೋಗುವ ಜಾಗ ಮುಚ್ಚಿದೆ. ಇದನ್ನು ತ್ವರಿತವಾಗಿ ಸರಿಪಡಿಸಬೇಕಿದೆ. ಈ ಹೊಂಡದ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಆಡಳಿತದ ದುರವಸ್ಥೆಯ ಬಗ್ಗೆ ಅಣಕಿಸಲಾಗಿದೆ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು