ಕನ್ನಡಪ್ರಭ ವಾರ್ತೆ ಬೀದರ್
ಗ್ರಾಮೀಣ ಭಾಗದಲ್ಲಿ ನಾಟಿಕೋಳಿ ಸಾಕಾಣಿಕೆಯನ್ನು ಜೀವಂತವಾಗಿಟ್ಟುಕೊಂಡಿರುವುದು ಗ್ರಾಮೀಣ ಮಹಿಳೆಯರ ಶ್ರಮ, ನಿಷ್ಠೆ ಮತ್ತು ನಿರಂತರ ಕಾಳಜಿಯ ಫಲವಾಗಿದೆ ಎಂದು ಪಶು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ನುಡಿದರು.ಐಸಿಎಆರ್–ಡೈರೆಕ್ಟರೇಟ್ ಆನ್ ಪೌಲ್ಟ್ರಿ ರಿಸರ್ಚ್, ಹೈದ್ರಾಬಾದ್ ಮತ್ತು ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ನಂದಿನಗರ ಮತ್ತು ಪಶು ವೈದ್ಯಕೀಯ ಮಹಾ ವಿದ್ಯಾಲಯ, ಬೀದರ ಇವುಗಳ ಸಂಯುಕ್ತಾಶ್ರದಲ್ಲಿ ಭಾನುವಾರ ‘ನಾಟಿಕೋಳಿ ಸಾಕಾಣಿಕೆ’ ಕುರಿತು ಒಂದು ದಿನದ ತರಬೇತಿ ಶಿಬಿರ ಹಾಗೂ ಬುಡಕಟ್ಟು ರೈತ ಮಹಿಳೆಯರಿಗೆ ರಾತ್ರಿ ಪಂಜರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಟಿ ಕೋಳಿ ಸಾಕಾಣಿಕೆ ಕೇವಲ ಒಂದು ಪುರಾತನ ಪದ್ಧತಿಯಾಗಿಯೇ ಪರಿಗಣಿಸದೆ, ಅದನ್ನು ಮಹಿಳೆಯರ ಸಬಲೀಕರಣ, ಕುಟುಂಬದ ಪೌಷ್ಟಿಕ ಆಹಾರ, ಮತ್ತು ಆರ್ಥಿಕ ಬಲವರ್ಧನೆಗೆ ಪೂರಕ ಸಾಧನೆ ಯಾಗಿ ಬಳಸಬೇಕೆಂಬ ಆವಶ್ಯಕತೆಯ ಬಗ್ಗೆ ವಿಶೇಷವಾಗಿ ಬೆಳಕು ಚೆಲ್ಲಿದರು.ಗ್ರಾಮೀಣ ಮಹಿಳೆಯರು ನಾಟಿ ಕೋಳಿ ಸಾಕಾಣಿಕೆಯಲ್ಲಿ ನೀಡುತ್ತಿರುವ ಕೊಡುಗೆ, ಆಹಾರ ಭದ್ರತೆ ಮತ್ತು ಪೋಷಣೆಯ ಕುರಿತಂತೆ ಮಾತನಾಡಿ, ಒಬ್ಬ ಮಹಿಳೆ ಪ್ರತಿ ದಿನದ ಊಟದಲ್ಲಿ ಮೊಟ್ಟೆ ಸೇವಿಸಿದರೆ, ಅದು ಆಕೆಯ ಆರೋಗ್ಯವನ್ನು ಮಾತ್ರವಲ್ಲ, ತನ್ನ ಮಕ್ಕಳ ಆರೋಗ್ಯವನ್ನೂ ಸುಧಾರಿಸುತ್ತದೆ. ಮೊಟ್ಟೆ ಒಂದು ಆರ್ಥಿಕ ಸ್ವಾವಲಂಬನೆಯ ಸೂಚಕವಾಗಿಯೂ ಮಾರ್ಪಡಬಹುದು ಎಂದರು.
ಬೀದರ್‌ನ ಪಶು ವೈದ್ಯಕೀಯ ಮಹಾವಿದ್ಯಾಲದ ಡೀನ್ ಡಾ.ಎಂ.ಕೆ.ತಾಂದಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಆತ್ಮ ನಿರ್ಭರ ಜೀವನ, ಪೌಷ್ಟಿಕ ಆಹಾರಕ್ಕೆ ಪ್ರವೇಶ ಹಾಗೂ ಆರೋಗ್ಯದ ಅಭಿವೃದ್ಧಿಗೆ ನಾಟಿ ಕೋಳಿ ಸಾಕಾಣಿಕೆ ಅತ್ಯಂತ ಸಮರ್ಥ ವಿಧಾನವಾಗಿದೆ. ಈ ತರಬೇತಿ ಶಿಬಿರಗಳಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಕಾರ್ಯನಿಷ್ಟಜ್ಞಾನವನ್ನು ಒದಗಿಸುವುದರ ಜೊತೆಗೆ ರೈತ ಸಮುದಾಯದಲ್ಲಿ ಬದಲಾವಣೆ ತರಲು ಸಹಕಾರಿಯಾಗಿವೆ ಎಂದರು.ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಬಸವರಾಜ ಭತಮೂರ್ಗೆ, ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಚ್.ಸಿ.ಇಂದ್ರೇಶ್, ಸಂಶೋಧನಾ ನಿರ್ದೇಶಕರಾದ ಡಾ.ಬಿ.ವಿ. ಶಿವಪ್ರಕಾಶ್, ಡಾ.ಬಿ.ಪ್ರಕಾಶ್, ಡಾ.ಶ್ರೀಕಾಂತ ಕುಲಕರ್ಣಿ, ಡಾ.ಕೋಟ್ರೇಶ್ ಪ್ರಸಾದ್, ಡಾ.ವಿದ್ಯಾಸಾಗರ ಮತ್ತು ಡಾ.ಬಸವರಾಜ ಇನಾಮದಾರ ಮಾತನಾಡಿದರು.