ಜನರ ಆರೋಗ್ಯಕ್ಕೆ ಮಾರಕವಾದ ಕೋಳಿ ಮಾಂಸದ ತ್ಯಾಜ್ಯ

KannadaprabhaNewsNetwork | Published : Feb 5, 2024 1:45 AM

ಸಾರಾಂಶ

ಗುಳೇದಗುಡ್ಡ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಎದುರಗಡೆ ಹಳ್ಳಕ್ಕೆ ಹೊಂದಿಕೊಂಡಿರುವ ಸುಮಾರು ನಾಲ್ಕು ಎಕರೆ ಖಾಸಗಿ ಬಯಲು ಜಾಗೆಯಲ್ಲಿ ಕೋಳಿ ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲಿ ಪರಿಸರ ಮಾಲಿನ್ಯ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್‌ ನಿಲ್ದಾಣದ ಅಕ್ಕಪಕ್ಕದ ಹತ್ತಾರು ಕೋಳಿಮಾಂಸ ಕಟ್ ಮಾಡಿಕೊಡುವ ಚಿಕನ್ ಸೆಂಟರ್ ಹಾಗೂ ಮಾಂಸಾಹಾರಿ ಹೋಟೆಲ್‌ ಗಳು ಕೋಳಿ ಮಾಂಸದ ತ್ಯಾಜ್ಯ ತಂದು ಹಾಕುವ ಸ್ಥಳವೇ ಈ ಬಯಲು ಜಾಗೆಯಲ್ಲಿ. ತ್ಯಾಜ್ಯ ಎಲ್ಲೆಂದರಲ್ಲಿ ಬೀಸಾಕಿದ್ದರಿಂದ ಅಕ್ಕಪಕ್ಕದ ಜನವಸತಿಗಳಿಗೆ ಜನರ ಆರೋಗ್ಯಕ್ಕೆ ಕಂಟಕ ಎದುರಾಗಿದೆ.

ಡಾ.ಸಿ.ಎಂ. ಜೋಶಿ

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಎದುರಗಡೆ ಹಳ್ಳಕ್ಕೆ ಹೊಂದಿಕೊಂಡಿರುವ ಸುಮಾರು ನಾಲ್ಕು ಎಕರೆ ಖಾಸಗಿ ಬಯಲು ಜಾಗೆಯಲ್ಲಿ ಕೋಳಿ ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲಿ ಪರಿಸರ ಮಾಲಿನ್ಯ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಸ್‌ ನಿಲ್ದಾಣದ ಅಕ್ಕಪಕ್ಕದ ಹತ್ತಾರು ಕೋಳಿಮಾಂಸ ಕಟ್ ಮಾಡಿಕೊಡುವ ಚಿಕನ್ ಸೆಂಟರ್ ಹಾಗೂ ಮಾಂಸಾಹಾರಿ ಹೋಟೆಲ್‌ ಗಳು ಕೋಳಿ ಮಾಂಸದ ತ್ಯಾಜ್ಯ ತಂದು ಹಾಕುವ ಸ್ಥಳವೇ ಈ ಬಯಲು ಜಾಗೆಯಲ್ಲಿ. ತ್ಯಾಜ್ಯ ಎಲ್ಲೆಂದರಲ್ಲಿ ಬೀಸಾಕಿದ್ದರಿಂದ ಅಕ್ಕಪಕ್ಕದ ಜನವಸತಿಗಳಿಗೆ ಜನರ ಆರೋಗ್ಯಕ್ಕೆ ಕಂಟಕ ಎದುರಾಗಿದೆ.

ಪಕ್ಕದಲ್ಲಿ ಶಾಲೆ: ಕೋಳಿ ಮಾಂಸದ ತ್ಯಾಜ್ಯ ಚೆಲ್ಲುವ ಈ ವಿಶಾಲವಾದ ಬಯಲು ಪ್ರದೇಶದ ಪಕ್ಕದಲ್ಲಿಯೇ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪಪೂ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಒಂದೇ ಕಡೆಗೆ ಸಮುಚ್ಛಯವಾಗಿವೆ. ಸಾವಿರಾರು ಮಕ್ಕಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಾರೆ. ಆದರೆ, ಈ ಬಯಲು ಪ್ರದೇಶದಲ್ಲಿ ಚೆಲ್ಲಿದ ಕೋಳಿ ಮಾಂಸದ ತ್ಯಾಜ್ಯದ ದುರ್ಗಂಧ ವಾಸನೆಯಿಂದ ಮಕ್ಕಳು ಮತ್ತು ಶಿಕ್ಷಕರು ಬೇಸತ್ತು ಹೋಗಿದ್ದಾರೆ. ವಿದ್ಯಾಭ್ಯಾಸಕ್ಕೆ ಕಂಠಕವಾಗಿಯೂ ಈ ವಾತಾವರಣ ಕಂಡು ಬರುತ್ತಿದೆ ಎನ್ನುತ್ತಾರೆ ಶಾಲಾ ವಿದ್ಯಾರ್ಥಿಗಳು.

ಪೆಟ್ರೋಲ್ ಬಂಕ್: ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಪೆಟ್ರೋಲ್ ಬಂಕ್ ಗೆ ಹೊಂದಿಕೊಂಡು ಇರುವ ಈ ಬಯಲು ಜಾಗೆಯ ತುಂಬ ಕೋಳಿ ಮಾಂಸದ ತ್ಯಾಜ್ಯ ಆವರಿಸಿದೆ. ನಿತ್ಯ ಕೋಳಿ ಮಾಂಸದ ತ್ಯಾಜ್ಯವನ್ನು ತಂದು ಬಿಸಾಕುವ ಈ ಸ್ಥಳ ರೋಗ ಹರಡುವ ಸ್ಥಳವಾಗಿ ಪರಿಣಮಿಸಿದೆ. ಪೆಟ್ರೋಲ್ ಬಂಕ್ ಗೆ ಬರುವ ವಾಹನ, ಬೈಕ್ ಚಾಲಕರಿಗೆ ಈ ಕೊಳೆತು ನಾರುವ ಕೋಳಿ ಮಾಂಸದ ತ್ಯಾಜ್ಯದಿಂದ ಉಸಿರುಗಟ್ಟುವಂತಾಗುತ್ತದೆ. ಪೆಟ್ರೋಲ್ ಬಂಕ್ ಮಾಲೀಕರು, ಕಾರ್ಮಿಕರು ನಿತ್ಯ ಈ ದುರ್ಗಂಧ ವಾಸನೆ ತೆಗೆದುಕೊಂಡು ಅನಾರೋಗ್ಯ ಅನುಭವಿಸುವಂತಾಗಿದೆ.

ಹೋಟೆಲ್, ಅಂಗಡಿಗಳು: ಬಸ್ ನಿಲ್ದಾಣದ ಹತ್ತಿರವಿರುವ ಅನೇಕ ಪ್ರಕಾರದ ಅಂಗಡಿಗಳಲ್ಲಿ ಕೋಲ್ಡ್ರಿಂಗ್‌ ಹೌಸ್‌, ಗ್ಯಾರೇಜ್, ಸ್ವೀಟ್ ಮಾರ್ಟ್, ಕಟಗಿ ಅಡ್ಡೆ, ಕಿರಾಣಿ, ಹಣ್ಣು ವ್ಯಾಪಾರಿಗಳು, ಲಿಂಗಾಯತ ಖಾನಾವಳಿ ಹೀಗೆ ಅನೇಕ ಪ್ರಕಾರದ ವ್ಯಾಪಾರ ಮತ್ತು ವಹಿವಾಟದ ಮಳಿಗೆಗಳು ಹಾಗೂ ಶಾಲೆಗಳಿವೆ. ಈ ಕೋಳಿ ಮಾಂಸದ ತ್ಯಾಜ್‌ ನಿಂದ ನಿತ್ಯ ಈ ವ್ಯಾಪಾರಕ್ಕೆ ಅನಾನುಕೂಲ ಹಾಗೂ ತೊಂದರೆಯೂ ಆಗುತ್ತಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ತ್ಯಾಜ್ಯದ ನಡುವೆ ಕುಟುಂಬಗಳ ವಾಸ:

ಕೋಳಿ ಮಾಂಸದ ತ್ಯಾಜ್ಯ ಬಿಸಾಕುವ ಈ ಬಯಲು ಪ್ರದೇಶದ ಸುತ್ತಲೂ ಕೆಲ ಕುಟುಂಬಗಳೂ ವಾಸವಾಗಿವೆ. ನಿತ್ಯ ರಾತ್ರಿ ತಂದು ಚೆಲ್ಲುವ ಮಾಂಸದ ತ್ಯಾಜ್ಯ ಹಂದಿ, ನಾಯಿಗಳು ತಿಂದು ಮನೆ ಮುಂದೆ ಬಿಸಾಕುವ, ದುರ್ಗಂಧ ವಾಸನೆ ಹರಡುವ ಮಾಲಿನ್ಯಯುಕ್ತ ಈ ಚಟುವಟಿಕೆಯಿಂದ ಜನ ಬೇಸತ್ತಿದ್ದಾರೆ. ಮನೆಮುಂದೆ ನಿತ್ಯ ಕೋಳಿ ಮಾಂಸದ ತ್ಯಾಜ್ಯ ಚೆಲ್ಲಾಪಿಲ್ಲೆ ಆಗಿರುತ್ತದೆ. ರಾತ್ರಿಹೊತ್ತು ಕುಟುಂಬದ ಮಕ್ಕಳು, ಮಹಿಳೆಯರು ಮನೆ ಮುಂದೆ ವಿರಮಿಸುವಂತಿಲ್ಲ, ತಿರುಗಾಡುವಂತಿಲ್ಲ. ಇಂತಹ ನರಕಸದೃಶ ಬದುಕು ಇಲ್ಲಿಯದಾಗಿದೆ.

ಹಳ್ಳದಲ್ಲಿ ಕೋಳಿ ಮಾಂಸದ ತ್ಯಾಜ್ಯ: ಪಕ್ಕದ ಹಳ್ಳದಲ್ಲಿಯೂ ಕೋಳಿ ಮಾಂಸದ ತ್ಯಾಜ್ಯವನ್ನು ಚಿಕನ್ ಸೆಂಟರ್ ಮತ್ತು ಮಾಂಸದ ಹೋಟೆಲ್‌ ದವರು ತಂದು ಬಿಸಾಕಿ ಹೋಗುತ್ತಿರುವುದರಿಂದ ಹಳ್ಳವೂ ದುರ್ಗಂಧ ವಾಸನೆಯಿಂದ ತುಂಬಿದೆ. ಹಂದಿ, ನಾಯಿಗಳ ಕಚ್ಚಾಟ, ಚೀರಾಟ ಹಾಗೂ ವಾಸದ ಸ್ಥಳವೂ ಆಗಿ ಪರಿಣಮಿಸಿದೆ.

ಗಮನಹರಿಸದ ಅಧಿಕಾರಿಗಳು: ಈ ಕುರಿತು ಬಸ್ ನಿಲ್ದಾಣದ ಅಕ್ಕಪಕ್ಕದ ಅಂಗಡಿ ಮಾಲೀಕರು, ಮನೆಗಳ ಕುಟುಂಬಸ್ಥರು ಸಾಕಷ್ಟು ಬಾರಿ ಪುರಸಭೆಗೆ ಹಾಗೂ ಪೊಲೀಸ್ ಠಾಣೆಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲವೆಂದು ಅಲ್ಲಿನ ನಿವಾಸಿ ಶ್ರೀಶೈಲ ನರಗುಂದ ನೋಂದು ಹೇಳುತ್ತಾರೆ. ಅಲ್ಲದೆ, ಈ ಬಯಲು ಪ್ರದೇಶ, ಹಳ್ಳದ ಸ್ಥಳ, ಪ್ರಮುಖ ರಸ್ತೆ ಪಕ್ಕದ ಸ್ಥಳಗಳಲ್ಲಿ ಕೋಳಿ ಮಾಂಸದ ತ್ಯಾಜ್ಯ ಚೆಲ್ಲದಂತೆ ಪುರಸಭೆ ನಿರ್ಬಂಧಿಸಬೇಕು. ಹಾಳಾಗುತ್ತಿರುವ ಪರಿಸರ ಮತ್ತು ಜನರ ಆರೋಗ್ಯ ಸಂರಕ್ಷಿಸಬೇಕೆಂದು ನಿವಾಸಿಗಳಾದ ಶ್ರೀಶೈಲ ನರಗುಂದ, ಅರವಿಂದ ಮಂಜೋಜಿರಾವ್, ಮಲ್ಲು ಹುನಗುಂದ, ತಟ್ಟಿಮಠ, ಸವರಾಜ್ ಸೇರಿದಂತೆ ಇನ್ನೂ ಅನೇಕರು ಆಗ್ರಹಿಸಿದ್ದಾರೆ.

Share this article