ಕನ್ನಡಪ್ರಭ ವಾರ್ತೆ ಮೈಸೂರು
ಬಡತನ, ಆರ್ಥಿಕ ಅವಶ್ಯಕತೆ, ಸಾಮಾಜಿಕ ಮತ್ತು ಸಾಂಸ್ಕ್ರತಿಕ ರೂಢಿಗಳು ಬಾಲಕಾರ್ಮಿಕ ಪದ್ಧತಿಯ ಪ್ರಮುಖ ಕಾರಣ ಎಂದು ವಕೀಲ ಲೋಕೇಶ್ ತಿಳಿಸಿದರು.ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಬಾಲ ಕಾರ್ಮಿಕ ಪದ್ಧತಿ ವಿರೋಧ ದಿನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿಯು ಎಲ್ಲೆಡೆಯೂ ಇರುವ ಸಮಸ್ಯೆ. 18ನೇ ಶತಮಾನದ ಕೈಗಾರಿಕಾ ಕ್ರಾಂತಿಯಿಂದ ಈ ಸಮಸ್ಯೆ ಆರಂಭವಾಯಿತು. ಜರ್ಮನಿ, ಬಾಲ ಕಾರ್ಮಿಕಾ ಪದ್ಧತಿ ತಡೆಯಲು 1839ರಲ್ಲಿ ಕಾನೂನು ಮಂಡಿಸಿತು. ಭಾರತದಲ್ಲಿ ಸುಮಾರು 3ನೇ ಶತಮಾನದಲ್ಲಿ ಗೃಹೋಪಯೋಗಿ ಕೆಲಸಕ್ಕೆ ಮಕ್ಕಳನ್ನು ಖರೀದಿಸಲಾಗುತ್ತಿತ್ತು ಎಂದು ಅರ್ಥಶಾಸ್ತ್ರದಲ್ಲಿ ಉಲ್ಲೇಖವಾಗಿದೆ ಎಂದರು.ಇದರಿಂದ ಮಾನಸಿಕ ಹಾಗೂ ದೈಹಿಕ ಶೊಷಣೆಗೆ ಮಕ್ಕಳು ಒಳಗಾಗುತ್ತಾರೆ. ಅವರ ಶೈಕ್ಷಣಿಕ ಅಭ್ಯಾಸಕ್ಕೆ ಅಡ್ಡಿಯಾಗುತ್ತದೆ. ಭಾರತದಲ್ಲಿ ಕೈಗಾರಿಕಾ ಕ್ರಾಂತಿಯು ಪ್ರಾರಂಭವಾದಾಗ ಬಾಲಕಾರ್ಮಿಕ ಪದ್ಧತಿ ತಡೆಯಲು ಯಾವುದೇ ರೀತಿಯ ಕಾನೂನು ಇರಲಿಲ್ಲ. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಕ್ಕಳಿಗೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲು, ಕಾರ್ಖಾನೆ ಕಾಯ್ದೆಯನ್ನು 1948ರಲ್ಲಿ ಜಾರಿಗೊಳಿಸಲಾಯಿತು. ಕಾರ್ಖಾನೆ ಕಾಯ್ದೆಯು, 1948, ಬಾಲಕಾರ್ಮಿಕತೆಯನ್ನು 18 ಉದ್ಯೊಗಗಳಲ್ಲಿ ಮತ್ತು 16 ಅಪಾಯಕಾರಿ ಪ್ರಕ್ರಿಯೆಗಳಿಂದ ತಡೆಯಿತು. ಹತ್ತಿ ಗಿರಣಿಗಳ ಸಣ್ಣಪುಟ್ಟ ಕೆಲಸಗಳಿಗೆ ಮಕ್ಕಳನ್ನು ಉದ್ಯೋಗಿಸಲಾಗುತ್ತಿತ್ತು. ವಯಸ್ಸಿನ ಪ್ರಮಾಣ ಪತ್ರವು ವೈದ್ಯಕೀಯ ಅಧಿಕಾರಿಗಳಿಂದ ದೃಢೀಕರಿಸಿ ನೊಂದಣಿಯಾಗುತ್ತಿತ್ತು.
1922ರಲ್ಲಿ ಭಾರತವು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಶಾಶ್ವತ ಸದಸ್ಯವಾಯಿತು. ಭಾರತದ 271 ಜಿಲ್ಲೆಗಳಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯನ್ನು 1988ರಲ್ಲಿ ಪ್ರಸ್ತಾಪನೆಗೊಂಡಿತು. ಸಮಗ್ರ ಶಿಕ್ಷಣ ಅಭಿಯಾನವು, ಭಾರತದ ಸಂವಿಧಾನದಲ್ಲಿ ಆರ್ಟಿಕಲ್21ಎ ಪ್ರಸ್ತಾವನೆಗೆ ದಾರಿ ಮಾಡಿತು. ಈ ಆರ್ಟಿಕಲ್ ನಲ್ಲಿ6- 12 ವಯಸ್ಕ ಮಕ್ಕಳಿಗೆ ಕಡ್ಡಾಯವಾದ ಮತ್ತು ಉಚಿತ ಶಿಕ್ಷಣ ದೊರಕಿಸುವುದೆಂದು ಹಾಗೂ ಬಾಲಾಕಾರ್ಮಿಕ ಪದ್ಧತಿ ನಿಷೇಧಿಸಬೇಕು ಎಂದು ಸಂವಿಧಾನವು ಒತ್ತು ನೀಡಿದೆ.1998ರಲ್ಲಿ ಸತ್ಯಾರ್ತಿಯವರು ಬಾಲ ಕಾರ್ಮಿಕ ಪದ್ಧತಿ ವಿರುದ್ಧ 80 ಸಾವಿರ ಕಿ.ಮೀ. ಜಾಗತಿಕ ನಡಿಗೆಯನ್ನು 103 ದೇಶಗಳಾದ್ಯಂತ ಹಮ್ಮಿಕೊಂಡಿದ್ದರು. 2016ರಲ್ಲಿ ಕಿಶೋರ್ ಅವಸ್ತೆ ಯೋಜನೆಯನ್ನು ಕರ್ನಾಟಕ ಸರ್ಕಾರವು ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಜಾರಿಗೊಳಿಸಿತು. 218 ದಶಲಕ್ಷ ಮಕ್ಕಳು ಇಂದೂ ಬಾಲಕಾರ್ಮಿಕರಾಗಿದ್ದಾರೆ, ಅದರಲ್ಲಿ 152 ದಶಲಕ್ಷ ಮಕ್ಕಳು ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಫ್ರಿಕನ್ ದೇಶಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಕ್ಕಳು ಕೆಲಸಮಾಡುತ್ತಿದ್ದಾರೆ ಎಂದರು.
ಇಂದಿನ ಮಕ್ಕಳು ನಾಳೆಯ ನಾಗರೀಕರು, ಅವರ ಬಾಲ್ಯತನವನ್ನು ವಿದ್ಯಾಭ್ಯಾಸ ಮತ್ತು ಅವಕಾಶವನ್ನು ಕಲ್ಪಿಸುವ ಮೂಲಕ ರಕ್ಷಿಸಬೇಕು ಹಾಗು ಈ ಸಮಸ್ಯೆ ಪರಿಹರಿಸಿದರೆ ಮಾತ್ರ ದೇಶದ ಪ್ರಗತಿ ಕಾಣಬಹುದು ಎಂದು ಅವರು ಹೇಳಿದರು.ಪ್ರಾಂಶುಪಾಲೆ ಡಾ. ದೀಪು ಇದ್ದರು.
ಅನಂತಗೀತ ವಿದ್ಯಾಲಯದಲ್ಲಿ ವಿಶ್ವ ಬಾಲ ಕಾಮಿ೯ಕ ವಿರೋಧಿ ದಿನಾಚರಣೆಕನ್ನಡಪ್ರಭ ವಾರ್ತೆ ಮೈಸೂರುನಗರದ ಅನಂತಗೀತ ವಿದ್ಯಾಲಯದಲ್ಲಿ ವಿಶ್ವ ಬಾಲ ಕಾಮಿ೯ಕರ ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರಮಾಣದ ವಚನ ಸ್ವೀಕರಿಸಿದರು. ಮುಖ್ಯ ಶಿಕ್ಷಕ ಎಚ್.ಪಿ. ಲೋಕೇಶ್ ಮಾತನಾಡಿ, 14 ವಷ೯ದೊಳಗಿನ ಮಕ್ಕಳು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು, ಒಂದು ವೇಳೆ ಬಾಲ್ಯ ವಯಸ್ಸಿನ ಮಕ್ಕಳು ಯಾವುದಾದರೂ ಹೋಟೆಲ್, ಇಂಡಸ್ಟ್ರೀಸ್ ಗಳಲ್ಲಿ ಕೆಲಸ ಮಾಡುತಿದ್ದರೆ, ನಾವು ತಕ್ಷಣವೇ ಚೈಲ್ಡ್ ಹೆಲ್ಪ್ ಲೈನ್ ನಂಬರ್ 1098ಗೆ ಕರೆ ಮಾಡಿ, ಅಂತಹ ಮಕ್ಕಳನ್ನು ಕಾನೂನು ಪ್ರಕಾರವಾಗಿ ಸಂರಕ್ಷಣೆ ಮಾಡಬೇಕು ಎಂದರು.ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.