ಕನ್ನಡಪ್ರಭ ವಾರ್ತೆ ಪಾವಗಡ
ಸಿಂಗಲ್ ಫೇಸ್ ವಿದ್ಯುತ್ ಸರಬರಾಜಿನಿಂದ ಕೊಳವೆಬಾವಿಗಳಿಂದ ನೀರೆತ್ತಲು ಸಾಧ್ಯವಾಗುತ್ತಿಲ್ಲ, ಪರಿಣಾಮ ನೀರಾವರಿ ಬೆಳೆಗಳು ಸಂಪೂರ್ಣ ನಷ್ಟಕ್ಕೀಡಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಶೈಲಾಪುರ ಬೆಸ್ಕಾಂ ವಿಭಾಗದ ಎಂಜಿನಿಯರ್ ಹಾಗೂ ಕೆಪಿಟಿಸಿಎಲ್ ಎಇಇ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿ ಸೋಮವಾರ ತಾಲೂಕಿನ ಶೈಲಾಪುರ ಬೆಸ್ಕಾಂ ಸಬ್‌ಸ್ಟೇಷನ್ ವ್ಯಾಪ್ತಿಯ ರೈತರು ಹಾಗೂ ತಾಲೂಕು ರೈತ ಸಂಘದ ಆನೇಕ ಮುಖಂಡರು ಸೋಮವಾರ ಪಟ್ಟಣದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ದೊಡ್ಡಹಟ್ಟಿಯ ಪೂಜಾರಪ್ಪ ಮಾತನಾಡಿ, ಸರ್ಮಪಕ ವಿದ್ಯುತ್ ಸರಬರಾಜು ನೀಡುವಲ್ಲಿ ಬೆಸ್ಕಾಂ ನಿರ್ಲಕ್ಷ್ಯವಹಿಸಿದ ಪರಿಣಾಮ ರೈತಾಪಿಗಳ ನೀರಾವರಿ ಬೆಳೆಗಳು ಒಣಗಿ ಹೋಗುತ್ತಿವೆ. ಬೆಸ್ಕಾಂ ಅಧಿಕಾರಿಗಳು ಸರಿಯಾಗಿ ವಿದ್ಯುತ್ ಪೂರೈಸುವ ಮೂಲಕ ರೈತರ ಹಿತ ಕಾಯಬೇಕೆಂದು ಆಗ್ರಹಿಸಿದರು.
ತಾಲೂಕಿನ ಶೈಲಾಪುರ ಗ್ರಾಮದ ಸಬ್‌ಸ್ಟೇಷನ್‌ನಿಂದ ವಿದ್ಯುತ್ ಪೂರೈಕೆಯಲ್ಲಿ ಅನ್ಯಾಯವೆಸಗಲಾಗುತ್ತಿದ್ದು, ಕೊಳವೆಬಾವಿಗಳಲ್ಲಿ ಸರ್ಮಪಕ ನೀರು ಪೂರೈಕೆಯಾಗದೇ ನೀರಾವರಿ ಬೆಳೆಗಳು ಸಂಪೂರ್ಣ ಒಣಗುವ ಹಂತಕ್ಕೆ ತಲುಪಿವೆ. ಕಳೆದ 20 ದಿನಗಳಿಂದ ಈ ಸಮಸ್ಯೆ ರೈತರನ್ನು ಕಾಡುತ್ತಿರುವುದಾಗಿ ದೂರಿದರು.ರೈತ ಮುಖಂಡ ಬ್ಯಾಡನೂರು ಶಿವು ಮಾತನಾಡಿ, ಬೆಳೆ ಸಲುವಾಗಿ ಮನೆಯಲ್ಲಿನ ಮಹಿಳೆಯರ ಚಿನ್ನ ಅಡವಿಟ್ಟಿದ್ದೇವೆ, ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದೇವೆ. 300ರಿಂದ 400ರು. ಗಳ ಕೂಲಿ ನೀಡಿ, ಕೂಲಿಕಾರರ ಜತೆ ನಾವೂ ಕೆಲಸ ಮಾಡಿ ತೋಟಗಾರಿಕೆ ಬೆಳೆಗಳನ್ನು ಸಂರಕ್ಷಿಸಿದ್ದೇವೆ. ಇನ್ನೇನು ಫಸಲಿಗೆ ಬರುವ ಹಂತದಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡುವ ಕಾರಣ ಅಲ್ಪ ಸಲ್ಪ ನೀರಿನಲ್ಲಿ ಬೆಳೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದರಿಂದ ಕಂಗಲಾಗಿದ್ದೇವೆ. ಈ ಸಂಬಂಧ ಶೀಘ್ರ ಪರಿಶೀಲನೆ ನಡೆಸಿ ರೈತರ ಕೊಳವೆಬಾವಿಗಳಿಗೆ ಸರ್ಮಪಕವಾದ ವಿದ್ಯುತ್ ಪೂರೈಕೆ ಒದಗಿಸಬೇಕು ಎಂದು ಆಗ್ರಹಿಸಿದರು.
ಇದೇ ರೀತಿ ಮುಂದುವರಿದರೆ ಶೀಘ್ರ ನಮ್ಮ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ತಾ.ಕಚೇರಿಯ ಬಳಿ ಅನಿರ್ಧಿಷ್ಟಾವಾಧಿ ಮುಷ್ಕರಕ್ಕೆ ಸಜ್ಜಾಗುವುದಾಗಿ ಎಚ್ಚರಿಸಿದರು.ರೈತ ಸಂಘದ ಕೃಷ್ಣಗಿರಿ ಚಿತ್ತಯ್ಯ,ಗುಂಡ್ಲಹಳ್ಳಿ ರಮೇಶ್,ರಾಮಾಂಜಿನಪ್ಪ,ಈರಣ್ಣ, ಕಿರಣ್ ಕುಮಾರ್, ಪ್ರಕಾಶ್, ಶಶಿ, ಎನ್.ರಮೇಶ್, ಎಚ್.ಲೋಕೇಶ್, ಪ್ರಕಾಶ್ ರೆಡ್ಡಿ, ಗಿರೀಶ್ ರವಿ, ರಾಜು ಎನ್. , ನಾಗರಾಜ್ ಹಾಗೂ ಅನೇಕ ರೈತ ಮುಖಂಡರಿದ್ದರು.