ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪ್ರಭಾತಯಾತ್ರೆ ಅದೊಂದು ಸಕಲ ಧರ್ಮದ ಯಾತ್ರೆಯಾಗಿದೆ. ಎಲ್ಲ ಧರ್ಮ ಒಂದು ಎನ್ನುವ ಸಂದೇಶ ಸಾರುವುದು ಈ ಪ್ರಭಾತ ಯಾತ್ರೆಯ ಮೂಲ ಉದ್ದೇಶವಾಗಿದೆ ಎಂದು ಜೆಡಿಎಸ್ ಮುಖಂಡ ಮಹೇಶ ಬಿಜಾಪುರ ಹೇಳಿದರು.ಅವರು ಪಟ್ಟಣದ ಶ್ರೀಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠದಲ್ಲಿ ಶ್ರೀಜಗದ್ಗುರು ಗುರುಸಿದ್ಧ ಪಟ್ಟಧಾರ್ಯ ಮಹಾಸ್ವಾಮಿಗಳ 38ನೇ ವಾರ್ಷಿಕ ಪುಣ್ಯರಾಧನೆಯ ಶರಣ ಸಂಗಮ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡ ಪ್ರಭಾತ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಯಾವುದೇ ಜಾತಿ ಮೇಲು, ಕೀಳು ಅಲ್ಲ, ಎಲ್ಲರೂ ಒಂದೇ. ಎಲ್ಲರೂ ಸಮಾನರು. ಸರ್ವರಿಗೂ ಸಮಬಾಳು ಎನ್ನುವ ಭಾವೈಕ್ಯತೆಯ ಸಂದೇಶ ಸಾರುವ ಗುರುಸಿದ್ದೇಶ್ವರ ಬ್ರಹನ್ಮಠದ ಈ ಪ್ರಭಾತ ಯಾತ್ರೆ ಬಹಳಷ್ಟು ಪ್ರಶಂಸನೀಯ ಕಾರ್ಯವಾಗಿದೆ ಎಂದರು.
ಜಾತಿಗೊಂದು ಮಠಗಳು ಆಗುತ್ತಿವೆ. ಪ್ರತಿಯೊಂದು ಮಠಗಳು ತಮ್ಮದೇ ತತ್ವ ಸಿದ್ಧಾಂತಗಳನ್ನು ಸಾರುತ್ತಿದ್ದರೆ ಗುರುಸಿದ್ದೇಶ್ವರ ಬ್ರಹನ್ಮಠ ಸರ್ವ ಜನಾಂಗದವರ ಮಠವಾಗಿ ಸರ್ವಜಾತಿ ಜನಾಂಗದವರನ್ನು ಕೂಡಿಸಿಕೊಂಡು ಭಾವೈಕ್ಯತೆ ಸಾರುತ್ತಿದ್ದಾರೆ. ಧರ್ಮ ಧರ್ಮಗಳ ಮಧ್ಯೆ ಕಂದಕ ಉಂಟಾಗುತ್ತಿರುವ ಇಂತಹ ಸಂದರ್ಭದಲ್ಲಿ ಭಾವೈಕ್ಯತೆ ಶರಣರ, ಸಾಧುಸಂತರ ಸನ್ಮಾರ್ಗಗಳನ್ನು ಸಕಲರಿಗೂ ಗುಣ ಪಡಿಸುತ್ತಿರುವ ಗುರುಸಿದ್ದೇಶ್ವರ ಬ್ರಹನ್ಮಠದ ಈ ಸಮಾಜಮುಖಿ ಕಾರ್ಯ ಬಹಳಷ್ಟು ಪ್ರಶಂಶನೀಯವಾಗಿದೆ ಎಂದರು.ನಿವೃತ್ತ ಪ್ರಾಚಾರ್ಯ ಡಾ.ಕೆ.ಆರ್.ಚೌಕಿಮಠ ಧ್ವಜಾರೋಹಣ ನೆರವೇರಿಸಿ, ಈ ಜಗತ್ತಿನಲ್ಲಿ ಯಾರು ಶ್ರೇಷ್ಠ ಕನಿಷ್ಠ ಅಲ್ಲ. ಜಗತ್ತಿನಲ್ಲಿ ಇರುವುದು ಎರಡು ಜಾತಿ. ಒಂದು ಹೆಣ್ಣು, ಇನ್ನೊಂದು ಗಂಡು ಎನ್ನುವುದಾಗಿದೆ. ನಾವು ನಾವುಗಳೇ ಜಾತಿಗಳನ್ನ ಸೃಷ್ಟಿಸಿಕೊಂಡು ಸಮಾಜದಲ್ಲಿ ಸಮಸ್ಯೆಗಳನ್ನು ಉಂಟು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಶ್ರೀ ಗುರುಬಸವ ದೇವರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಶಪ್ಪ ತಿಪ್ಪಾ, ಸೂರ್ಯಕಾಂತಿ ಪರಗಿ, ಗುರು ಕಾಳಿ ಮತ್ತಿತರರು ಇದ್ದರು.