ಪ್ರಜ್ವಲ್‌ ರೇವಣ್ಣ ಪ್ರಕರಣ: ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ: ಜೋಶಿ

KannadaprabhaNewsNetwork |  
Published : May 03, 2024, 01:13 AM ISTUpdated : May 03, 2024, 12:20 PM IST
Prahlada Joshi

ಸಾರಾಂಶ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರದಿಂದ ರಾಜಕಾರಣ ಮಾಡುತ್ತಿದೆ. ಯಾವುದೇ ರೀತಿಯ ಎಫ್ಐಆರ್ ಮಾಡದೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಬೇರೆಯವರ ಮೇಲೆ ತಪ್ಪು ಹೊರಿಸುವ ಕೆಲಸವನ್ನು ಸಿಎಂ ಮಾಡಿದ್ದಾರೆ.

ಹುಬ್ಬಳ್ಳಿ:  ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪಹ್ಲಾದ ಜೋಶಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ‌ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಪಿಎಂಗೆ ಸಿದ್ದರಾಮಯ್ಯ ಪತ್ರ ಬರೆದಿರುವುದಕ್ಕೆ ಕಿಡಿಕಾರಿದರು.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರದಿಂದ ರಾಜಕಾರಣ ಮಾಡುತ್ತಿದೆ. ಯಾವುದೇ ರೀತಿಯ ಎಫ್ಐಆರ್ ಮಾಡದೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಬೇರೆಯವರ ಮೇಲೆ ತಪ್ಪು ಹೊರಿಸುವ ಕೆಲಸವನ್ನು ಸಿಎಂ ಮಾಡಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಕಾಂಗ್ರೆಸ್ ಪಕ್ಷದವರು ಒಂದೇ ಒಂದು ಉತ್ತರ ಕೊಟ್ಟಿಲ್ಲ. ಏಪ್ರಿಲ್ 21ಕ್ಕೆ ಕ್ಲಿಪಿಂಗ್ ಹೊರಬಿದ್ದಿದೆ. ಆದರೆ ಏ. 28ರ ವರೆಗೂ ಎಫ್ಐಆರ್ ಯಾಕೆ ಮಾಡಿಕೊಳ್ಳಲಿಲ್ಲ. ಈ ವಿಡಿಯೋಗಳು ಒಂದು ವರ್ಷ ಅಥವಾ ಆರು ತಿಂಗಳದ್ದಲ್ಲ ಎಂದರು.

2018ರಿಂದಲೂ ವಿಡಿಯೋಗಳಿವೆ. ಆ ಸಂದರ್ಭದಲ್ಲಿ ಇದೇ ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಎಫ್‌ಐಆರ್ ವಿಳಂಬ ಮಾಡಿದ್ದರು ಎನ್ನುವುದನ್ನು ಹೇಳಲಿ. ಎಫ್ಐಆರ್ ಮಾಡದೇ ಇರುವಾಗ ಕೇಂದ್ರ ಸರ್ಕಾರ ಏನಂತ ಕ್ರಮಕೈಗೊಳ್ಳಬೇಕಿತ್ತು. ಇದರಲ್ಲಿಯೂ ಮತ ಬ್ಯಾಂಕ್ ಪಾಲಿಟಿಕ್ಸ್ ನಡೆದಿದೆ. ದೇವೇಗೌಡರ ಮೊಮ್ಮಗನನ್ನು ಮುಟ್ಟಿದರೆ ಗೌಡರ ಮತ ಎಲ್ಲಿ ಹೋಗುತ್ತದೆ ಎನ್ನುವ ಭಯವಿದೆ. ಹೀಗಾಗಿ ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ದೇಶಾದ್ಯಂತ ಮೋದಿ ಪರವಾದ ಪ್ರಚಂಡ ಅಲೆ ಸೃಷ್ಟಿಯಾಗಿದೆ. ಕರ್ನಾಟಕದ ಈ ಭಾಗದಲ್ಲಿಯೂ ಒಳ್ಳೆಯ ವಾತಾವರಣವಿದೆ. ಅಮಿತ್ ಶಾ ಭೇಟಿ ನೀಡಿದ ಕಡೆ ಅದ್ಭುತವಾದ ಪ್ರತಿಕ್ರಿಯ ವ್ಯಕ್ತವಾಗಿದೆ. ಕರ್ನಾಟಕದ ಉತ್ತರ ಭಾಗದಲ್ಲಿ ಎಲ್ಲ 14 ಸ್ಥಾನಗಳಲ್ಲಿಯೂ ಗೆಲ್ಲುತ್ತೇವೆ ಎಂದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ