ಕನ್ನಡಪ್ರಭ ವಾರ್ತೆ ಮೈಸೂರು
ದಿವಂಗತ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ವಿಚಾರ ಸ್ಪಷ್ಟತೆ, ವೈಚಾರಿಕ ನಿಲುವು ಅನುಕರಣೀಯ ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ. ಆನಂದ್ ಹೇಳಿದರು.ಮಾನಸ ಗಂಗೋತ್ರಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ವಿ. ಶ್ರೀನಿವಾಸಪ್ರಸಾದ್ ಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸಾದ್ ಅವರು ಸಮಾಜಶಾಸ್ತ್ರಜ್ಞ, ರಾಜಕೀಯ ಪ್ರಾಧ್ಯಾಪಕರಂತಿದ್ದರು. ಸಾಂಸ್ಕೃತಿಕವಾಗಿ ಸಮಾಜಮುಖಿಯಾಗಿ ಅನುಕರಣೆ ಮಾಡಬೇಕಾದರೆ ಪ್ರಸಾದ್ ಹೆಸರುಹೊ ತಟ್ಟನೆ ಳೆಯುತ್ತದೆ. ಅವರು ನೊಂದ ಜನಗಳಿಗೆ ದಾರಿದೀಪವಾಗಿದ್ದರು. ಸಂವಿಧಾನ ಪರಾಮರ್ಶೆ ಹೇಳಿಕೆಗೆ ವಿರೋಧ ಬಂದಾಗ ಯಾಕೇ ಸಂವಿಧಾನ ಪರಾಮರ್ಶೆ ಮಾಡಬೇಕೆಂಬುದನ್ನು ವಿವರಿಸುತ್ತಿದ್ದರು. ಪರಾಮರ್ಶೆಯಿಂದ ಒಳಿತಾಗುವುದಾದರೆ ಬೇಡವೇ? ಎಂದು ಅವರು ಮರುಪ್ರಶ್ನಿಸಿದ್ದಾಗಿ ಹೇಳಿದರು.ಪಿ.ವಿ. ನರಸಿಂಹರಾವ್ ಅವರಿಗೆ ಆಫ್ರಿಕಾದ ಜನಾಂಗೀಯ ನಿಂದನೆ ಅಮಾನವೀಯ, ಕಳಂಕ ಎನ್ನುವುದಾದರೆ ಭಾರತದಲ್ಲಿನ ಅಸ್ಪಶ್ಯತೆ ಯಾಕೇ ಕಾಣುವುದಿಲ್ಲ ಎಂದು ದಿಟ್ಟವಾಗಿ ಹೇಳುವ ಎದೆಗಾರಿಕೆ ಪ್ರಸಾದ್ ಅವರಿಗಿತ್ತು ಎಂದರು.
2000 ರಲ್ಲಿ ಬಹುಜನ ಸಮಾಜ ಪಕ್ಷದಿಂದ ವಿದ್ಯಾರ್ಥಿಗಳಲ್ಲಿ ರಾಜಕೀಯ ಸಂಚಲನವುಂಟಾಯಿತು. ಆಗ ಪ್ರಸಾದ್ ಅವರು, ಮದ್ದು ಗುಂಡು ಇಲ್ಲದೇ ಯುದ್ಧಕ್ಕೆ ಹೋದರೆ ಸೋಲುತ್ತೇವೆ. ನಮಗೆ ಆಸ್ತಿ ಇಲ್ಲ. ನಮ್ಮ ಜನ ಜಮೀನ್ದಾರರಲ್ಲ. ರಾಜಕೀಯ ಅಷ್ಟು ಸರಾಗ ಅಲ್ಲ. ಗಟ್ಟಿಯಾಗಿ ತಳವೂರದೇ ರಾಜಕೀಯ ಅಧಿಕಾರ ಪಡೆಯಲಾಗದೆಂದು ತಿಳವಳಿಕೆ ಕೊಡುತ್ತಿದ್ದರು. ಆಗ ಅವರ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಅನೇಕರಿಗೆ ಇರಲಿಲ್ಲ ಎಂದು ಅವರು ಸ್ಮರಿಸಿದರು.ಮಹಾರಾಣಿ ಕಾಲೇಜು ಹಾಸ್ಟೆಲ್ ನಲ್ಲಿ ದಲಿತ ಮತ್ತು ಇತರೆ ಜಾತಿಯ ಹೆಣ್ಣು ಮಕ್ಕಳ ನಡುವೆ ಗಲಾಟೆ ನಡೆದಾಗ ಅಹಂ ತೋರದೆ ನಿರ್ವಹಿಸಿದ ಪಾತ್ರ, ಶ್ರಿರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ಅಂಬೇಡ್ಕರ್ ಜಯಂತಿ ವೇಳೆ ನಾಯಕತ್ವ ವಿಚಾರವಾಗಿ ಉಂಟಾದ ವೈಮನಸ್ಸನ್ನು ಪ್ರಸಾದ್ ಅವರು ನಿಭಾಯಿಸಿದ್ದನ್ನು ಮರೆಯಲಾಗದು ಎಂದರು.
ಬದನವಾಳು ಗಲಭೆ ನಂತರ ಪ್ರಸಾದ್ ಅವರು ನೊಂದುಕೊಂಡರು. ಚುನಾವಣೆಯಲ್ಲಿ ಸೋತರು. ಆಗ ನಾನೊಂದು ಮಾತು ಹೇಳಿದೆ- ಶ್ರೀನಿವಾಸಪ್ರಸಾದ್ ಸೋತದ್ದು ಒಳ್ಳೆಯದಾಯಿತು. ಸೋಲಿನಿಂದ ನಮಗೊಬ್ಬ ದಿಟ್ಟ ನಾಯಕ ಸಿಕ್ಕನೆಂದು ನುಡಿದದ್ದನ್ನು ಸರಿಸಿದರು.ಕ್ರಿಕೆಟ್ ಗೆ ಸಚಿನ್ ತೆಂಡೂಲ್ಕರ್, ಕರ್ನಾಟಕದ ಘನತೆಗೆ ರಾಜಕುಮಾರ್ ಎಂಬಂತೆ ರಾಜಕಾರಣಿಯಾಗಿ ಅಂಬೇಡ್ಕರ್ ಅವರನ್ನು ಕುರಿತು ಮಾತಾಡುವುದನ್ನು ಪ್ರಸಾದ್ ಮಾದರಿ. ಯಾರಿಗೂ ನೋವಾಗದೇ ಯಾರನ್ನೂ ನೋಯಿಸದೇ ಸ್ಪಷ್ಟವಾಗಿ ಮಾತಾಡುವುದಕ್ಕೂ ಅವರು ಉದಾಹರಣೆಯಾಗಿಸಬಹುದು ಎಂದು ಅವರು ತಿಳಿಸಿದರು.
ವಿಶ್ವಮೈತ್ರಿ ಬುದ್ಧ ವಿಹಾರದ ಭಂತೆ ಡಾ. ಕಲ್ಯಾಣಸಿರಿ, ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಡಾ.ಎಸ್. ನರೇಂದ್ರಕುಮಾರ್, ಎಂ.ಬಿ. ಜಯಶೆಂಕರ್ ಮೊದಲಾದವರು ಇದ್ದರು.