ಶಿವಾನಂದ ಗೊಂಬಿ
ಹುಬ್ಬಳ್ಳಿ:ಉತ್ತರ ಕರ್ನಾಟಕ ಭಾಗದ ಸಂಜೀವಿನಿಯಾಗಿರುವ ಇಲ್ಲಿನ ಕೆಎಂಸಿಆರ್‌ಐಗೆ ಮಕ್ಕಳ ಆರೋಗ್ಯ ಸಂಸ್ಥೆ (ಪಿಡಿಯಾಟ್ರಿಕ್ ಇನ್ಸ್‌ಟಿಟ್ಯೂಟ್) ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕೆಂಬ ಪ್ರಸ್ತಾವನೆಯನ್ನು ಕೆಎಂಸಿಆರ್‌ಐ ಸಲ್ಲಿಸಿದೆ.
ಹಾವೇರಿ, ಗದಗ, ಧಾರವಾಡ, ಕೊಪ್ಪಳ, ಬಳ್ಳಾರಿ, ಹಾವೇರಿ, ರಾಯಚೂರು, ಬೀದರ, ಬೆಳಗಾವಿ ಸೇರಿದಂತೆ ಈ ಭಾಗದ 13 ಜಿಲ್ಲೆಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಾರೆ. ಇಲ್ಲಿ ಎಲ್ಲ ವಿಭಾಗಗಳಿವೆ. ಅದರಲ್ಲಿ ಮಕ್ಕಳ ವಿಭಾಗವುಂಟು. ಪ್ರತಿನಿತ್ಯ 200-250ಕ್ಕೂ ಹೆಚ್ಚು ಮಕ್ಕಳು ಹೊರರೋಗಿಗಳಿಗಾಗಿ ಚಿಕಿತ್ಸೆ ಪಡೆದರೆ, ಒಳರೋಗಿಗಳಿಗೆ ದಾಖಲಾಗುವವರ ಸಂಖ್ಯೆ 18-20.ಇಲ್ಲಿ ಜನಿಸಿದ ಮಕ್ಕಳು ಅಲ್ಲದೆ ಬೇರೆ ಬೇರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಮಗು ಜನಿಸಿದರೂ ಅವುಗಳ ಆರೋಗ್ಯದಲ್ಲಿ ತೊಂದರೆ ಕಂಡುಬಂದರೆ ಈ ಆಸ್ಪತ್ರೆಗೆ ವೈದ್ಯರು ಶಿಫಾರಸು ಮಾಡುತ್ತಾರೆ. ಇದಕ್ಕೆ ಕಾರಣ ಇಲ್ಲಿ ಸಿಗುವ ವೈದ್ಯಕೀಯ ಸೌಲಭ್ಯ. ಏನೆಲ್ಲ ಸಾಧ್ಯವೋ ಆ ಎಲ್ಲ ಸೌಲಭ್ಯ ಕಲ್ಪಿಸುವಲ್ಲಿ ಹಿಂದೆ ಬಿದ್ದಿಲ್ಲ. ಕೆಲವೊಂದಿಷ್ಟನ್ನು ಸರ್ಕಾರದಿಂದ ಪಡೆದು ಕಲ್ಪಿಸಿದರೆ, ಮತ್ತೆ ಕೆಲವೊಂದಿಷ್ಟನ್ನು ಇಲ್ಲಿನ ದಾನಿಗಳ ನೆರವು ಪಡೆದು ಮಾಡಿರುವುದುಂಟು.
ಇಲ್ಲಿನ ಮಕ್ಕಳ ವಿಭಾಗದಲ್ಲಿ ತೀವ್ರ ನಿಗಾ ಘಟಕ ಇದೆ. ಇದಲ್ಲದೇ, ನವಜಾತ ಶಿಶುಗಳು ತೀವ್ರ ನಿಗಾ ಘಟಕ (ಎನ್‌ಐಸಿಯು)ವನ್ನು ಖಾಸಗಿ ಸಿಎಸ್‌ಆರ್ ಫಂಡ್‌ನಿಂದ ಮಾಡಿಸಲಾಗಿದೆ.ಪ್ರತ್ಯೇಕ ಸಂಸ್ಥೆ ಪ್ರಸ್ತಾವನೆ:
ಇದೀಗ ಮಕ್ಕಳಿಗಾಗಿ ಇರುವ ವಿಭಾಗವನ್ನೇ ಪ್ರತ್ಯೇಕ ಸಂಸ್ಥೆಯನ್ನಾಗಿ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂದಿದೆ. ಪಿಡಿಯಾಟ್ರಿಕ್ ಇನ್ಸ್‌ಟಿಟ್ಯೂಟ್ ಮಾಡಿದರೆ, ಇಲ್ಲಿಗೆ ದಾಖಲಾಗುವ ಮಕ್ಕಳಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಬಹುದು. ಕೆಎಂಸಿ ಆರ್‌ಐನ ಪ್ರಸ್ತಾವನೆಯಂತೆ ಮಕ್ಕಳ ಸಂಸ್ಥೆಯನ್ನಾಗಿ ಮಾಡಲು ಒಪ್ಪಿಗೆ ನೀಡಿ ಮಾಡಿದರೆ ಸಾಕಷ್ಟು ಸೌಲಭ್ಯ ಸಿಗುತ್ತವೆ. ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆದಂತಾಗುತ್ತದೆ. ಮಕ್ಕಳ ಆರೋಗ್ಯದ ಪ್ರತಿ ವಿಷಯಕ್ಕೂ ಸ್ಪೆಷಾಲಿಸ್ಟ್‌ಗಳು ಲಭ್ಯವಾಗುತ್ತಾರೆ. ಎಲ್ಲ ಬಗೆಯ ಅತ್ಯಾಧುನಿಕ ಯಂತ್ರ, ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಲಭ್ಯವಾಗುತ್ತವೆ ಎಂದು ಮೂಲಗಳು ತಿಳಿಸುತ್ತವೆ.ಇದೀಗ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಮಂಜೂರಾತಿ ನೀಡಿ, ಇದಕ್ಕೆ ಬೇಕಾದ ಅನುದಾನವನ್ನೂ ಬಿಡುಗಡೆಮಾಡಬೇಕು. ವಿಳಂಬತೆ ಅನುಸರಿಸಬಾರದು. ಮಂಜೂರಾತಿ ನೀಡಿದರೆ ಹುಬ್ಬಳ್ಳಿ-ಧಾರವಾಡಕ್ಕಷ್ಟೇ ಅಲ್ಲ ಸುತ್ತಲಿನ ಹತ್ತಾರು ಜಿಲ್ಲೆಗಳಿಗೂ ಅನುಕೂಲವಾಗುತ್ತದೆ. ಸರ್ಕಾರದ ಮೇಲೆ ಈ ಭಾಗದ ಶಾಸಕರು, ಸಚಿವರು, ಜನಪ್ರತಿನಿಧಿಗಳು ಒತ್ತಡ ಹೇರಬೇಕು ಎಂಬುದು ಸಾರ್ವಜನಿಕರ ಅಂಬೋಣ.ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಂತೆಯೇ ಕೆಎಂಸಿಆರ್‌ಐಗೆ ಪಿಡಿಯಾಟ್ರಿಕ್ ಇನ್ಸ್‌ಟಿಟ್ಯೂಟ್ ಮಾಡಬೇಕು ಎಂಬ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ಕೆಎಂಸಿಆರ್‌ಐನ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಹೇಳಿದರು.