ಸಂತ್ರಸ್ತೆಯ ಮದುವೆಯಾಗದಿದ್ದರೆ ಆರೋಪಿ ಮನೆ ಮುಂದೆ ಧರಣಿ: ಪ್ರತಿಭಾ ಕುಳಾಯಿ ಎಚ್ಚರಿಕೆ

KannadaprabhaNewsNetwork |  
Published : Oct 04, 2025, 12:00 AM IST
ಪ್ರತಿಭಾ ಕುಳಾಯಿ ಸುದ್ದಿಗೋಷ್ಠಿ  | Kannada Prabha

ಸಾರಾಂಶ

ಪುತ್ತೂರಿನಲ್ಲಿ ಅವಿವಾಹಿತ ಯುವತಿಗೆ ಜನಿಸಿದ ಮಗು ಸ್ಥಳೀಯ ನಿವಾಸಿ ಆರೋಪಿ ಕೃಷ್ಣ ರಾವ್‌ ಮನೆಯ ಮುಂದೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನ್ಯಾಯಕ್ಕಾಗಿ ಧರಣಿ ನಡೆಸುವುದಾಗಿ ಹಿಂದುಳಿದ ವರ್ಗಗಳ ಆಯೋಗ ಸದಸ್ಯ ಪ್ರತಿಭಾ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು: ಪುತ್ತೂರಿನಲ್ಲಿ ಅವಿವಾಹಿತ ಯುವತಿಗೆ ಜನಿಸಿದ ಮಗು ಸ್ಥಳೀಯ ನಿವಾಸಿ ಆರೋಪಿ ಕೃಷ್ಣ ರಾವ್‌ ಎಂಬಾತನದ್ದೇ ಎಂದು ಡಿಎನ್‌ಎ ಪರೀಕ್ಷೆಯಲ್ಲಿ ರುಜುವಾತುಗೊಂಡ ಹಿನ್ನೆಲೆಯಲ್ಲಿ ಆತ ಮಗುವಿನ ತಾಯಿಯನ್ನು ಇನ್ನಾದರೂ ವಿವಾಹ ಆಗಲೇ ಬೇಕು. ತಪ್ಪಿದಲ್ಲಿ ಆತನ ಮನೆಯ ಮುಂದೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನ್ಯಾಯಕ್ಕಾಗಿ ಧರಣಿ ನಡೆಸುವುದಾಗಿ ಹಿಂದುಳಿದ ವರ್ಗಗಳ ಆಯೋಗ ಸದಸ್ಯ ಪ್ರತಿಭಾ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ರಾವ್‌ ಒಪ್ಪಿದಲ್ಲಿ ಆತನ ಜೊತೆ ಯುವತಿಯ ವಿವಾಹಾವನ್ನು ನಾನೇ ಸ್ವಂತ ಖರ್ಚಿನಲ್ಲಿ ಮಾಡಿಸುತ್ತೇನೆ. ಪ್ರೀತಿ, ಪ್ರೇಮದ ಹೆಸರಲ್ಲಿ ಲೈಂಗಿಕ ಚಟುವಟಿಕೆ ನಡೆಸಿ, ಬಳಿಕ ಅರ್ಧದಲ್ಲೇ ಕೈಬಿಡುವ ಘಟನೆಗಳು ಮರುಕಳಿಸಬಾರದು. ಇದೊಂದು ಜಿಲ್ಲೆಗೆ ಕಪ್ಪು ಚುಕ್ಕೆ. ಹಾಗಾಗಿ ಈ ಘಟನೆ ಪ್ರೀತಿಸಿ, ಮಗು ಕರುಣಿಸಿ ಯುವತಿಯ ಬಾಳನ್ನು ಅರ್ಧಕ್ಕೇ ಕೈಬಿಡುವವರಿಗೆ ಒಂದು ಪಾಠವಾಗಬೇಕು ಎಂದರು.

ಯುವತಿ ಜೊತೆ ಎಂಟು ವರ್ಷಗಳಿಂದ ಸಂಪರ್ಕದಲ್ಲಿದ್ದ ಕೃಷ್ಣ ರಾವ್‌, ಕೊನೆಗೆ ವಿವಾಹವಾಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆ. ಆತನ ಮನೆಯವರೂ ಈಗ ಅವರ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಘಟನೆಗಳು ಸಮಾಜದಲ್ಲಿ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ. ಇವರಿಬ್ಬರನ್ನು ಒಂದುಗೂಡಿಸಿ ಸಂತ್ರಸ್ತೆಗೆ ನ್ಯಾಯಕೊಡಿಸುವಲ್ಲಿ ಹಿಂದು ಸಂಘಟನೆಗಳು, ಸ್ವಯಂಘೋಷಿತ ಮುಖಂಡರು ಕೈಚೆಲ್ಲುತ್ತಿರುವುದು ಸರಿಯಲ್ಲ. ಸಂತ್ರಸ್ತೆಯನ್ನು ಸಮುದಾಯ ಸಂಘಟನೆಯವರು ಕೈಬಿಟ್ಟಿದ್ದಾರೆ, ಹಾಗಿರುವಾಗ ಕೇವಲ ಸಮುದಾಯದ ಮುಖಂಡ ನಂಜುಂಡಿ ಮಾತ್ರ ಧೈರ್ಯ ತುಂಬಿ ಬೆಂಬಲಕ್ಕೆ ನಿಂತಿದ್ದಾರೆ. ಈ ಘಟನೆಯಲ್ಲಿ ಸಂತ್ರಸ್ತೆಗೆ ನ್ಯಾಯಕೊಡಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಪ್ರತಿಭಾ ಕುಳಾಯಿ ವಿನಂತಿಸಿದರು.

ಸದ್ಯ ಜಾಮೀನಿನಲ್ಲಿರುವ ಕೃಷ್ಣ ರಾವ್‌ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ನೀಡುವ ಹೇಳಿಕೆಯನ್ನು ಆಧರಿಸಿ ಮುಂದೆ ಹೋರಾಟದ ರೂಪುರೇಷೆ ಹಾಕಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಸಂತ್ರಸ್ತೆಗೆ ನ್ಯಾಯ ಕೊಡಿಸಿಯೇ ಸಿದ್ಧ ಎಂದು ಪ್ರತಿಭಾ ಕುಳಾಯಿ ಹೇಳಿದರು. ಸಂತ್ರಸ್ತೆಯ ತಾಯಿ ನಮಿತಾ, ಸಮುದಾಯದ ಕಾರ್ಯಕರ್ತೆ ಅರ್ಚನಾ ಇದ್ದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ