ಬಸವ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ

KannadaprabhaNewsNetwork | Published : Jul 29, 2024 12:45 AM

ಸಾರಾಂಶ

ವಿದ್ಯಾರ್ಥಿ ದೆಸೆಯಲ್ಲಿ ತನ್ನನ್ನು ತಾನು ಬದಲಿಸಿಕೊಂಡು, ಶಿಸ್ತನ್ನು ಮೈಗೂಡಿಸಿಕೊಂಡರೆ ಉತ್ತಮ ಸಾಧನೆ ಸಾಧ್ಯ,

ಕನ್ನಡಪ್ರಭ ವಾರ್ತೆ ನಂಜನಗೂಡು

ವಿದ್ಯಾರ್ಥಿ ಜೀವನದಲ್ಲಿ ಕಠಿಣ ತಪಸ್ಸಿನಂತೆ ವಿದ್ಯಾರ್ಚನೆಯಲ್ಲಿ ತೊಡಗಿಕೊಂಡರೆ ಉನ್ನತ ಸ್ಥಾನ ಪಡೆಯಬಹುದು ಎಂದು ಮುರುಗೀ ಮಠದ ಇಮ್ಮಡಿ ಮುರುಗೀ ಸ್ವಾಮೀಜಿ ಹೇಳಿದರು.

ತಾಲೂಕಿನ ಮಲ್ಲನಮೂಲೆ ಮಠದ ಸಭಾಂಗಣದಲ್ಲಿ ಭಾನುವಾರ ಬಸವ ಸೇವಾ ಸಮಿತಿ ಹಾಗೂ ವೀರಶೇವ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ದೆಸೆಯಲ್ಲಿ ತನ್ನನ್ನು ತಾನು ಬದಲಿಸಿಕೊಂಡು, ಶಿಸ್ತನ್ನು ಮೈಗೂಡಿಸಿಕೊಂಡರೆ ಉತ್ತಮ ಸಾಧನೆ ಸಾಧ್ಯ, ಡಾಂಭಿಕತೆಯನ್ನು ಬಿಟ್ಟು ನೈಜತೆಯಿಂದ ನಡೆದು ಬದಕನ್ನು ಸಾಧಕಗೊಳಿಸಿಕೊಳ್ಳಬಹುದು ಎಂದು ಹೇಳಿದರು.

ಜಿಲ್ಲಾ ವೀರಶೈವ ನೌಕರರ ಸಂಘದ ಅಧ್ಯಕ್ಷ ಆಲೂರು ಬಸವರಾಜು ಮಾತನಾಡಿ, ಇಂದಿನ ಸಂದರ್ಭದಲ್ಲಿ ಸಮಾಜದ ಮೇಲೆ ಹೊರಗಿನ ಸಂಸ್ಕೃತಿಯ ಹೊಡೆತ ಬೀಳುತ್ತಿದೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಅನುಸರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಹೆಚ್ಚಿದೆ. ವಿದ್ಯಾರ್ಥಿಗಳು ಜ್ಞಾನದಾಹಿಗಳಾಗಬೇಕು. ಜಗತ್ತನ್ನು ಆಳುತ್ತಿರುವುದು ಜ್ಞಾನ, ಪುರೋಹಿತ ಶಾಯಿಗಳಷ್ಟು ನಾವು ಬಲಶಾಲಿಗಳಲ್ಲ. ಆ ಸಮಾಜ ಮೀಸಲಾತಿಯಿಲ್ಲದೆ ಬದುಕುತ್ತಿದೆ. ಜ್ಞಾನದ ಶಕ್ತಿಯಿಂದ ಹೊರ ದೇಶಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಯಶಸ್ವಿಯಾಗಿದ್ದಾರೆ. ಜ್ಞಾನಕ್ಕೆ ಮಹತ್ವ ನೀಡಿದರೆ ಉನ್ನತ ಸ್ಥಾನ ಪಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ನಿವೃತ್ತ ನೌಕರರು ಹಾಗೂ ವಿದ್ಯಾರ್ಥಿಗಳಿಗೆ ನಗದು ಪುಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಲ್ಲನಮೂಲೆ ಮಠದ ಚೆನ್ನಬಸವ ಸ್ವಾಮೀಜಿ, ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಸ್.ಎಂ. ಕೆಂಪಣ್ಣ, ಬಸವ ಸೇವಾ ಸಮಿತಿ ಅಧ್ಯಕ್ಷ ಜಿ.ಎಲ್. ಸೋಮಣ್ಣ, ಡಿ.ವಿ. ಚಂದ್ರಶೇಖರ್ದೇವನೂರು, ಶಿವಕುಮಾರ್, ಎಂ.ಎಸ್. ನಾಗೇಂದ್ರ, ಶಂಕರ್ಪ್ರಸಾದ್, ಕುಮಾರಸ್ವಾಮಿ, ಮಹೇಶ್, ಗುರುಸ್ವಾಮಿ, ಅಕ್ಷರ ದಾಸೋಹ ಅಧಿಕಾರಿ ಮಲ್ಲಿಕಾರ್ಜುನ್ ಇದ್ದರು.

Share this article