ಬಿ. ರಂಗಸ್ವಾಮಿ, ಕನ್ನಡಪ್ರಭ ವಾರ್ತೆ ತಿಪಟೂರು
ಕಲ್ಪತರು ನಾಡಿನ ಬಹುಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗಿರುವುದರಿಂದ ಹರ್ಷಗೊಂಡಿರುವ ರೈತರು ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಲು ಭೂಮಿಯನ್ನು ಹಸನು ಮಾಡಿಕೊಳ್ಳಲು ಮುಂದಾಗಿದ್ದರೂ ಕೃಷಿ, ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರಗಳು ಮಾತ್ರ ರೈತರಿಗೆ ಅಗತ್ಯ ಮಾಗಿ ಉಳುಮೆ, ಬಿತ್ತನೆ ಬೀಜಗಳ ಆಯ್ಕೆ, ಗೊಬ್ಬರ ಸೇರಿದಂತೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ನೀಡದೆ ನಿರ್ಲಕ್ಷ್ಯ ವಹಿಸುತ್ತಿವೆ. ಕಳೆದ ವರ್ಷ ಪೂರ್ವ ಮುಂಗಾರು ಮಳೆಗಳು ಕೈಕೊಟ್ಟ ಪರಿಣಾಮ ಅಷ್ಟೇನೂ ಲಾಭದಾಯಕ ಬೆಳೆಗಳನ್ನು ಬೆಳೆಯಲಾಗದೆ ರೈತರು ನಷ್ಟವನ್ನು ಅನುಭವಿಸುವಂತಾಯಿತು. ಆದರೆ ಈ ವರ್ಷ ಏಪ್ರಿಲ್ ಆರಂಭದಿಂದಲೇ ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿ ತಾಲೂಕಿನಲ್ಲಿ ಬಹುತೇಕ ಕಡೆಗಳಲ್ಲಿ ವರುಣನ ಸಿಂಚನವಾಗುತ್ತಿದ್ದು ರೈತರು ಸಂತಸದಿಂದಲೇ ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ. ಈ ವರ್ಷವಾದರೂ ಉತ್ತಮ ಬೆಳೆ ಬೆಳೆಯಬೇಕೆಂಬ ಹಂಬಲದಲ್ಲಿ ರೈತನಿದ್ದಾನೆ. ಆದರೆ ಮಳೆ ಪ್ರಾರಂಭವಾಗಿ ೧೫ದಿನಗಳಾದರೂ ಕೃಷಿ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ಹೊಸವರ್ಷದ ಕೃಷಿ ಆರಂಭಕ್ಕೆ ಸಂಬಂದಪಟ್ಟ ಇಲಾಖೆಗಳಲ್ಲಿ ರೈತರಿಗೆ ಉಳುಮೆ, ಗೊಬ್ಬರ ಬಳಕೆ, ಉತ್ತಮ ತಳಿಗಳ ಬೀಜಗಳ ಆಯ್ಕೆ, ಬಿತ್ತನೆ ಸಮಯ, ವೈಜ್ಞಾನಿಕ ಅರಿವು, ತಾಂತ್ರಿಕ ಮಾಹಿತಿಗಳನ್ನು ನೀಡದೆ ನಿರ್ಲಕ್ಷ್ಯ ವಹಿಸಿವೆ. ಕೆಲ ರೈತರು ಮಾತ್ರ ಸುಮ್ಮನೆ ಕೂರದೆ ಉಳುಮೆ ಆರಬಿಸಿದ್ದು ತಮ್ಮಲ್ಲೇ ದಾಸ್ತಾನು ಮಾಡಿಕೊಂಡಿದ್ದ ಹಳೆ ಬಿತ್ತನೆ ಬೀಜಗಳಿಂದ ಬಿತ್ತನೆ ಮಾಡಲು ಭೂಮಿಯನ್ನು ಸಿದ್ದಮಾಡಿಕೊಳ್ಳುತ್ತಾ ಪಾರಂಪರಿಕ ಕೃಷಿ ಪದ್ದತಿಯನ್ನೇ ಅನುಸರಿಸುತ್ತಿದ್ದಾರೆ. ಇನ್ನೂ ಕೆಲ ರೈತರು ಸಂಬಂದಪಟ್ಟ ಕೃಷಿ ಸಂಪರ್ಕ ಕೇಂದ್ರಗಳಲ್ಲಿಗೆ ಹೋಗಿ ಬಿತ್ತನೆ ಬೀಜಗಳ ಬಗ್ಗೆ ವಿಚಾರಿಸುತ್ತಿದ್ದರೂ ಯಾವ ಸ್ಪಷ್ಟ ಮಾಹಿತಿಯೂ ಸಿಗುತ್ತಿಲ್ಲವೆಂದು ಬೇಸರಿಸಿಕೊಂಡಿದ್ದಾರೆ.ಕೃಷಿ ವಿಶ್ವವಿದ್ಯಾನಿಲಯಗಳು ಪ್ರತೀವರ್ಷ ಹತ್ತಾರು ಉತ್ತಮ ತಳಿಗಳ ಬೀಜಗಳನ್ನು ಬಿಡುಗಡೆ ಮಾಡುತ್ತಿದ್ದರೂ ಅವುಗಳು ರೈತರಿಗೆ ಬಿತ್ತನೆ ಸಕಾಲದಲ್ಲ್ಲಿ ದೊರೆಯುತ್ತಿಲ್ಲವೆಂಬ ದೂರುಗಳು ಸಾಕಷ್ಟಿವೆ. ವಿವಿಗಳು ಕೃಷಿಗೆ ಪೂರಕವಾದ ಹಲವು ತಾಂತ್ರಿಕ ಮಾರ್ಗಗಳನ್ನು ಕಂಡುಹಿಡಿದಿದ್ದರೂ ಸಂಬಂದಿಸಿದ ಕೃಷಿ, ತೋಟಗಾರಿಕೆ, ಕೆವಿಕೆ ಅಧಿಕಾರಿಗಳು ಮಾತ್ರ ಅವುಗಳ ಮಾಹಿತಿಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕೋಟ್ 1 : ನಾವು ಹಳೆ ಬೀಜಗಳು, ಹಳೆ ಕೃಷಿಪದ್ದತಿ ಅನುಸರಿಸುತ್ತಿದ್ದು ವೈಜ್ಞಾನಿ ಕೃಷಿ ಪದ್ದತಿ ಬಗ್ಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುತ್ತಿಲ್ಲ. ರೋಗನಿರೋಧಕ, ಮಳೆ ತಡವಾದರೂ ಶೀತಾಂಶ ಹಿಡಿದಿಟ್ಟುಕೊಳ್ಳುವ, ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ತಾಂತ್ರಿಕ ಬಳಕೆ ಸೇರಿದಂತೆ ಸಕಾಲಕ್ಕೆ ಬೀಜ, ಮಾಹಿತಿ ಒದಗಿಸದೆ ಅಧಿಕಾರಿಗಳು ಸೋಮಾರಿಗಳಾಗಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ.- ಸ್ವಾಮಿ, ಮಾರುಗೊಂಡನಹಳ್ಳಿ ರೈತ.
ಕೋಟ್ 2 : ತಾಲೂಕಿನಲ್ಲಿ ಉತ್ತಮ ಮಳೆ ಪ್ರಾರಂಭವಾಗಿದ್ದು, ರೈತರಿಗೆ ಉಳುಮೆ. ಬೀಜ, ಗೊಬ್ಬರಗಳ ಆಯ್ಕೆ, ತಾಂತ್ರಿಕ ಮಾಹಿತಿ ಸೇರಿದಂತೆ ಬಿತ್ತನೆ ಬೀಜಗಳ ಮಾರಾಟ ಬಗ್ಗೆ ಸೂಕ್ತ ಮಾಹಿತಿ ನೀಡಲು ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. - ಪವನ್‌ಕುಮಾರ್, ತಹಸೀಲ್ದಾರ್, ತಿಪಟೂರು.