ಹಾನಗಲ್ಲ ತಾಲೂಕಿನಲ್ಲಿ ರೈತರಿಗೆ ಆತಂಕ ತಂದ ಮುಂಗಾರು ಪೂರ್ವ ಮಳೆ

KannadaprabhaNewsNetwork |  
Published : May 29, 2025, 02:09 AM IST
ಕೃಷಿ ಭೂಮಿಯಲ್ಲಿ ಕೊಯಿಲಿಗೆ ಸಿದ್ಧವಾದ ಭತ್ತದ ಬೆಳೆ. | Kannada Prabha

ಸಾರಾಂಶ

ನದಿಯ ನೀರು ಹಾಗೂ ಕೊಳವೆ ಬಾವಿ ನೀರನ್ನು ಅವಲಂಬಿಸಿ ಭತ್ತದ ನಾಟಿ ಮಾಡಿ ಈಗ ಕೊಯಿಲಿಗೆ ಬಂದಿರುವಾಗ ಭತ್ತದ ಬೆಳೆ ಮಳೆಗೆ ಆಹುತಿಯಾಗುತ್ತಿದೆ.

ಹಾನಗಲ್ಲ: ಮುಂಗಾರು ಪೂರ್ವ ಮಳೆಯಿಂದಾಗಿ ತಾಲೂಕಿನ ಶೇ. ೯೦ರಷ್ಟು ಬೇಸಿಗೆ ಪೈರಿನ ಕೊಯಿಲು ಸ್ಥಗಿತಗೊಂಡಿದ್ದು, ರೈತರು ಕೊಯಿಲು ಇಲ್ಲದೆ, ಮುಂಗಾರು ಬಿತ್ತನೆಗೆ ಭೂಮಿಯೂ ಸಿದ್ಧ ಮಾಡಿಕೊಳ್ಳಲಾಗದೆ ಆತಂಕದಲ್ಲಿದ್ದಾರೆ.

ತಾಲೂಕಿನ ೪೨ ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ೯ ಸಾವಿರ ಹೆಕ್ಟೇರ್ ಭತ್ತದ ನಾಟಿ ಬೆಳೆ, ೨೧೩೫ ಹೆಕ್ಟೇರ್ ಗೋವಿನಜೋಳ, ೧ ಸಾವಿರ ಹೆಕ್ಟೇರ್ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲಾಗಿತ್ತು. ವಿದ್ಯುತ್ ವ್ಯತ್ಯಯದ ನಡುವೆಯೂ ಕೊಳವೆ ಬಾವಿ ಆಧರಿಸಿ ಬೆಳೆಗಳನ್ನು ಬೆಳೆದು ಈಗ ಕೊಯ್ಲಿಗಾಗಿ ಕಾಯುತ್ತಿರುವಾಗ ಮುಂಗಾರು ಪೂರ್ವ ಮಳೆ ರೈತರನ್ನು ಆತಂಕಕ್ಕೆ ಈಡು ಮಾಡಿದೆ.ಈವರೆಗೆ ಕೇವಲ ಶೇ. ೧೦ರಷ್ಟು ಬೆಳೆ ಕೊಯಿಲು ನಡೆದಿದೆ. ಇನ್ನೂ ಶೇ. ೯೦ರಷ್ಟು ಕೊಯಿಲು ಆಗಬೇಕಾಗಿದೆ. ಗಾಳಿ ಮಳೆಗೆ ಗೋವಿನಜೋಳ ನೆಲಕಚ್ಚುತ್ತಿದ್ದು, ರೈತರಿಗೆ ನಷ್ಟವಾಗುತ್ತಿದೆ. ಗೋವಿನ ಜೋಳ ಕೊಯಿಲು ಮಾಡಿದ ಕಾಳುಗಳು ಕೂಡ ಅಲ್ಲಲ್ಲಿ ರಸ್ತೆಗಳಲ್ಲಿಯೇ ಒಣಗಲು ಹಾಕಿದ್ದು, ಅಲ್ಲಿಯೇ ಇದೆ.

ಬೆಂಬಿಡದ ಮಳೆಯಿಂದಾಗಿ ಅಲ್ಲಿಯೇ ಗೋವಿನ ಜೋಳದ ರಾಶಿಗಳನ್ನು ಮುಚ್ಚಿದ ತಾಡಪಾಲುಗಳನ್ನು ತೆಗೆದು ಗಾಳಿಯಾಡಿಸಿ ಮತ್ತೆ ಮುಚ್ಚುತ್ತಿದ್ದಾರೆ. ಇದರಿಂದ ಬಹುಪಾಲು ಗೋವಿನ ಜೋಳ ಕೂಡ ಕಪ್ಪಾಗಿ ಮಾರುಕಟ್ಟೆಯ ಬೆಲೆಗೂ ಮಾರಕವಾಗಿದೆ. ಇದರಿಂದ ರೈತ ತೀರ ಸಂಕಷ್ಟ ಎದುರಿಸಬೇಕಾಗಿದೆ.

ಇನ್ನು ನದಿಯ ನೀರು ಹಾಗೂ ಕೊಳವೆ ಬಾವಿ ನೀರನ್ನು ಅವಲಂಬಿಸಿ ಭತ್ತದ ನಾಟಿ ಮಾಡಿ ಈಗ ಕೊಯಿಲಿಗೆ ಬಂದಿರುವಾಗ ಭತ್ತದ ಬೆಳೆ ಮಳೆಗೆ ಆಹುತಿಯಾಗುತ್ತಿದೆ. ಅಲ್ಲಲ್ಲಿ ನೀರು ನಿಂತು ಭತ್ತ ನೆಲಕ್ಕೆ ಉದುರುತ್ತಿದೆ. ಹೀಗೇ ಮಳೆ ಮುಂದುವರಿದರೆ ನದಿ ತಟದಿಂದ ಭತ್ತದ ಪೈರನ್ನು ರಸ್ತೆಗಳಿಗೆ ತರುವುದು ಕೂಡ ಕಷ್ಟಕರ.ಬಹುತೇಕ ದ್ವಿದಳ ಧಾನ್ಯಗಳ ಒಕ್ಕಲು ಮುಗಿದಿದೆ. ಇನ್ನು ೨೦೩೦ ಹೆಕ್ಟೇರ್‌ನಷ್ಟಿರುವ ಕಬ್ಬಿನ ಕಟಾವು ಪೂರ್ಣ ಮುಗಿದಿರುವುದರಿಂದ ರೈತರು ನಿರಾಳರಾಗಿದ್ದಾರೆ.ರಸ್ತೆಯೇ ಕಣ: ಇನ್ನು ಬಹುತೇಕ ಭತ್ತ ಹಾಗೂ ಗೋವಿನಜೋಳವನ್ನು ಮಾರುಕಟ್ಟೆಗೆ ಮಾರಲು ಸಿದ್ಧಪಡಿಸಲು ರೈತರು ಅಂದಿನ ದಿನಗಳಲ್ಲಿ ಸಿದ್ಧ ಮಾಡಿಕೊಳ್ಳುತ್ತಿದ್ದ ಕಣಗಳು ಈಗ ಕಾಣುತ್ತಿಲ್ಲ. ಶೇ. ೯೦ಕ್ಕೂ ಅಧಿಕ ರೈತರು ರಸ್ತೆಗಳನ್ನೇ ಕಣಗಳನ್ನಾಗಿ ಮಾಡಿಕೊಂಡಿದ್ದಾರೆ. ಅರ್ಧ ರಸ್ತೆ ಕಣ, ಅರ್ಧ ರಸ್ತೆ ಸಂಚಾರಕ್ಕೆ ಎಂಬಂತಾಗಿದೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗಿದೆ ಎಂಬ ಕೂಗು ಕೇಳಿದೆ. ಆದರೆ ಈ ಮಳೆ ಹಾಗೂ ಅಧಿಕೃತ ಕಣ ನಿರ್ಮಾಣದ ಕೊರತೆಯಿಂದಾಗಿ ರಸ್ತೆಗಳನ್ನೇ ಕಣಗಳನ್ನಾಗಿ ಉಪಯೋಗಿಸುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ.

ಪ್ರಕೃತಿಯೊಂದಿಗೆ ಹೋರಾಟ: ಭತ್ತ ನಾಟಿಯ ಜಮೀನುಗಳು ಹೆಚ್ಚು ಕೊಯಿಲಿಗೆ ಉಳಿದಿವೆ. ಗೋವಿನ ಜೋಳ ಶೇ. ೮೦ರಷ್ಟಾಗಿದೆ. ಈ ಬಾರಿ ಮುಂಗಾರು ಪೂರ್ವ ಮಳೆ ಹೆಚ್ಚು ಕಾಲ ಹಾಗೂ ವಾಡಿಕೆಗಿಂತ ಹೆಚ್ಚು ಬಿದ್ದಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಪ್ರಕೃತಿಯೊಂದಿಗೆ ಹೋರಾಟ ರೈತರಿಗೆ ಅನಿವಾರ್ಯ ಎನ್ನುವಂತಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ತಿಳಿಸಿದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ