ಬುದ್ಧಗಯಾ ವಿಹಾರದ ಆಡಳಿತ ಬೌದ್ಧರಿಗೆ ವಹಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Nov 27, 2024 1:00 AM

ಸಾರಾಂಶ

ಈ ದೇಶದ ಮೂಲ ನಿವಾಸಿಗಳಿಗೆ ಸೇರಬೇಕಾಗಿರುವ ಬುದ್ಧಗಯಾದ ಬೌದ್ಧ ಮಹಾವಿಹಾರದ ಆಡಳಿತವನ್ನು ಮನುವಾದಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದು, ಕುತಂತ್ರದಿಂದ ಒಳನುಗ್ಗಿ ಆಡಳಿತ ನಡೆಸುತ್ತಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಆಲ್ ಇಂಡಿಯಾ ಬುದ್ಧಿಸ್ಟ್ ಫೆಡರೇಷನ್ ಬಿ.ಟಿ. ಆಕ್ಟ್ 1947 ಅನ್ನು ರದ್ದುಗೊಳಿಸಿ ಬಿಹಾರದ ಬುದ್ಧಗಯಾದಲ್ಲಿರುವ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಬುದ್ಧಧಮ್ಮ ಸಮಿತಿಗಳ ಒಕ್ಕೂಟದವರು ಮಂಗಳವಾರ ಪ್ರತಿಭಟಿಸಿದರು.

ಕರ್ನಾಟಕ ರಾಜ್ಯದ ಎಲ್ಲಾ ಬೌದ್ಧಸಂಘ- ಸಂಸ್ಥೆಗಳು ಮತ್ತು ಬುದ್ಧ ವಿಹಾರಗಳು, ಆಲ್ ಇಂಡಿಯಾ ಬುದ್ಧಿಸ್ಟ್ ಫೋರಂ, ಬೆಸ್ಟ್ ಬೋಧಿಸತ್ವ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಟ್ರಸ್ಟ್, ಕರ್ನಾಟಕ ಬುದ್ಧಧಮ್ಮ ಸಮಿತಿಗಳ ಒಕ್ಕೂಟದವರು ಸಿದ್ಧಾರ್ಥ ನಗರದಲ್ಲಿರುವ ಭಗವಾನ್ ಬುದ್ಧ ವೃತ್ತದಲ್ಲಿ ಬುದ್ಧರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ನಂತರ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ತಮ್ಮ ಮನವಿ ಸಲ್ಲಿಸಿದರು.

ಈ ವೇಳೆ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಈ ದೇಶದ ಮೂಲ ನಿವಾಸಿಗಳಿಗೆ ಸೇರಬೇಕಾಗಿರುವ ಬುದ್ಧಗಯಾದ ಬೌದ್ಧ ಮಹಾವಿಹಾರದ ಆಡಳಿತವನ್ನು ಮನುವಾದಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದು, ಕುತಂತ್ರದಿಂದ ಒಳನುಗ್ಗಿ ಆಡಳಿತ ನಡೆಸುತ್ತಿರುವುದು ಸರಿಯಲ್ಲ. ಬಿಹಾರದ ಸರ್ಕಾರ ಬೌದ್ಧರ ಪರವಾಗಿ ನಿಂತಿಲ್ಲ. ಬೌದ್ಧ ವಿರೋಧಿಗಳಾದ ಮನುವಾದಿಗಳು, ಬ್ರಾಹ್ಮಣರು ಆಡಳಿತ ನಡೆಸುತ್ತಿದ್ದು, ಇವರನ್ನು ಅಲ್ಲಿಂದ ಹೊರಹಾಕಿ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಬೌದ್ಧ ವಿಹಾರದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳನ್ನು ಮಾಡಿ, ಬೌದ್ಧರಿಗೆ ಅಪಮಾನ ಮಾಡುತ್ತಿದ್ದಾರೆ. ಹೀಗಾಗಿ, ಹಿಂದೂ ಆಡಳಿತದಿಂದ ಕೊನೆಗಾಣಿಸಿ ಬೌದ್ಧರಿಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ಬಾಬಾ ಸಾಹೇಬರು ದೇಶವನ್ನು ಹೊಸದಾಗಿ ಕಟ್ಟಬೇಕೆಂದು ಸಂವಿಧಾನವನ್ನು ನೀಡಿದರು. ಈ ಮೂಲಕ ಭಾರತದ ಮೂಲ ನಿವಾಸಿಗಳಿಗೆ ಬೌದ್ಧ ಧರ್ಮದ ವಾರ್ಗವನ್ನು ತೋರಿಸಿ ಕೊಟ್ಟರು. ಆದರೆ, ಇಂದು ಪುರೋಹಿತಶಾಹಿವರ್ಗ, ಬ್ರಾಹ್ಮಣರು ಬುದ್ಧಗಯಾ ಮಹಾವಿಹಾರದಲ್ಲಿ ಆಡಳಿತ ನಡೆಸುತ್ತಿರುವುದು ಶೋಚನಿಯ ಸಂಗತಿ ಎಂದರು.

ಚಿಂತಕ ಆರ್. ಮಹದೇವಪ್ಪ ಮಾತನಾಡಿ, ದೇಶದ ಮಹಾನ್ ಚಕ್ರವರ್ತಿ ಅಶೋಕ ಕಳಿಂಗ ಯುದ್ಧದಲ್ಲಿ ಲಕ್ಷಾಂತರ ಜನರು ಸಾವು-ನೋವುಗಳಿಂದ ಸಾಯುತ್ತಾರೆ. ಇದನ್ನು ನೋಡಿದ ಅಶೋಕನು ಮನಃಪರಿವರ್ತನೆಯಾಗಿ ಬೌದ್ಧಧಮ್ಮದತ್ತ ಮುಖಮಾಡಿ ದೇಶಾದ್ಯಂತ ಬೌದ್ಧಧಮ್ಮದ ಬೆಳವಣಿಗೆಗೆ ಶ್ರಮಿಸಿದನ್ನು ಆ ಸಂದರ್ಭದಲ್ಲಿ ಹಿಂದೂಗಳು, ವೈದಿಕರು ಅಶೋಕನಿಗೆ ಕಿರುಕುಳ ನೀಡಿದರು. ಇದು ಇಂದಿಗೂ ಮುಂದುವರಿದುಕೊಂಡು ಬಂದಿದೆ ಎಂದು ತಿಳಿಸಿದರು.

ಸಿದ್ದಾರ್ಥ ಬುದ್ಧ ವಿಹಾರದ ಚಂದ್ರಮಣಿ ಬಂತೇಜಿ, ಸಾಹಿತಿ ಸಿದ್ಧಸ್ವಾಮಿ, ಸೋಮಯ್ಯ ಮಲೆಯೂರು, ಚೋರನಹಳ್ಳಿ ಶಿವಣ್ಣ, ಆರ್. ನಟರಾಜು, ಎಚ್. ಶಿವರಾಜು, ಎಂ. ಸಾವಕಯ್ಯ, ರಾಜು ಹಂಪಾಪುರ, ನಿಸರ್ಗ ಸಿದ್ದರಾಜು, ಕೆ.ಎಂ. ಪುಟ್ಟು, ಹರಕುಮಾರ್, ಈರೇಶ್ ನಗರ್ಲೆ, ಡಾ. ಜಗನ್ನಾಥ್, ಮಹಾದೇವಸ್ವಾಮಿ, ಪುಟ್ಟಸ್ವಾಮಿ, ಗೋವಿಂದರಾಜು, ಪಲ್ಲವಿ, ಮಂಚಯ್ಯ, ರೂಪೇಶ್, ಪುನೀತ್, ವಿಜಯಕುಮಾರ್, ಸಚಿನ್ ಮೊದಲಾದವರು ಇದ್ದರು.

Share this article