ಮಧ್ಯಕಾಲೀನ ಕಾಲಘಟ್ಟದಲ್ಲಿ ಕುಶಲಕರ್ಮಿಗಳಿಗೆ ಆದ್ಯತೆ: ಡಾ. ಎಸ್.ಕೆ. ಅರುಣಿ

KannadaprabhaNewsNetwork | Published : Feb 22, 2024 1:50 AM

ಸಾರಾಂಶ

“ಐರೋಪ್ಯರ ದಾಖಲೆಗಳಲ್ಲಿ ವಿಜಯಪುರದ ವಿವರಣೆಗಳು: ಒಂದು ಹೊಸ ಓದು” ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಹೊಸಪೇಟೆ: ಮಧ್ಯಕಾಲೀನ ಕಾಲಘಟ್ಟದ ಆಗ್ರಾ ಮತ್ತು ಸೂರತ್ ಹೊರತುಪಡಿಸಿದರೆ ದಖನ್ ಪ್ರದೇಶದಲ್ಲಿ ವಿಜಯಪುರ ಹೆಚ್ಚು ಉಲ್ಲೇಖಗೊಂಡಿದೆ. ನಗರೀಕರಣಕ್ಕೆ ಒತ್ತು ನೀಡಿದ್ದರ ಫಲವಾಗಿ ಕುಶಲಕರ್ಮಿಗಳಿಗೆ ಆದ್ಯತೆ ದೊರೆಯಿತು ಎಂದು ಐಸಿಎಚ್‌ಆರ್ ಬೆಂಗಳೂರು ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕ ಡಾ. ಎಸ್.ಕೆ. ಅರುಣಿ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗ ಮತ್ತು ಬಾಗಲಕೋಟೆಯ ಬಸವವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ವಿಶೇಷ ದತ್ತಿ ಉಪನ್ಯಾಸದಲ್ಲಿ “ಐರೋಪ್ಯರ ದಾಖಲೆಗಳಲ್ಲಿ ವಿಜಯಪುರದ ವಿವರಣೆಗಳು: ಒಂದು ಹೊಸ ಓದು” ವಿಷಯದ ಕುರಿತು ಮಾತನಾಡಿದ ಅವರು, ಮಧ್ಯಕಾಲೀನ ನಗರ ವ್ಯವಸ್ಥೆಯಲ್ಲಿ ಆಯಕಟ್ಟಿನ ಸ್ಥಳಗಳು ಹೆಚ್ಚು ಪ್ರಚಲಿತಕ್ಕೆ ಬಂದ ಪರಿಣಾಮ ಫಲವತ್ತಾದ ಭೂಮಿ ಮತ್ತು ಕೃಷಿ ಬಳಕೆಯಿಂದ ನಗರೀಕರಣಕ್ಕೆ ಹೆಚ್ಚು ಒತ್ತು ನೀಡಿತು. ಜನಸಮುದಾಯಗಳು, ಕುಶಲಕರ್ಮಿ ವರ್ಗಗಳ ಪ್ರಾಮುಖ್ಯತೆ ಹೆಚ್ಚಿತು. ವಿಜಯಪುರದ ಶಾಸನಗಳ ದಾಖಲೆಗಳ ಪ್ರಕಾರ ಸಿಂದಗಿ ತಾಲೂಕಿನ ತರ್ದವಾಡಿ ಪ್ರದೇಶಕ್ಕೆ ಸೇರಿದ ಕನ್ನಡ, ಮರಾಠಿ, ಪರ್ಶಿಯನ್ ಶಾಸನಗಳು ಅಲ್ಲಿನ ಭಾಷೆ, ಧರ್ಮ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸುತ್ತವೆ. ವಿಜಯಪುರ ನಗರ ನಿರ್ಮಾಣ ಆದಿಲ್‌ ಶಾಹಿ ಕಾಲದಲ್ಲಿ ಬಲಗೊಂಡ ವಿಚಾರವನ್ನು ಪೋರ್ಚುಗೀಸರ ಫಾದರ್ ಹೆರಾಸ್, ಫ್ರಾನ್ಸಿಸ್ಕೊ ಲೊಪೆಜ್, ಆಂಟೋನಿಯೊ ಪೆಗಾಡೋ, ಗೋಮಾಲೊ ರೊದ್ರಿಗ್ಸ್ ಪಾದ್ರಿಗಳ ವಿವರಣೆಯಿಂದ ತಿಳಿಯಬಹುದು ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಣಿಜ್ಯ- ವ್ಯಾಪಾರಗಳ ಬಲಗೊಳ್ಳುವಿಕೆಗೂ ನಗರೀಕಣಕ್ಕೂ ಇರುವ ಸಂಬಂಧ ಮಹತ್ವದ್ದು. ಈ ಹಿನ್ನೆಲೆ ವಿಜಯನಗರ ಮತ್ತು ವಿಜಯಪುರಗಳು ಪರಸ್ಪರ ಹೊಂದಿದ್ದ ಸಂಬಂಧವನ್ನು ಮರುವಿವೇಚಿಸಬೇಕಿದೆ ಎಂದರು.

ಚರಿತ್ರೆ ವಿಭಾಗದ ಮುಖ್ಯಸ್ಥ ಡಾ. ಕೆ. ಮೋಹನ್‌ಕೃಷ್ಣ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ವೈ. ಸೋಮಶೇಖರ್ ಮತ್ತು ವಿಶ್ವವಿದ್ಯಾಲಯದ ಸಂಶೋಧನಾರ್ಥಿಗಳು ಇದ್ದರು. ಸಂಶೋಧನಾ ವಿದ್ಯಾರ್ಥಿ ಮಹೇಶ ವಿ., ಮಣಿಕಂಠ ಹಂಗಳ ನಿರ್ವಹಿಸಿದರು.

Share this article