ಅಂಕೋಲಾ: ಜಿಲ್ಲೆಯ ಐತಿಹಾಸಿಕ ಪುಟದಲ್ಲಿ ಪ್ರೇಮಾ ಪಿಕಳೆ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಗ್ರಗಣ್ಯವಾದದ್ದು. ತಮ್ಮ ಬದುಕನ್ನು ಸವೆಸಿ ಶಿಕ್ಷಣ ಸಂಸ್ಥೆ ಹುಟ್ಟುಹಾಕಿ ಸಂಸ್ಥೆಯನ್ನು ಬೆಳೆಸಲು ಅಹರ್ನಿಶಿ ಶ್ರಮಿಸಿದ್ದಾರೆ. ಅವರ ಶಿಷ್ಯವೃಂದ ಪ್ರೇಮಾ ಪಿಕಳೆ ಅವರ ಪುತ್ಥಳಿಯನ್ನು ನಿರ್ಮಿಸಿ ಅವರ ಹೆಸರನ್ನು ಅಜರಾಮರವಾಗಿಸಿದ್ದಾರೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತಿಳಿಸಿದರು.ಕೆಎಲ್ಇ ಸಂಸ್ಥೆಯಲ್ಲಿ ಪ್ರೇಮಾ ತಾಯಿ ಪಿಕಳೆ ಶಿಷ್ಯವೃಂದ ನಿರ್ಮಿಸಿದ ಪ್ರೇಮಾ ತಾಯಿ ಪಿಕಳೆಯವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿ, ಉತ್ತರ ಕನ್ನಡ ಬುದ್ಧಿವಂತರ ಜಿಲ್ಲೆ ಆಗಿದ್ದು, ನಮ್ಮ ಸಂಸ್ಥೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡುತ್ತಿದೆ. ಹಾಗೆ ಪಿಕಳೆ ದಂಪತಿಗಳ ನಂಬಿಕೆಯನ್ನು ಉಳಿಸಿಕೊಳ್ಳುವ ಕಾರ್ಯ ಸದಾ ಮಾಡುತ್ತೇವೆ ಎಂದರು.ಶಾಸಕ ಸತೀಶ ಸೈಲ್ ಮಾತನಾಡಿ, ಶಿಕ್ಷಣದಿಂದ ವಂಚಿತರಾಗಿದ್ದ ಸಮಯದಲ್ಲಿ ಸಂಸ್ಥೆ ಕಟ್ಟಿ ಅಪಾರ ಜನರಿಗೆ ಶಿಕ್ಷಣ ಒದಗಿಸಿದ ಕೀರ್ತಿ ಪ್ರೇಮಾತಾಯಿ ಪಿಕಳೆ ಅವರಿಗೆ ಸಲ್ಲುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಕಾರ್ಯದರ್ಶಿ ಡಾ. ಡಿ.ಎಲ್. ಭಟ್ಕಳ ಅವರು ಕೆಎಲ್ಇ ಸಂಸ್ಥೆಯೊಂದಿಗೆ ಎನ್ಎಸ್ಎಸ್ ಟ್ರಸ್ಟ್ ಅನ್ನು ಪ್ರೇಮಾ ಪಿಕಳೆ ದಂಪತಿಗಳು ವಿಲೀನಗೊಳಿಸಿದ ನಂತರ ಸಂಸ್ಥೆ ಅಪಾರ ಹಣವನ್ನು ವ್ಯಯಿಸಿ, ಸುಧಾರಿಸಿ ಅಜರಾಮರವಾಗಿ ಉಳಿಯುವಂತೆ ಡಾ. ಪ್ರಭಾಕರ ಕೋರೆಯವರ ಸಾರಥ್ಯದಲ್ಲಿ ನಡೆದಿದೆ ಎಂದರು.ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಮಾತನಾಡಿದರು. ಬಿಇಡಿ ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪಿಕಳೆ ಶಿಷ್ಯವೃಂದದ ಅಧ್ಯಕ್ಷ ನಾರಾಯಣ ನಾಯಕ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಎಂ.ಎಂ. ಕರ್ಕೀಕರ, ಸಂಯೋಜಕ ಆರ್. ನಟರಾಜ ಉಪಸ್ಥಿತರಿದ್ದರು. ಶಿಕ್ಷಕ ರಾಜೇಶ ನಾಯಕ ನಿರೂಪಿಸಿದರು. ಶಿಕ್ಷಕ ದೇವರಾಯ ನಾಯಕ ವಂದಿಸಿದರು.