ಸಂದೀಪ್ ವಾಗ್ಲೆ
ಕರಾವಳಿಯಲ್ಲಿ ಹೀಟ್ ವೇವ್ ಅವಧಿಪೂರ್ವದಲ್ಲೇ ಕಾಣಿಸಿಕೊಂಡು ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ಈಗಾಗಲೇ ದಾಖಲಾಗಿದೆ. ಇದರೊಂದಿಗೆ ಕರಾವಳಿಯುದ್ದಕ್ಕೂ ನೈಸರ್ಗಿಕ ರಕ್ಷಣಾ ಗೋಡೆಯಾಗಿ, ನಾಡಿಗೆ ನೀರಿನ ಮೂಲದ ಅಕ್ಷಯ ಪಾತ್ರೆಯಾಗಿರುವ ಪಶ್ಚಿಮಘಟ್ಟದಲ್ಲಿ ಈ ವರ್ಷ ಅವಧಿ ಪೂರ್ವದಲ್ಲೇ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಮುಂದಿನ 3 ತಿಂಗಳ ಕಡು ಬೇಸಗೆಯುದ್ದಕ್ಕೂ ನಿತ್ಯ ಹರಿದ್ವರ್ಣದ ಅರಣ್ಯಕ್ಕೆ ಕಾಡ್ಗಿಚ್ಚು ಭಾರೀ ಅಪಾಯ ತಂದೊಡ್ಡುವ ಎಲ್ಲ ಸಾಧ್ಯತೆಗಳಿವೆ.
ಪಶ್ಚಿಮಘಟ್ಟದಲ್ಲಿ ಕಳೆದ ಆರೇಳು ವರ್ಷಗಳಿಂದ ಹಿಂದೆಂದೂ ಕಾಣದಂತಹ ಭೂಕುಸಿತಗಳು, ಮೇಘಸ್ಫೋಟಗಳು ಸಂಭವಿಸಿ ಜನರ, ಪ್ರಾಣಿ, ಸಸ್ಯಸಂಕುಲಕ್ಕೆ ಅಪಾರ ಹಾನಿ ಆಗುತ್ತಲೇ ಇವೆ. ಮಳೆಗಾಲದ ಭೂಕುಸಿತಕ್ಕೂ, ಬೇಸಿಗೆಯ ಕಾಡ್ಗಿಚ್ಚಿಗೂ ನೇರ ಸಂಬಂಧ ಇದೆ ಎಂದು ಪರಿಸರ ತಜ್ಞರು ಹೇಳುತ್ತಾರೆ. ನಾಡಿನ ನೆಲ- ಜಲ-ಜೀವಸಂಕುಲಕ್ಕೆ ಇಷ್ಟು ದೊಡ್ಡ ಕಂಟಕ ಎದುರಾಗಿರುವಾಗ ಕಾಡ್ಗಿಚ್ಚನ್ನು ನಿಯಂತ್ರಿಸಲು ಹೆಲಿಕಾಪ್ಟರ್‌ನಂತಹ ಅತ್ಯಾಧುನಿಕ ವ್ಯವಸ್ಥೆ ಜಾರಿಗೊಳಿಸುವ ದಶಕದ ಬೇಡಿಕೆ ಮಾತ್ರ ಈಡೇರಿಲ್ಲ.ಅವಧಿಪೂರ್ವ ಕಾಡ್ಗಿಚ್ಚು:
ಅತ್ಯಾಧುನಿಕ ಉಪಕರಣಗಳೇ ಇಲ್ಲ!:
ವಿದೇಶಗಳಲ್ಲಾದರೆ ಅರಣ್ಯಕ್ಕೆ ಬೆಂಕಿ ಬಿದ್ದ ಕೂಡಲೇ ಹೆಲಿಕಾಪ್ಟರ್ ಮೂಲಕ ತಕ್ಷಣ ಸ್ಥಳಕ್ಕೆ ತೆರಳಿ ನಂದಿಸುವ ವ್ಯವಸ್ಥೆ ಇದೆ. ನಮ್ಮ ರಾಜ್ಯದಲ್ಲಿ ಪ್ರತಿವರ್ಷ ಇಷ್ಟು ದೊಡ್ಡ ಅನಾಹುತಗಳು ಕಣ್ಮುಂದೆಯೇ ನಡೆಯುತ್ತಿರುವಾಗ ಅತ್ಯಾಧುನಿಕ ವ್ಯವಸ್ಥೆಗಳನ್ನು ಕಲ್ಪಿಸುವ ಜರೂರತ್ತಿದೆ ಎಂದು ಪರಿಸರವಾದಿ ಹೋರಾಟಗಾರ ದಿನೇಶ್ ಹೊಳ್ಳ ಆಗ್ರಹಿಸುತ್ತಾರೆ.
ಪಶ್ಚಿಮಘಟ್ಟದಲ್ಲಿ ಕಾಣಿಸುವ ಬೆಂಕಿ ಅನಾಹುತಗಳೆಲ್ಲವೂ ಮಾನವ ನಿರ್ಮಿತ. ಘಟ್ಟಪ್ರದೇಶದುದ್ದಕ್ಕೂ ಅವ್ಯಾಹತವಾಗಿರುವ ರೆಸಾರ್ಟ್‌ಗಳು, ಬೃಹತ್ ಎಸ್ಟೇಟ್‌ನವರು, ಟ್ರಕ್ಕಿಂಗ್ ಹೋಗುವವರ ರಾತ್ರಿ ಕ್ಯಾಂಪ್ ಫೈರ್ ಇತ್ಯಾದಿಗಳಿಂದಲೇ ಹೆಚ್ಚು ಕಾಡ್ಗಿಚ್ಚು ಸೃಷ್ಟಿಯಾಗುತ್ತಿದೆ. ಇದನ್ನೆಲ್ಲ ತಡೆಗಟ್ಟಬೇಕಾದರೆ ಪಶ್ಚಿಮಘಟ್ಟದಲ್ಲಿ ಕನಿಷ್ಠ ಪಕ್ಷ ಬೇಸಿಗೆಯ ಅವಧಿಯಲ್ಲಾದರೂ ಮಾನವನ ಹಸ್ತಕ್ಷೇಪವನ್ನು ಸಂಪೂರ್ಣ ನಿಲ್ಲಿಸಬೇಕು. ಮಾನವನಿಗೆ ಅರಣ್ಯ ಪ್ರವೇಶವನ್ನೇ ನಿಷೇಧಿಸಬೇಕು ಎನ್ನುತ್ತಾರೆ ದಿನೇಶ್ ಹೊಳ್ಳ.
ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಶೋಲಾರಣ್ಯದ ಮೇಲ್ಭಾಗದಲ್ಲಿರುವ ಅತಿ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಸುಟ್ಟು ಹೋಗುತ್ತದೆ. ಮಳೆ ಬಿದ್ದ ಕೂಡಲೆ ಹುಲ್ಲುಗಾವಲಿಗೆ ನೀರು ಹಿಡಿದಿಡುವ ಶಕ್ತಿ ಕುಂಠಿತಗೊಂಡು ಇಂಥ ಅನಾಹುತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಪರಿಸರವಾದಿ ದಿನೇಶ್ ಹೊಳ್ಳ.