ಗ್ರೇಟರ್‌ ಬೆಂಗಳೂರು ಅಥಾರಿಟಿ ಸ್ಥಾಪನೆಗೆ ಸಿದ್ಧತೆ

KannadaprabhaNewsNetwork | Updated : Jul 09 2024, 05:21 AM IST

ಸಾರಾಂಶ

‘ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ, ಯೋಜನೆ ಮತ್ತು ಹಣಕಾಸು ನಿರ್ವಹಣೆಗೆ ಹಾಲಿ ಇರುವ ಬಿಬಿಎಂಪಿ ಬದಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಬೃಹತ್‌ ಬೆಂಗಳೂರು ಪ್ರಾಧಿಕಾರ’ (ಗ್ರೇಟರ್‌ ಬೆಂಗಳೂರು ಅಥಾರಿಟಿ) ಎಂಬ ಉನ್ನತ ಸಂಸ್ಥೆ ರಚಿಸುವುದು.

 ಬೆಂಗಳೂರು ;  ‘ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ, ಯೋಜನೆ ಮತ್ತು ಹಣಕಾಸು ನಿರ್ವಹಣೆಗೆ ಹಾಲಿ ಇರುವ ಬಿಬಿಎಂಪಿ ಬದಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಬೃಹತ್‌ ಬೆಂಗಳೂರು ಪ್ರಾಧಿಕಾರ’ (ಗ್ರೇಟರ್‌ ಬೆಂಗಳೂರು ಅಥಾರಿಟಿ) ಎಂಬ ಉನ್ನತ ಸಂಸ್ಥೆ ರಚಿಸುವುದು. ಅದರಡಿ ಬಿಬಿಎಂಪಿ ವಿಭಜಿಸಿ ಒಂದಕ್ಕಿಂತ ಹೆಚ್ಚು ಪಾಲಿಕೆಗಳನ್ನು ಸ್ಥಾಪಿಸುವುದು. ಪ್ರತಿ ಪಾಲಿಕೆಯಡಿ ಒಂದಷ್ಟು ವಾರ್ಡುಗಳ ವ್ಯವಸ್ಥೆ ಜಾರಿಗೆ ತರುವುದು.ಇದು, ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ನೇತೃತ್ವದ ಬಿಬಿಎಂಪಿ ಸುಧಾರಣಾ ಸಮಿತಿಯು ಬೆಂಗಳೂರಿಗೆ ಒಟ್ಟು 3 ಸ್ಥರದ ಹೊಸ ಆಡಳಿತ ವ್ಯವಸ್ಥೆಯನ್ನು ಅಳವಡಿಸಲು ಕರಡು ಮಸೂದೆಯನ್ನು ಒಳಗೊಂಡಂತೆ ಸರ್ಕಾರಕ್ಕೆ ಸಲ್ಲಿಸಿರುವ ‘ಬೆಂಗಳೂರು ಪುನರ್‌ ರಚನಾ ವರದಿ’ಯ ಪ್ರಮುಖ ಅಂಶಗಳು.

ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ ಹಾಗೂ ಹಿಂದಿನ ಬೆಂಗಳೂರು ಅಜೆಂಡಾ ಟಾಸ್ಕ್ ಪೋರ್ಸ್‌ನ ಸದಸ್ಯ ರವಿಚಂದರ್‌ ಅವರನ್ನು ಒಳಗೊಂಡ ಸಮಿತಿಯು ಸೋಮವಾರ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ವಿಧಾನಸೌಧದಲ್ಲಿ ತನ್ನ ವರದಿ ಸಲ್ಲಿಸಿತು.

ಹಾಲಿ ಬಿಬಿಎಂಪಿಯನ್ನು ಅಸ್ಥಿತರಗೊಳಿಸಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಸಂಪೂರ್ಣ ಹಿಡಿತವನ್ನು ಒಳಗೊಂಡ ಮೂರು ಸ್ಥರದ ಹೊಸ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವ ಅಂಶಗಳನ್ನು ಕರಡು ಮಸೂದೆಯ ವರದಿಯಲ್ಲಿ ಅಳವಡಿಸಲಾಗಿದೆ. ಈ ಪ್ರಾಧಿಕಾರದ ವ್ಯಾಪ್ತಿಗೆ ಈಗಿನ ಬಿಬಿಎಂಪಿಯ 250 ಚ.ಕಿ.ಮೀ. ವ್ಯಾಪ್ತಿಯಲ್ಲದೆ ಎಂದು ಮೂಲಗಳು ಖಚಿತಪಡಿಸಿವೆ.

ಆ ಪ್ರಕಾರ, ಬೆಂಗಳೂರಿನ ಆಡಳಿತ ನಿರ್ವಹಣೆಗೆ ಈಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಬದಲು ‘ಬೃಹತ್‌ ಬೆಂಗಳೂರು ಪ್ರಾಧಿಕಾರ’(ಜಿಬಿಎ) ರಚಿಸುವುದು. ಬೆಂಗಳೂರಿನ ಅಭಿವೃದ್ಧಿ ಯೋಜನೆಗಳು ಮತ್ತು ಹಣಕಾಸು ನಿರ್ವಹಣೆಯಲ್ಲಿ ಉನ್ನತ ಅಧಿಕಾರ ಹೊಂದಿರುವ ಈ ಪ್ರಾಧಿಕಾರಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಎರಡನೇ ಹಂತದಲ್ಲಿ ಈ ಪ್ರಾಧಿಕಾರದ ಅಡಿಯಲ್ಲಿ ಬಿಬಿಎಂಪಿಯನ್ನು ವಿಭಜಿಸಿ ಸರ್ಕಾರ ರಚಿಸುವ ಹೊಸ ಪಾಲಿಕೆಗಳು ಇರಲಿವೆ. ಪ್ರತಿ ಪಾಲಿಕೆಗೂ ಪ್ರತ್ಯೇಕ ಮೇಯರ್‌, ಉಪಮೇಯರ್‌ ಸೇರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಆಡಳಿತ ವ್ಯವಸ್ಥೆ ಇರುತ್ತದೆ.

ಈಗಾಗಲೇ ಬಿಬಿಎಂಪಿ ಹಾಲಿ ಇರುವ 198 ವಾರ್ಡುಗಳನ್ನು 400 ವಾರ್ಡುಗಳಾಗಿ ಪುನಾರಚಿಸಬೇಕು. ನಿರ್ಧಿಷ್ಟ ವಾರ್ಡುಗಳಿಗೆ ಒಂದು ಪಾಲಿಕೆಯಂತೆ ಹೊಸದಾಗಿ ಮೂರು ಅಥವಾ ಐದು ಪಾಲಿಕೆಗನ್ನು ರಚಿಸಬೇಕೆಂದು ಈ ಹಿಂದೆಯೇ ತಜ್ಞರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹಾಗಾಗಿ ಜಿಬಿಎ ಅಡಿ ಎಷ್ಟು ಪಾಲಿಕೆಗಳನ್ನು ರಚಿಸಬೇಕೆಂಬುದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಮೂರನೇ ಹಂತದಲ್ಲಿ ಹಾಲಿ ಇರುವಂತೆಯೇ ವಾರ್ಡ್‌ ಮಟ್ಟದ ಆಡಳಿತ ವ್ಯವಸ್ಥೆ ಇರುತ್ತದೆ. ಇಲ್ಲಿ ಕಾರ್ಪೊರೇಟರ್‌, ವಾರ್ಡ್‌ ಮಟ್ಟದ ಅಧಿಕಾರಿಗಳು ಇರುತ್ತಾರೆ ಎಂದು ತಿಳಿದು ಬಂದಿದೆ.

ವಿಭಜಿತ ಪಾಲಿಕೆಗಳ ಮೇಯರ್‌, ಶಾಸಕರಿಗೆ ಜಿಬಿಎ ಸದಸ್ಯತ್ವ:

ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹೊಸದಾಗಿ ರಚಿಸಲಾಗುವ ಪಾಲಿಕೆಗಳ ಮೇಯರ್‌ಗಳು, ಆಯ್ದ ಕಾರ್ಪೊರೇಟರ್‌ಗಳು, ಬೆಂಗಳೂರಿನ ಎಲ್ಲಾ ಶಾಸಕರು ಮತ್ತು ನಗರಾಭಿವೃದ್ಧಿ ತಜ್ಞರು ಸದಸ್ಯರಾಗಿರುತ್ತಾರೆ. ಜೊತೆಗೆ ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಬಿಡಿಎ, ನಮ್ಮ ಮೆಟ್ರೋ, ಸಂಚಾರ ಸೇರಿದಂತೆ ಬೆಂಗಳೂರು ವ್ಯಾಪ್ತಿಯ ಇತರೆ ಸಂಸ್ಥೆಗಳನ್ನು ಈ ಪ್ರಾಧಿಕಾರದ ಅಡಿಯಲ್ಲೇ ತರಲಾಗುತ್ತದೆ. ಮಾಹಿತಿ ಪ್ರಕಾರ, ಬಿಡಿಎಗೆ ಬೃಹತ್‌ ಮೇಲ್ಸೇತುವೆ, ರಸ್ತೆ, ಬಡಾವಣೆಗಳ ನಿರ್ಮಾಣ ಸೇರಿದಂತೆ ದೊಡ್ಡ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ಭೂ ಬಳಕೆ ಮತ್ತು ಯೋಜನೆಗಳನ್ನು ಅನುಮೋದಿಸಲು ಇದ್ದ ಅಧಿಕಾರ ಇನ್ನು ಮುಂದೆ ಹೊಸ ಪ್ರಾಧಿಕಾರಕ್ಕೆ ವರ್ಗಾವಣೆಯಾಗಲಿದೆ ಎನ್ನಲಾಗಿದೆ.

250 ಚದರ ಅಡಿಯಷ್ಟು ಸುತ್ತಳತೆ ವಿಸ್ತೀರ್ಣ: ಎಲ್ಲಕ್ಕಿಂತ ಮಿಗಿಲಾಗಿ ಈಗಿರುವ ಬಿಬಿಎಂಪಿಯ ಸುಮಾರು 708 ಚದರ ಕಿ.ಮೀ ಸುತ್ತಳತೆಯ ಭೂ ಭಾಗದಿಂದಾಚೆಗೆ ಆಧ್ಯತೆ ಮೇಲೆ ಇನ್ನೂ 250 ಚದರ ಕಿ.ಮೀನಷ್ಟು ಪ್ರದೇಶಗಳನ್ನು ಬೃಹತ್‌ ಬೆಂಗಳೂರು ಪ್ರಾಧಿಕಾರದ ಎಲ್ಲೆಯೊಳಗೆ ತರಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ವಿಸ್ತರಣೆಗೊಳ್ಳುವ ಭೂ ಪ್ರದೇಶದ ವ್ಯಾಪ್ತಿಯ ಆಟೀರಿಯಲ್‌, ಸಬ್‌ ಆರ್ಟೀರಿಯಲ್‌ ರಸ್ತೆಗಳು, ಮಳೆನೀರು ಚರಂಡಿಗಳು ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಅವುಗಳ ಗಡಿಗಳಿಗೆ ಅನುಗುನವಾಗಿ ಮರು ಹಂಚಿಕೆ ಮಾಡಲಾಗುತ್ತದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ.

 

Share this article