ಸಂಭ್ರಮ, ಸಡಗರದ ದೀಪಾವಳಿ ಆಚರಣೆಗೆ ಸಿದ್ಧತೆ

KannadaprabhaNewsNetwork | Published : Nov 1, 2024 1:17 AM

ಸಾರಾಂಶ

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ಆಚರಣೆಗೆ ಬೆಣ್ಣೆ ನಗರಿ ಜನರು ಭರ್ಜರಿ ಸಿದ್ಧತೆ ನಡೆಸಿದ್ದು, ಗುರುವಾರ ಸಂಜೆ ಲಕ್ಷ್ಮಿ ಪೂಜೆ ಮಾಡುವವರು ಸಹಾ ಇದ್ದ ಕಾರಣ ಗುರುವಾರ ಮುಂಜಾನೆಯಿಂದಲೇ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು. ಗುರುವಾರ ಸಂಜೆ ಕೆಲವರು ದೀಪಾವಳಿ ಅಮವಾಸ್ಯೆ ಪೂಜೆ ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ಆಚರಣೆಗೆ ಬೆಣ್ಣೆ ನಗರಿ ಜನರು ಭರ್ಜರಿ ಸಿದ್ಧತೆ ನಡೆಸಿದ್ದು, ಗುರುವಾರ ಸಂಜೆ ಲಕ್ಷ್ಮಿ ಪೂಜೆ ಮಾಡುವವರು ಸಹಾ ಇದ್ದ ಕಾರಣ ಗುರುವಾರ ಮುಂಜಾನೆಯಿಂದಲೇ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು. ಗುರುವಾರ ಸಂಜೆ ಕೆಲವರು ದೀಪಾವಳಿ ಅಮವಾಸ್ಯೆ ಪೂಜೆ ಮಾಡಿದರು. ಜನದಟ್ಟಣೆಯಿಂದ ಕೂಡಿದ್ದ ಮಾರುಕಟ್ಟೆ:ದೀಪಾವಳಿ ಅಂಗವಾಗಿ ಇಲ್ಲಿನ ಕೆ.ಆರ್. ಮಾರುಕಟ್ಟೆ, ಕಾಯಿಪೇಟೆ, ಗಡಿಯಾರ ಕಂಬ, ಮಂಡಿ ಪೇಟೆ, ಚಾಮರಾಜಪೇಟೆ, ಬಕ್ಕೇಶ್ವರ ದೇವಸ್ಥಾನ ರಸ್ತೆ, ನಿಟ್ಟುವಳ್ಳಿ, ಎಸ್.ಎಸ್.ಬಡಾವಣೆ ಗಡಿಯಾರ ಕಂಬ ವೃತ್ತ, ಕಾಳಿಕಾದೇವಿ ರಸ್ತೆ, ದೊಡ್ಡ ಪೇಟೆ, ಹಳೇ ಆರ್‌ಟಿಓ ರಸ್ತೆ, ಆರ್.ಎಚ್. ಛತ್ರ ಸುತ್ತಮುತ್ತ, ದುಗ್ಗಮ್ಮ ದೇವಸ್ಥಾನ ಹತ್ತಿರ, ರಿಂಗ್ ರೋಡ್ ಸರ್ಕಲ್, ಪ್ರವಾಸಿ ಮಂದಿರ ರಸ್ತೆ, ಪಿ.ಬಿ. ರಸ್ತೆ ಸೇರಿದಂತೆ ಮಾರುಕಟ್ಟೆ ಪ್ರದೇಶಗಳ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಜನಸ್ತೋಮ ಕಂಡುಬಂತು. ಹೂವು, ಹಣ್ಣು, ಹಣತೆ, ಅಲಂಕಾರಿಕ ವಸ್ತುಗಳು ಮತ್ತು ಪಟಾಕಿ ಖರೀದಿಯಲ್ಲಿ ಜನರು ನಿರತರಾಗಿದ್ದರು.ಕಣ್ಮಣ ಸೆಳೆಯುತ್ತಿದ್ದ ರಂಗು ರಂಗಿನ ಆಕಾಶಬುಟ್ಟಿ :

ಗಾತ್ರಕ್ಕೆ ಅನುಗುಣವಾಗಿ ಬಣ್ಣ ಬಣ್ಣದ ಆಕಾಶ ಬುಟ್ಟಿಗಳು ಮಾರಾಟಕ್ಕಿದ್ದವು. ₹100 ರಿಂದ 450 ರವರೆಗೆ ಬೆಲೆ ಹೊಂದಿದ್ದ ನಕ್ಷತ್ರ ಮಾದರಿ, ಕಂದಿಲು ಆಕಾರದ ಆಕಾಶ ಬುಟ್ಟಿಗಳು, ಕೋಮಲ್ ಡಿಸೈನ್, ಗುಲಾಬ್ ರಂಗೀಲಾ, ಚಂದ್ರನ ಆಕಾರದ ಆಕಾಶ ಬುಟ್ಟಿ. ಖರೀದಿದಾರರನ್ನು ಆಕರ್ಷಿಸುತ್ತಿದ್ದವು. ಪ್ರತಿವರ್ಷದಂತೆ ಈ ವರ್ಷವೂ ಮಣ್ಣಿನ ದೀಪಕ್ಕೆ ಭಾರಿ ಬೇಡಿಕೆ ಇತ್ತು. ವಿವಿಧ ಮಾದರಿಯಲ್ಲಿ ಮಾರುಕಟ್ಟೆಗೆ ಬಂದಿರುವ ಮಣ್ಣಿನ ದೀಪ, ಬಣ್ಣ ಬಣ್ಣದ ಕ್ಯಾಂಡಲ್‌ಗಳನ್ನು ಜನರು ಖರೀದಿಸುತ್ತಿದ್ದರು. ವಿವಿಧ ಮಣ್ಣಿನ ಹಣತೆ ಜೋಡಿಗೆ ರೂ. 50 ಆದರೆ, ಡಜನ್ 150 ರೂ. ಇತ್ತು. ನಗರದ ಮಾರುಕಟ್ಟೆಯಲ್ಲಿನ ಬಟ್ಟೆ ಅಂಗಡಿಗಳು ಮತ್ತು ಫ್ಯಾನ್ಸಿ ಸ್ಟೋರ್‌ಗಳು, ಅಲಂಕಾರಿಕ ವಸ್ತುಗಳ ಅಂಗಡಿಗಳು ಜನಸಂದಣಿಯಿಂದ ಕೂಡಿದ್ದವು. ತಮ್ಮ ಕುಟುಂಬಗಳಿಗೆ ಬಟ್ಟೆ ಸೇರಿ ಇತರ ವಸ್ತುಗಳನ್ನು ಸಾರ್ವಜನಿಕರು ಖರೀದಿಸುತ್ತಿದ್ದರು. ಕಿರಾಣಿ ಅಂಗಡಿಗಳಲ್ಲಿ ಜನರಿದ್ದರು. ಸಂಭ್ರಮ ಸಡಗರದ ದೀಪಾವಳಿ ಹಬ್ಬದ ಆಚರಣೆಗೆ ದಾವಣಗೆರೆ ಸಜ್ಜಾಗಿದೆ. ಹಬ್ಬದ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ಇದ್ದ ಕಾರಣ ಮಕ್ಕಳು ಸಂತೋಷದಿಂದ ತಂದೆ ತಾಯಿಯರೊಂದಿಗೆ ಖರೀದಿಯಲ್ಲಿ ತೊಡಗಿದ್ದರು.

ಪಟಾಕಿ ಖರೀದಿಯಲ್ಲಿ ಜನರು :

ಜಿಲ್ಲಾಡಳಿತದ ಆದೇಶದಂತೆ ಇಲ್ಲಿನ ಸರ್ಕಾರಿ ಬಾಲಕರ ಶಾಲೆ ಮೈದಾನದಲ್ಲಿ 74 ಪಟಾಕಿ ಮಳಿಗೆಗಳು ವ್ಯಾಪಾರ ಮಾಡುತ್ತಿದ್ದು, ಪಟಾಕಿ ಮಳಿಗೆಗಳ ಬಳಿ ಅವಘಡ ಸಂಭವಿಸದಂತೆ ಮುಂಜಾಗ್ರತೆ ವಹಿಸಲಾಗಿತ್ತು. ಪ್ರತಿ ಪಟಾಕಿ ಅಂಗಡಿಗಳ ಮುಂದೆ ಅಗ್ನಿಶಮನ ಉಪಕರಣಗಳು, ಸಾಕಷ್ಟು ಗಾಳಿ, ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು, ಆಗ್ನಿ ಶಾಮಕ ದಳದ ಸಿಬ್ಬಂದಿಗಳಿದ್ದರು. ತೆರಿಗೆ ಇಲಾಖೆ, ಪರಿಸರ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದರು.

ಗ್ರಾಹಕರಿಗೆ ಹಣ್ಣು, ಹೂವು ದರ ಏರಿಕೆ ಬಿಸಿಒಂದು ಕೆ.ಜಿ. ಸೇಬಿಗೆ ₹150, ದ್ರಾಕ್ಷಿ ₹ 200, ದಾಳಿಂಬೆ ₹200, ಸಪೋಟ ₹100, ಸೀತಾ ಫಲ ₹100, ಡಜನ್ ಬಾಳೆ ಹಣ್ಣಿಗೆ ₹60-80, ಕಿತ್ತಲೆ ಹಣ್ಣು ₹80, ಮೋಸಂಬಿ ₹100 ದರ ನಿಗದಿಯಾಗಿತ್ತು. ಇನ್ನು ಪೂಜೆಗೆ ಬೇಕಾದ ನಿಂಬೆಹಣ್ಣಿ ₹20ಗೆ 5 ರಂತೆ ಇದ್ದು, ಎಲ್ಲಾ ಹಣ್ಣಿನ ಪ್ಯಾಕೇಜ್ ಒಂದು ಕೆಜಿಗೆ ₹150 ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಇನ್ನೂ ಮಾರು ಚೆಂಡು ಹೂವು ₹ 60, ಮಲ್ಲಿಗೆ ₹150 ರಿಂದ 200, ಕನಕಾಂಬರ ₹200, ಹೂವಿನ ಹಾರ ಅವುಗಳ ಅಳತೆಗೆ ತಕ್ಕಂತೆ ₹50 ರಿಂದ 200 ಮಾರಾಟಮಾಡಲಾಗುತ್ತಿತ್ತು. ಮಹಾಲಿಂಗನ ಬಳ್ಳಿ, ಬಾಳೆ ಕಂಬ, ಮಾವಿನ ಸೊಪ್ಪು ₹20 ದರವಿತ್ತು. ಮಾರುಕಟ್ಟೆಯಲ್ಲಿ ದಸರಾ ಹಬ್ಬಕ್ಕಿಂತ ಈ ಬಾರಿ ಹಣ್ಣುಗಳ ಬೆಲೆ ತುಸು ಜಾಸ್ತಿಯಾಗಿದ್ದು ಕಂಡು ಬಂದಿತು.

ಗ್ರಾಹಕರು ಪಟಾಕಿ ಖರೀದಿಗೆ ಮುಂದಾಗಿದ್ದಾರೆ. ವ್ಯಾಪಾರ ಚೆನ್ನಾಗಿದೆ. ಮಳೆ ಬಾರದೇ ಇದ್ದರೆ ಚೆನ್ನಾಗಿರುತ್ತದೆ. ನಾಳೆಯೂ ಉತ್ತಮ ವಹಿವಾಟು ಆಗುವ ನಿರೀಕ್ಷೆ ಇದೆ. ಎಲ್ಲಾ ರೀತಿಯ ಪಟಾಕಿಗಳು ಇರುವ ಗಿಫ್ಟ್ ಪ್ಯಾಕ್‌ನ ಬೆಲೆ ₹400 ರಿಂದ 3000ವರೆಗೆ ಇದೆ. ಅದರಲ್ಲಿ 21 ರಿಂದ 110 ವಿವಿಧ ರೀತಿಯ ಪಟಾಕಿಗಳಿವೆ. ಜಿಲ್ಲೆಯಲ್ಲಿ ಸುಮಾರು ₹4.50 ಕೋಟಿಯಿಂದ 6.50 ಕೋಟಿಯಷ್ಟು ಮೌಲ್ಯದ ಪಟಾಕಿ ಮಾರುಕಟ್ಟೆಯಲ್ಲಿದೆ.- ಪಿ.ಸಿ. ಶ್ರೀನಿವಾಸ ಅಧ್ಯಕ್ಷ, ಜಿಲ್ಲಾ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘ ದಾವಣಗೆರೆ

Share this article